ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ತಾಲ್ಲೂಕು ಕೇಂದ್ರ ರಟ್ಟೀಹಳ್ಳಿಯಿಂದ 3 ಕಿ.ಮೀ ದೂರದಲ್ಲಿರುವ ಕವಳಿಕುಪ್ಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯು ವಿದ್ಯಾರ್ಥಿಗಳ ಕೊರತೆ ಕಾರಣ ಮೂರು ವರ್ಷಗಳಿಂದ ಬಾಗಿಲು ತೆರೆದಿಲ್ಲ. 1 ರಿಂದ 5ನೇ ತರಗತಿಯವರೆಗೆ ಬರುವ ಮಕ್ಕಳು ಇಲ್ಲದಿದ್ದರಿಂದ, ಶಾಲಾ ಕಟ್ಟಡಗಳೂ ಪಾಳು ಬಿದ್ದಿವೆ.
ದಾಖಾಲಾತಿಗಾಗಿ ನಿರಂತರ ಜಾಗೃತಿ ಮೂಡಿಸಿದರೂ 2021–22ರಿಂದ ಮಕ್ಕಳು ಶಾಲೆಗೆ ಪ್ರವೇಶ ಪಡೆದಿಲ್ಲ. ಈ ಕಾರಣ ಶಿಕ್ಷಣ ಇಲಾಖೆಯವರು ಶಾಲೆ ಬಾಗಿಲಿಗೆ ಬೀಗ ಹಾಕಿದ್ದು ಅಲ್ಲದೇ ಕರ್ತವ್ಯದಲ್ಲಿದ್ದ ಇಬ್ಬರು ಶಿಕ್ಷಕರನ್ನು ಬೇರೆಡೆ ನಿಯೋಜಿಸಿತು. ಮೂರು ವರ್ಷದಿಂದ ಶಾಲೆಯು ಚಟುವಟಿಕೆಯಿಲ್ಲದೇ ಬಂದ್ ಆಗಿದೆ.
ಮಕ್ಕಳು ಇರದ ಕಾರಣ 2017-18ರಲ್ಲೂ ಶಾಲೆ ಬಂದ್ ಮಾಡಲಾಗಿತ್ತು. ಆದರೆ, 2018–19ರಲ್ಲಿ 4 ಮಕ್ಕಳು ಪ್ರವೇಶ ಪಡೆದಿದ್ದರಿಂದ ಶಾಲೆ ಪುನಃ ಆರಂಭವಾಯಿತು. ಆದರೆ, 2021-22ರಿಂದ ಶಾಲೆಗೆ ಮಕ್ಕಳು ಬರಲಿಲ್ಲ.
‘ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ, ಕಲಿಕೋಪಕರಣ, ಕಂಪ್ಯೂಟರ್ ಸೇರಿ ಎಲ್ಲಾ ಸೌಲಭ್ಯಗಳನ್ನು ಶಾಲೆ ಹೊಂದಿತ್ತು. ದಾಖಲಾತಿ ಇಲ್ಲದ್ದಕ್ಕೆ ಅಂಗನವಾಡಿ ಕೇಂದ್ರವವನ್ನೂ ರಟ್ಟೀಹಳ್ಳಿಗೆ ಈಗಾಗಲೇ ವರ್ಗಾಯಿಸಲಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದರು.
‘ಕವಳಿಕುಪ್ಪಿ ಗ್ರಾಮದಲ್ಲಿ ಅಂದಾಜು 40 ಮನೆಗಳಿದ್ದು, 150 ಜನಸಂಖ್ಯೆಯಿದೆ. ಗ್ರಾಮದ ಮಕ್ಕಳಿಗಾಗಿ ಶಾಲೆ ಆರಂಭಿಸಲಾಗಿತ್ತು. ಇಲ್ಲಿ ಐದನೇ ತರಗತಿಯವರೆಗೆ ಓದುವ ಮಕ್ಕಳು, ಮುಂದಿನ ಶಿಕ್ಷಣಕ್ಕೆ ರಟ್ಟೀಹಳ್ಳಿ ಅಥವಾ ಅಕ್ಕಪಕ್ಕದ ಗ್ರಾಮಗಳಿಗೆ ಹೋಗುತ್ತಾರೆ. ಕವಳಿಕುಪ್ಪಿ ಅಕ್ಕ–ಪಕ್ಕದ ಗ್ರಾಮಗಳಲ್ಲೂ ಶಾಲೆಗಳಿವೆ. ಹೀಗಾಗಿ, ಅಲ್ಲಿಯ ಮಕ್ಕಳು ನಮ್ಮ ಶಾಲೆಗೆ ಬರುವುದಿಲ್ಲ’ ಎಂದು ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ರಾಜಶೇಖರಯ್ಯ ಹುಲಗಿನಕಟ್ಟಿ ತಿಳಿಸಿದರು.
ಮಕ್ಕಳ ದಾಖಲಾತಿಯಿಲ್ಲದ್ದಕ್ಕೆ ಮೂರು ವರ್ಷಗಳಿಂದ ಕವಳಿಕುಪ್ಪಿಯ ಸರ್ಕಾರಿ ಶಾಲೆ ಮುಚ್ಚಲಾಗಿದೆ. ಶಾಲೆಯ ಕಟ್ಟಡವನ್ನು ಸರ್ಕಾರಿ ಉದ್ದೇಶಕ್ಕೆ ಬಳಸಲು ಬೇರೆ ಇಲಾಖೆಯವರು ಕೋರಿದರೆ ಕೊಡಲಾಗುವುದು.ಎನ್. ಶ್ರೀಧರ್ ಕ್ಷೇತ್ರ ಶಿಕ್ಷಣಾಧಿಕಾರಿ ರಟ್ಟೀಹಳ್ಳಿ
ಮಂಟೂರ: 77 ಮಕ್ಕಳಿದ್ದರೂ ಪ್ರೌಢಶಾಲೆ ಇಲ್ಲ ಆನಂದ ಮನ್ನಿಕೇರಿ ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಂಟೂರ ಗ್ರಾಮದಲ್ಲಿ 77 ವಿದ್ಯಾರ್ಥಿಗಳಿದ್ದರೂ ಪ್ರೌಢಶಾಲೆ ಇಲ್ಲ. ಪ್ರೌಢಶಿಕ್ಷಣಕ್ಕೆ ಮಕ್ಕಳು 6 ಕಿ.ಮೀ. ದೂರದ ನಿಪನಾಳ ಗ್ರಾಮಕ್ಕೆ ಅಲೆಯಬೇಕಿದೆ. ಗ್ರಾಮಕ್ಕೆ ಒಂದು ಪ್ರೌಢಶಾಲೆ ಮಂಜೂರು ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ದೂರು. ಮಂಟೂರಿನಲ್ಲಿ ಎರಡು ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಒಂದು ಖಾಸಗಿ ಪ್ರಾಥಮಿಕ ಶಾಲೆ ಇದೆ. 1ರಿಂದ 8ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಸಿಗುತ್ತಿದೆ. ಈ ವರ್ಷ 8ನೇ ತರಗತಿ ಮುಗಿಸಿದ 77 ಮಕ್ಕಳಿದ್ದಾರೆ. ಅವರಲ್ಲಿ 38 ಬಾಲಕಿಯರು ಮತ್ತು 39 ಬಾಲಕರು ಇದ್ದಾರೆ. ‘ಬಾಲಕರು ಹಾಸ್ಟೆಲ್ ಅಥವಾ ಸಂಬಂಧಿಕರ ಮನೆಯಲ್ಲಿ ಉಳಿದು ಪ್ರೌಢಶಾಲೆ ಸೇರುತ್ತಾರೆ. ಬಾಲಕಿಯರಿಗೆ ಕಷ್ಟ. ತಾಲ್ಲೂಕು ಕೇಂದ್ರವಾದ ರಾಯಬಾಗದಲ್ಲಿ ಮಾತ್ರ ಮಹಿಳಾ ವಸತಿ ನಿಲಯ ಇದೆ. ಅದು 25 ಕಿ.ಮೀ ದೂರ. ಅಲ್ಲಿಗೆ ಕಳುಹಿಸಲು ಪಾಲಕರು ಒಪ್ಪುತ್ತಿಲ್ಲ. ಹೀಗಾಗಿ ಬಾಲಕಿಯರು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಪಾಲಕರೊಂದಿಗೆ ದಿನಗೂಲಿ ಕೆಲಸಕ್ಕೆ ಹೋಗುತ್ತಾರೆ. ಮತ್ತೆ ಕೆಲವರಿಗೆ ಬೇಗನೇ ಮದುವೆ ಮಾಡಲಾಗುತ್ತದೆ’ ಎಂದು ಶಿಕ್ಷಕರು ತಿಳಿಸಿದರು. ‘ನಿಪನಾಳ ಗ್ರಾಮ 6 ಕಿ.ಮೀ ದೂರವಿದ್ದು ಅಲ್ಲಿ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಬಸ್‌ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ’ ಎಂದು ಬಾಲಕರು ಹೇಳಿದರು. ಶಾಲೆ ಮಂಜೂರಾತಿಗೆ ಪ್ರಯತ್ನ: ‘ಮಂಟೂರ ಗ್ರಾಮದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದೆ. ಇದನ್ನು ಆಧರಿಸಿ ಸರ್ಕಾರಿ ಪ್ರೌಢ ಶಾಲೆ ಮಂಜೂರಾತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು’ ಎಂದು ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಬಸವರಾಜಪ್ಪ ‘ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.