ರಾಣೆಬೆನ್ನೂರು ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಈ ಬಹುಕೋನ ಸ್ಪರ್ಧೆಯಲ್ಲಿ ಪ್ರಬಲ ಅಭ್ಯರ್ಥಿಗಳಾದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕೋಳಿವಾಡ ಮತ್ತು ಪಕ್ಷೇತರ ಅಭ್ಯರ್ಥಿ ಸಂತೋಷಕುಮಾರ ಪಾಟೀಲ ಅವರೊಂದಿಗೆ ಕ್ಷೇತ್ರದ ಅಭಿವೃದ್ಧಿ ಮತ್ತು ಚುನಾವಣೆ ಕುರಿತು ಸಿದ್ದು ಆರ್.ಜಿ.ಹಳ್ಳಿ/ಮುಕ್ತೇಶ್ವರ ಕೂರಗುಂದಮಠ ನಡೆಸಿದ ಸಂದರ್ಶನ ಇಲ್ಲಿದೆ.
ಪ್ರಕಾಶ ಕೋಳಿವಾಡ, ಕಾಂಗ್ರೆಸ್ ಅಭ್ಯರ್ಥಿ
5 ಸಾವಿರ ಉದ್ಯೋಗ ಸೃಷ್ಟಿಗೆ ಕ್ರಮ
* ಜನರು ಯಾವ ಕಾರಣಕ್ಕಾಗಿ ನಿಮಗೆ ಮತ ಹಾಕಬೇಕು?
ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಬಸ್ ನೆರವು, ಮೋಡ ಬಿತ್ತನೆ, ಉದ್ಯೋಗ ಮೇಳ, ರೈತರಿಗೆ ಡ್ರೋಣ್‌ನಿಂದ ಕ್ರಿಮಿನಾಶಕ ಸಿಂಪಡಣೆ ಪರಿಚಯ, ಆರೋಗ್ಯ ಮೇಳ, ಸಂಚಾರಿ ಆಸ್ಪತ್ರೆ, ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿಗಳನ್ನು ಜನ ಮೆಚ್ಚಿ ಮತ ನೀಡುತ್ತಾರೆ.
*ನೀವು ಶಾಸಕರಾಗಿ ಆಯ್ಕೆಯಾದರೆ, ಕ್ಷೇತ್ರಕ್ಕೆ ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು?
ನಿರುದ್ಯೋಗ ಮುಕ್ತ ರಾಣೆಬೆನ್ನೂರು ಮಾಡುವುದೇ ನನ್ನ ಗುರಿ. ತಾಲ್ಲೂಕಿನಲ್ಲಿ ಹತ್ತು ಕಂಪನಿಗಳನ್ನು ಸ್ಥಾಪಿಸಿ ಕನಿಷ್ಠ 5 ಸಾವಿರ ಉದ್ಯೋಗ ಸೃಷ್ಟಿಸುವುದು. ತುಂಗಭದ್ರಾ ನದಿಗೆ ಚೆಕ್ ಡ್ಯಾಂ ನಿರ್ಮಾಣ, ನೇಕಾರರಿಗೆ ಕೌಶಲ ಮತ್ತು ಮಾರುಕಟ್ಟೆ ವ್ಯವಸ್ಥೆ, ಹೊರ ವರ್ತುಲ ರಸ್ತೆ, ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡುವುದು ನನ್ನ ಗುರಿ.
* ಟಿಕೆಟ್ ವಂಚಿತ ಆಕಾಂಕ್ಷಿಗಳ ಬಂಡಾಯ ಶಮನವಾಗಿದೆಯೇ ?
ಒಟ್ಟು 6 ಆಕಾಂಕ್ಷಿಗಳು ಹೈಕಮಾಂಡ್‌ಗೆ ಅರ್ಜಿ ಸಲ್ಲಿಸಿದ್ದರು. ಅತೃಪ್ತರನ್ನು ಹೈಕಮಾಂಡ್ ಸಮಾಧಾನ ಪಡಿಸಿ ನನಗೆ ಪಕ್ಷ ಟಿಕೆಟ್ ನೀಡಿದೆ. ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷದ ಗೆಲವಿಗೆ ಶ್ರಮಿಸುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ.
* ನಿಮ್ಮ ತಂದೆಯವರ ಆಶೀರ್ವಾದದಿಂದ ನಿಮಗೆ ಟಿಕೆಟ್ ಸಿಕ್ಕಿದೆಯೋ? ಅಥವಾ ನಿಮ್ಮ ವೈಯಕ್ತಿಕ ಸಾಧನೆಯಿಂದಲೋ?
ಹೌದು, ನನ್ನ ತಂದೆಯವರು 50 ವರ್ಷಗಳಿಂದ ಪಕ್ಷ ನಿಷ್ಠೆಯಿಂದ ಕಾಂಗ್ರೆಸ್‌ನಲ್ಲಿದ್ದಾರೆ. ನಾನು ಕೂಡ 15 ವರ್ಷಗಳಿಂದ ಪಿ.ಕೆ.ಕೆ ಸಂಸ್ಥೆಯಿಂದ ಸಮಾಜ ಸೇವೆ ಮಾಡಿದ್ದೇನೆ. ರಾಷ್ಟ್ರಮಟ್ಟದಲ್ಲಿ ಪಕ್ಷದ ಸಂಘಟನೆಗೆ ದುಡಿದಿದ್ದೇನೆ. 8 ಉದ್ಯೋಗ ಮೇಳ ಮಾಡಿ 10 ಸಾವಿರ ಯುವಕರಿಗೆ ಉದ್ಯೋಗ ಮತ್ತು 43 ಸಾವಿರ ಕಾಂಗ್ರೆಸ್ ಸದಸ್ಯತ್ವ ಮಾಡಿಸಿದ್ದನ್ನು ಗಮನಿಸಿದ ವರಿಷ್ಠರು ನನಗೆ ಟಿಕೆಟ್ ನೀಡಿದ್ದಾರೆ.
* ಉದ್ಯೋಗ ಮೇಳ, ಸಾಂಸ್ಕೃತಿಕ, ಕ್ರೀಡೆ ಮತ್ತು ಆರೋಗ್ಯ ಶಿಬಿರ ಶಿಬಿರಗಳು ಮತ ಗಳಿಕೆಗೆ ಸಹಕಾರಿಯಾಗಿವೆಯೇ?
ಸಂಪೂರ್ಣ ಸಹಕಾರಿಯಾಗಿವೆ. ಉದ್ಯೋಗ ಮೇಳದಿಂದ 10 ಸಾವಿರ ಯುವಕ– ಯುವತಿಯರು ಆರ್ಥಿಕವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಆರೋಗ್ಯ ಮೇಳದಿಂದ ನೂರಾರು ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ಒದಗಿಸಲಾಗಿದೆ.
* ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳು ಜನರ ವಿಶ್ವಾಸ ಗಳಿಸಿವೆಯೇ?
ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 2014ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದಾಗ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಗ್ಯಾರಂಟಿ ಕಾರ್ಡಿನ ಎಲ್ಲ ಆಶ್ವಾಸನೆಗಳನ್ನು ಈಡೇರಿಸುತ್ತೇವೆ.
- ಸಂತೋಷಕುಮಾರ ಪಾಟೀಲ ಪಕ್ಷೇತರ ಅಭ್ಯರ್ಥಿ
80 ಅಂಶಗಳ ಕಾರ್ಯಕ್ರಮ ಅನುಷ್ಠಾನ
* ಜನರು ಯಾವ ಕಾರಣಕ್ಕೆ ನಿಮಗೆ ಮತ ಹಾಕಬೇಕು?
ರಾಣೆಬೆನ್ನೂರು ಇತಿಹಾಸದಲ್ಲಿ ಕ್ಷೇತ್ರಕ್ಕಾಗಿ ಏನೇನು ಮಾಡುತ್ತೇನೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಮೊದಲ ಅಭ್ಯರ್ಥಿ ನಾನು. 80 ಅಂಶಗಳ ಕಾರ್ಯಕ್ರಮ ಕೊಟ್ಟಿದ್ದೇನೆ. ಕನಿಷ್ಠ 50 ಕಾರ್ಯಕ್ರಮ ಅನುಷ್ಠಾನಗೊಳಿಸದಿದ್ದರೆ 2028ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಅಂತ ಈಗಾಗಲೇ ಘೋಷಣೆ ಮಾಡಿದ್ದೇನೆ.
* ಶಾಸಕರಾಗಿ ಆಯ್ಕೆಯಾದರೆ ಕ್ಷೇತ್ರಕ್ಕೆ ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು?
ರಾಣೆಬೆನ್ನೂರು ತಾಲ್ಲೂಕಿನಲ್ಲಿ ಉಂಟಾಗಿರುವ ಸವಳು ಮತ್ತು ಜೌಗು ಉಂಟಾಗಿರುವ ಹೊಲಗಳನ್ನು ಸರ್ಕಾರ ಮತ್ತು ರೈತರ ಸಹಯೋಗದಲ್ಲಿ ಸುಸ್ಥಿತಿಗೆ ತರುವುದು. ಶೇ 12 ಬಡ್ಡಿ ದರದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವುದು ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಿ ಅವರ ಸಬಲೀಕರಣಕ್ಕೆ ಆದ್ಯತೆ.
* ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತಾವು ಬಿಜೆಪಿ ಪಕ್ಷ ತೊರೆಯಬೇಕಾಯಿತು. ಇದಕ್ಕೆ ಕಾರಣವೇನು?
ಬಿಜೆಪಿಯ ಮೂಲ ಆಶಯ ರಾಷ್ಟ್ರೀಯತೆ. ಅದರ ಜೊತೆಗೆ ಹಿಂದೂ ಧಾರ್ಮಿಕ ಭಾವನೆ ಗೌರವಿಸುವುದು ಮತ್ತು ಕಾರ್ಯಕರ್ತರ ಆಶಯಕ್ಕೆ ಮನ್ನಣೆ ಕೊಟ್ಟು ಬಿಜೆಪಿ ಇಷ್ಟು ವರ್ಷ ಬೆಳೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ 25ಕ್ಕೂ ಹೆಚ್ಚು ಗುಡಿ ಗುಂಡಾರ ಕೆಡವಿ ವೋಟು ಹಾಕಿದರೆ ಅವುಗಳನ್ನು ಕಟ್ಟಿ ಕೊಡುತ್ತೇನೆ ಎಂದು ಬೆದರಿಸಲಾಯಿತು. ಮುದೇನೂರು ಮಠ ಒಡೆದು ಅವರ ಕುಟುಂಬಸ್ಥರಿಗೆ ತೊಂದರೆ ಕೊಡಲಾಯಿತು ಭಜರಂಗದಳದ ಕಾರ್ಯಕರ್ತರನ್ನು ರೌಡಿಶೀಟರ್‌ಗಳ ಪಟ್ಟಿಗೆ ಸೇರಿಸಲಾಯಿತು. ಈ ಪಾರುಪತ್ಯ ಮತ್ತು ದಬ್ಬಾಳಿಕೆಗಳ ಬೆಳವಣಿಗೆಗಳಿಂದ ನೊಂದು ಪಕ್ಷದಿಂದ ಹೊರಬರಬೇಕಾಯಿತು.
* ಬಿಜೆಪಿ ಟಿಕೆಟ್ ಕೈತಪ್ಪಲು ನಿಮ್ಮ ಮೇಲಿನ ಪ್ರಕರಣ ಮತ್ತು ನ್ಯಾಯಾಲಯದ ತೀರ್ಪು ಕಾರಣವಾಯ್ತಾ?
ರಾಣೆಬೆನ್ನೂರಿನ ಜೆಎಂಎಫ್‌ಸಿ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹಾವೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತರಲಾಗಿದೆ. ನನ್ನ ಮೇಲಿನ ಪ್ರಕರಣ ಚುನಾವಣೆಯಲ್ಲಿ ಸ್ಪರ್ಧಿಸಲು ತೊಡಕಾಗುವುದಿಲ್ಲ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿತ್ತು.
* ರಾಷ್ಟ್ರೀಯ ಪಕ್ಷಗಳ ಪ್ರಬಲ ಪೈಪೋಟಿಯನ್ನು ಪಕ್ಷೇತರ ಅಭ್ಯರ್ಥಿಯಾದ ತಾವು ಹೇಗೆ ಎದುರಿಸುತ್ತೀರಿ?
ರಾಷ್ಟ್ರೀಯ ಪಕ್ಷಗಳಿಗೆ ರಾಣೆಬೆನ್ನೂರಿನಲ್ಲಿ ಅಸ್ತಿತ್ವವೇ ಉಳಿದಿಲ್ಲ. ಇಲ್ಲಿ ಏನಿದ್ದರೂ ಜನಪರ ಚಿಂತನೆ ಇಟ್ಟುಕೊಂಡು ಹೋರಾಟ ಮಾಡುವವರಿಗೆ ಜನರು ಆಶೀರ್ವಾದ ಮಾಡುತ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಅಪೇಕ್ಷೆಗೆ ವಿರುದ್ಧವಾಗಿ ಅಭ್ಯರ್ಥಿಗಳನ್ನು ಹಾಕಿರುವುದರಿಂದ ಅವರಿಗೆ ತಕ್ಕ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.