ADVERTISEMENT

ಬಿಜೆಪಿ ಮಹಾಪ್ರಚಾರ ಅಭಿಯಾನ ಇಂದು, ನಾಳೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 8:39 IST
Last Updated 24 ಏಪ್ರಿಲ್ 2023, 8:39 IST
ಸಂಸದ ಶಿವಕುಮಾರ ಉದಾಸಿ ಮಾತನಾಡಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿದರು.   

ಹಾವೇರಿ: ಬಿಜೆಪಿ ವತಿಯಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಏ.25 ಮತ್ತು 26ರಂದು ‘ವಿಶೇಷ ಮಹಾಪ್ರಚಾರ ಅಭಿಯಾನ’ ನಡೆಯಲಿದೆ. ಈ ಅಭಿಯಾನದಲ್ಲಿ 98 ಕೇಂದ್ರ ಸಚಿವರು, ರಾಷ್ಟ್ರೀಯ ನಾಯಕರು, 150ಕ್ಕೂ ಹೆಚ್ಚು ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಭಿಯಾನದ ಅಂಗವಾಗಿ ಪತ್ರಿಕಾಗೋಷ್ಠಿ, ರೋಡ್‌ ಶೋ, ಸಾರ್ವಜನಿಕ ಸಭೆ, ಮನೆ–ಮನೆ ಸಂಪರ್ಕ ಮೂಲಕ ಮತ ಯಾಚನೆ, ಸ್ಥಳೀಯ ಪ್ರತಿಮೆಗಳಿಗೆ ಮಾಲಾರ್ಪಣೆ, ದೇವಸ್ಥಾನ, ಮಠ, ಮಂದಿರಗಳಿಗೆ ಭೇಟಿ ಹಾಗೂ ಸಾರ್ವಜನಿಕರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುವ ದೃಢ ವಿಶ್ವಾಸವಿದೆ ಎಂದರು.

ಅಭಿಯಾನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಧರ್ಮೇಂದ್ರ ಪ್ರಧಾನ್‌, ನಿರ್ಮಲಾ ಸೀತಾರಾಮನ್‌, ಮನ್ಸುಖ್‌ ಮಾಂಡ್ವಿಯಾ, ರಾಜ್ಯ ಚುನಾವಣಾ ಸಹ– ಉಸ್ತುವಾರಿ ಕೆ.ಅಣ್ಣಾಮಲೈ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್‌.ಯಡಿಯೂರಪ್ಪ, ಸದಾನಂದ ಗೌಡ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಹಾಗೂ ಸಚಿವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

75 ಹೊಸ ಮುಖಗಳು: ಪಕ್ಷವು ಸಾಮಾನ್ಯ ಜನರ ಭಾವನೆ, ಒಡನಾಟಕ್ಕೆ ಸಂಬಂಧಿಸಿದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದೆ. ಈ ಬಾರಿ ಬಿಜೆಪಿ ಟಿಕೆಟ್‌ ಹಂಚಿಕೆಯಲ್ಲಿ 9 ವೈದ್ಯರು, ಐಪಿಎಸ್‌, ಐಎಎಸ್‌ ಆದ ತಲಾ ಒಬ್ಬರನ್ನು ಆಯ್ಕೆ ಮಾಡಿದ್ದೇವೆ. 75ಕ್ಕೂ ಹೆಚ್ಚು ಹೊಸ ಮುಖಗಳು ಮೊದಲ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. 12 ಮಹಿಳೆಯರಿಗೂ ಆದ್ಯತೆ ನೀಡಿದ್ದೇವೆ ಎಂದರು.

ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್‌: ಮಾರುಕಟ್ಟೆಯಲ್ಲಿ ಉತ್ಪನ್ನದ ಮೇಲೆ ಗ್ಯಾರಂಟಿ, ವಾರಂಟಿ ಕೊಡುವುದು ಜನರಿಗೆ ಆ ಉತ್ಪನ್ನದ ಬಗ್ಗೆ ವಿಶ್ವಾಸ ಇಲ್ಲದಿದ್ದಾಗ. ಅದೇ ರೀತಿ ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಹಂಚುತ್ತಿದೆ. ‘ಜನರ ವಿಶ್ವಾಸ– ವಿಕಾಸವೇ’ ನಮ್ಮ ಗ್ಯಾರಂಟಿ ಕಾರ್ಡ್‌. ನಾವು ಅಭಿವೃದ್ಧಿಯ ಕಾರ್ಡ್‌ ಹಿಡಿದು ಜನರ ಮುಂದೆ ಮತ ಯಾಚಿಸುತ್ತಿದ್ದೇವೆ ಎಂದರು.

ರಾಹುಲ್‌ಗೆ ಸ್ವಾಗತ: ರಾಹುಲ್‌ ಗಾಂಧಿ ಬಂದ ಕಡೆಯೆಲ್ಲ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೀಗಾಗಿ ನನ್ನ ಲೋಕಸಭಾ ಕ್ಷೇತ್ರವಾದ ಗದಗ–ಹಾವೇರಿಗೆ ಬರುತ್ತಿರುವ ರಾಹುಲ್‌ ಗಾಂಧಿ ಅವರಿಗೆ ಹಾರ್ದಿಕ ಸ್ವಾಗತವನ್ನು ಕೋರುತ್ತೇನೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಸಂಸದ ಶಿವಕುಮಾರ ಉದಾಸಿ ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ್‌, ರುದ್ರೇಶ ಚಿನ್ನಣ್ಣನವರ್‌, ಗಿರೀಶ ತುಪ್ಪದ, ಶಶಿಧರ ಹೊಸಳ್ಳಿ, ಪ್ರಭು ಹಿಟ್ನಳ್ಳಿ, ಕಿರಣ್‌ ಕೋಣನವರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.