ADVERTISEMENT

ಕೋಳಿವಾಡರ ಲೆಕ್ಕಾಚಾರ ಬುಡಮೇಲು

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 15:29 IST
Last Updated 9 ಡಿಸೆಂಬರ್ 2019, 15:29 IST

ರಾಣೆಬೆನ್ನೂರು: ವಿಧಾನಸಭಾ ಸ್ಪೀಕರ್ ರಮೇಶಕುಮಾರ್‌ 15 ಶಾಸಕರನ್ನು ಅನರ್ಹಗೊಳಿಸುತ್ತಲೇ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಬಂದೇ ಬರುತ್ತದೆ ಎಂಬ ಭವಿಷ್ಯವನ್ನು ಕೆ.ಬಿ.ಕೋಳಿವಾಡ ನುಡಿದಿದ್ದರು. ಅದರಂತೆ ಪುತ್ರ ಪ್ರಕಾಶ್‌ ಕೋಳಿವಾಡಗೆ ಟಿಕೆಟ್‌ ಕೊಡಿಸಿ ಶಾಸಕರನ್ನಾಗಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.

ಆದರೆ, ಕಾಂಗ್ರೆಸ್ ಹೈಕಮಾಂಡ್ ಕೆ.ಬಿ.ಕೋಳಿವಾಡ ಅವರಿಗೆ ಟಿಕೆಟ್ ನೀಡಿತ್ತು. ಅದರಂತೆ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಆರಂಭಿಸಿದ್ದರು. ‘ಇದು ನನ್ನ ಕೊನೆ ಚುನಾವಣೆ, ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ. ವಯಸ್ಸಾಗಿದೆ ಗೆದ್ದು ನಿವೃತ್ತಿ ಹೊಂದುತ್ತೇನೆ’ ಎಂದು ಮತ ಸೆಳೆಯಲು ಪ್ರಯತ್ನಿಸಿದ್ದರು.

ಆಂತರಿಕ ಭಿನ್ನಾಭಿಪ್ರಾಯದಿಂದ 2018ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೇಲಗಾರ ಸೋಲು ಅನುಭವಿಸಬೇಕಾಯಿತು. 2019 ಉಪಚುನಾವಣೆಗೂ ಡಾ.ಕೇಲಗಾರ ನಾನು ಕಳೆದ ಚುನಾವಣೆಯಲ್ಲಿ 50 ಸಾವಿರ ಮತಗಳನ್ನು ಪಡೆದಿದ್ದೇನೆ. ನನಗೆ ಟಿಕೆಟ್ ನೀಡಿ ಎಂದು ಪೈಪೋಟಿ ನಡೆಸಿದ್ದರು. ಬಳಿಕ ಟಿಕೆಟ್‌ ಬಿಜೆಪಿ ಹೈಕಮಾಂಡ್‌ ಅರುಣಕುಮಾರಗೆ ಟಿಕೆಟ್‌ ನೀಡಿತು.

ADVERTISEMENT

ಹಿಂದಿನ ಚುನಾವಣೆಯಲ್ಲಿ ಆರ್‌.ಶಂಕರ್ 60 ಸಾವಿರಕ್ಕೂ ಹೆಚ್ಚು ಮತ ಪಡೆದು ಗೆಲುವಿನ ನಗೆ ಬೀರಿದ್ದರು. ಅವರು ‘ಅನರ್ಹ’ ಶಾಸಕ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕಾರಣ, ಮತದಾರರು ಸಿಟ್ಟಿಗೆದ್ದಿದ್ದರು. ಇದರಿಂದಶಂಕರ್‌ ಬೆಂಬಲಿಗರು ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ. ಕೆಪಿಜೆಪಿ ಕೆಲ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡಯಾಗಿದ್ದರಿಂದ ಕೋಳಿವಾಡರು ನನ್ನ ಗೆಲುವಾಗಿದೆ ಎಂಬ ಭ್ರಮೆಯಲ್ಲಿ ತೇಲಿ ಹೋಗಿದ್ದರು.

ಕಾಂಗ್ರೆಸ್‌ನಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತ್ರ ಪ್ರಚಾರಕ್ಕೆ ಮೆರುಗು ನೀಡಿದ್ದರು. ಆದರೆ, ಇನ್ನಿತರ ಕಾಂಗ್ರೆಸ್‌ ಮುಖಂಡರು ಪ್ರಚಾರಕ್ಕೆ ಆಗಮಿಸಿದಿರುವುದಕ್ಕೆ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದರು. ಬಳಿಕ ಶಾಸಕ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿಯ ಪ್ರಚಾರಕ್ಕೆ ಧಾವಿಸಿ ಅನರ್ಹರಿಗೆ ಪಾಠ ಕಲಿಸುವಂತೆ ಮತದಾರಿಗೆ ಮನವಿ ಮಾಡಿದ್ದರು.

ಕ್ಷೇತ್ರದಲ್ಲಿ ಅರುಣಕುಮಾರ ಪೂಜಾರ ಯಾರಿಗೂ ಗೊತ್ತೇ ಇಲ್ಲ. ಮತ್ತೆ ಬಿಜೆಪಿ ಅಭ್ಯರ್ಥಿ ಸೋಲು ಖಚಿತ. ಆತನ ಮೇಲೆ ಕ್ರಿಮಿನಲ್ ದೂರುಗಳು ದಾಖಲಾಗಿವೆ ಎಂದು ಕೆಲವು ಬಿಜೆಪಿ ಮುಖಂಡರೇ ಪಿಸುಗುಟ್ಟುತ್ತಿದ್ದರು. ಆಗ ಬಿಜೆಪಿ ಹೈಕಮಾಂಡ್‌ ಎಲ್ಲರನ್ನೂ ಒಟ್ಟುಗೂಡಿಸಿ ಒಮ್ಮತದಿಂದ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಸೂಚಿಸಿತು.

ಆರ್‌.ಶಂಕರ್ ಕೂಡ ಮುಖ್ಯಮಂತ್ರಿ ಬಿಎಸ್‌ವೈ ಬಲಪಡಿಸಲು ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಬಾರಿ ಕೆಪಿಜೆಪಿ ಪಕ್ಷದ ಎಲ್ಲರೂ ನಮ್ಮ ಜೊತೆ ಇದ್ದಾರೆ. ಯಾರೂ ಕಾಂಗ್ರೆಸ್‌ನ ಕೋಳಿವಾಡ ಕಡೆ ಹೋಗಿಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಭರವಸೆ ನೀಡಿದ್ದರು. ಪ್ರಚಾರದಿಂದ ದೂರ ಉಳಿದಿದ್ದ ಡಾ.ಬಸವರಾಜ ಕೇಲಗಾರ ಅವರನ್ನು ಸಚಿವರು, ಸಂಸದರು ಮನವೊಲಿಸಿ ಪ್ರಚಾರಕ್ಕೆ ಕರೆತಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣೆ ಬಹಿರಂಗ ಪ್ರಚಾರದ ಭಾಷಣದಲ್ಲಿ ಆರ್‌.ಶಂಕರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತ್ಯಾಗ ಮಾಡಿದ್ದಾರೆ. ಅವರನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡುತ್ತೇವೆ. ಡಾ.ಬಿ.ಎಸ್‌.ಕೇಲಗಾರ ಅವರನ್ನು ಗೌರವದಿಂದ ಕಾಣುತ್ತೇವೆ ಎಂದು ಭರವಸೆ ನೀಡಿದ್ದರು.

ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ತಾಲ್ಲೂಕನ್ನಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಘೋಷಣೆ ಮಾಡಿದ್ದರು. ನೇಕಾರ ಮತ್ತು ಕುರುಬ ಸಮಾಜಕ್ಕೆ ಬಿಜೆಪಿ ನೀಡಿದ ಕೊಡುಗೆಯನ್ನು ಮತದಾರರಲ್ಲಿ ಮನದಟ್ಟು ಮಾಡಿ ಮತ ಬೇಟೆಯಾಡಿದರು.

ತುಮ್ಮಿನಕಟ್ಟಿ ಮತ್ತು ಮೇಡ್ಲೇರಿ ಗ್ರಾಮದಲ್ಲಿ ಬೃಹತ್ ಸಭೆ ಮಾಡಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಇಡೀ ಸರ್ಕಾರವೇ ನಿಂತಿತ್ತು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದರು, ಶಾಸಕರು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿ ಅಬ್ಬರದ ಪ್ರಚಾರ ನಡೆಸಿ ಬಿಜೆಪಿಯನ್ನು ಗೆಲುವಿನತ್ತ ಕೊಂಡೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.