ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ ಫೆ.11,12ರಂದು

ಸಮ್ಮೇಳನಾಧ್ಯಕ್ಷರ ದಿಬ್ಬಣ, ವೈವಿಧ್ಯಮಯ ಗೋಷ್ಠಿಗಳು, ಸಾಂಸ್ಕೃತಿಕ ಕಲರವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 16:09 IST
Last Updated 8 ಫೆಬ್ರುವರಿ 2024, 16:09 IST
ಸಾಹಿತ್ಯ ಸಮ್ಮೇಳನದ ಲಾಂಛನ 
ಸಾಹಿತ್ಯ ಸಮ್ಮೇಳನದ ಲಾಂಛನ    

ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಫೆ.11 ಮತ್ತು 12ರಂದು ರಾಣೆಬೆನ್ನೂರಿನ ಎಪಿಎಂಸಿ ಸಮುದಾಯ ಭವನದಲ್ಲಿ ಜಿಲ್ಲಾಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಸಮುದಾಯ ಭವನದಲ್ಲಿ ನಿರ್ಮಿಸಿದ ನಿಜಶರಣ ಅಂಬಿಗರ ಚೌಡಯ್ಯ, ಹೆಳವನಕಟ್ಟೆ ಗಿರಿಯಮ್ಮ, ಹಾನಗಲ್ಲ ಕುಮಾರ ಶಿವಯೋಗಿಗಳ ಪ್ರಧಾನ ವೇದಿಕೆಯಲ್ಲಿ ಸಮಾರಂಭ ಜರುಗಲಿದೆ ಎಂದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ:

ADVERTISEMENT

ಫೆ.11ರಂದು ಭಾನುವಾರ ಬೆಳಗ್ಗೆ 7.30ಕ್ಕೆ ಧ್ವಜಾರೋಹಣ, 8 ಗಂಟೆಗೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ವೇದಿಕೆವರೆಗೆ ಸಮ್ಮೇಳನಾಧ್ಯಕ್ಷ ಜಿ.ಎಂ.ಮಠದ ಅವರ ಮೆರವಣಿಗೆ ಜರುಗಲಿದೆ. ನಂತರ ಸಮ್ಮೇಳನದ ಉದ್ಘಾಟನೆ ಸಮಾರಂಭ ಜರುಗಲಿದ್ದು, ಕಸಾಪ ಅಧ್ಯಕ್ಷ ಮಹೇಶ ಜೋಶಿ ಉದ್ಘಾಟನೆ ನೆರವೇರಿಸುವರು ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಬಸವರಾಜ ಶಿವಣ್ಣನವರ, ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್‌, ಶಾಸಕ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಯು.ಬಿ.ಬಣಕಾರ, ಶ್ರೀನಿವಾಸ ಮಾನೆ, ವಿಧಾನ ಪರಿಷತ್‌ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್ ಅವರು ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸುವರು. ಚಿಕ್ಕಮಗಳೂರಿನ ಸಾಹಿತಿ ಎಚ್.ಎಸ್. ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡುವರು ಎಂದು ತಿಳಿಸಿದರು.

9 ಗೋಷ್ಠಿಗಳು:

ಒಟ್ಟು 9 ಗೋಷ್ಠಿಗಳು ಸಮ್ಮೇಳನದಲ್ಲಿ ಜರುಗಲಿವೆ. ಮಧ್ಯಾಹ್ನ 1 ಗಂಟೆಗೆ ಕನ್ನಡ-ಕರ್ನಾಟಕ-ವೈಭವ ಗೋಷ್ಠಿ, ಮಧ್ಯಾಹ್ನ 2.30ಕ್ಕೆ ಜಿಲ್ಲೆಯ ಗತ-ವೈಭವ ಗೋಷ್ಠಿ, ಸಂಜೆ 4.30ಕ್ಕೆ ಸಮ್ಮೇಳನಾಧ್ಯಕ್ಷರ ಜೀವನ-ಸಾಧನೆ ಗೋಷ್ಠಿ, 5 ಗಂಟೆಗೆ ಕವಿಗಳ ಕಲರವ ಗೋಷ್ಠಿ ನಡೆಯಲಿವೆ. ರಾತ್ರಿ 7 ಗಂಟೆಗೆ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಜರುಗಲಿದ್ದು, ವಿವಿಧ ಕಲಾ ತಂಡದವರು ನೃತ್ಯ, ಭರತನಾಟ್ಯ ಪ್ರದರ್ಶನ ಮಾಡಲಿದ್ದಾರೆ ಎಂದರು.

ಫೆ.12ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಚಿಣ್ಣರ ಚಿಲಿಪಿಲಿ ಗೋಷ್ಠಿ, ಬೆಳಗ್ಗೆ10.30ಕ್ಕೆ ನಾರಿಶಕ್ತಿ-ಧೀಶಕ್ತಿ ಗೋಷ್ಠಿ, ಮಧ್ಯಾಹ್ನ 12 ಗಂಟೆಗೆ ದಮನಿತರ ಆಸ್ಮಿತೆ ಗೋಷ್ಠಿ, 1.30ಕ್ಕೆ ವೈವಿಧ್ಯ ಗೋಷ್ಠಿ, 3.30ಕ್ಕೆ ಕೃಷಿ ಸೌರಭ ಗೋಷ್ಠಿ ಜರುಗಲಿವೆ. ಸಂಜೆ 4.30ಕ್ಕೆ ಬಹಿರಂಗ ಅಧಿವೇಶನ ಜರುಗಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸುವರು. ತಾಲೂಕು ಅಧ್ಯಕ್ಷ ವೀರೇಶ ಜಂಬಗಿ ನಿರ್ಣಯ ಮಂಡಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡ್ರ, ಕಸಾಪ ತಾಲ್ಲೂಕು ಕಾರ್ಯದರ್ಶಿ ವೀರಣ್ಣ ಬೆಳವಡಿ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಭು ಹಿಟ್ನಳ್ಳಿ, ಕಸಾಪ ಸದಸ್ಯ ಪೃಥ್ವಿರಾಜ ಬೇಟಗೇರಿ ಇದ್ದರು.

ಲಿಂಗಯ್ಯ ಹಿರೇಮಠ

ಸಾಹಿತ್ಯ ಸಮ್ಮೇಳನದಲ್ಲಿ ವೈವಿಧ್ಯಮಯ ಗೋಷ್ಠಿಗಳಿಗೆ ಆದ್ಯತೆ ನೀಡಿದ್ದೇವೆ. ಚಿಣ್ಣರ ಚಿಲಿಪಿಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಸಾಹಿತ್ಯ ಪ್ರೇಮಿಗಳಿಗೆ ಮುದ ನೀಡಲಿದೆ

– ಲಿಂಗಯ್ಯ ಹಿರೇಮಠ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾವೇರಿ

ಸಮಾರೋಪ ಸಮಾರಂಭ

ಫೆ.12ರಂದು  ಫೆ.12ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷತೆ ವಹಿಸುವರು. ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ ಸಮಾರೋಪ ನುಡಿಗಳನ್ನಾಡುವರು. ರಾತ್ರಿ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.