ADVERTISEMENT

‘ಕೈ’ ಬಳಿ ಅಭಿವೃದ್ಧಿಗೆ ಹಣವಿಲ್ಲ; ಶಾಸಕರದ್ದು ಆತ್ಮಹತ್ಯೆ ಸ್ಥಿತಿ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 0:00 IST
Last Updated 7 ನವೆಂಬರ್ 2024, 0:00 IST
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಬುಧವಾರ ರೋಡ್ ಶೋ ನಡೆಸಿದರು
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಬುಧವಾರ ರೋಡ್ ಶೋ ನಡೆಸಿದರು   

ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಸಮೀಪಿಸಿದರೂ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ನೀಡಿಲ್ಲ. ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿರುವುದಾಗಿ ಕಾಂಗ್ರೆಸ್‌ನ ಶಾಸಕ ರಾಜು ಕಾಗೆ ಹೇಳುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಶಿಗ್ಗಾವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸವಣೂರು ಮತ್ತು ಬಂಕಾಪುರದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಪರ ಮತಯಾಚಿಸಿ ಮಾತನಾಡಿದ ಅವರು, ‘ಶಾಲಾ–ಕಾಲೇಜು, ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಬಳಿ ಹಣವಿಲ್ಲ. 15 ಬಜೆಟ್ ಮಂಡಿಸಿರುವುದಾಗಿ ಹೇಳುವ ಸಿದ್ದರಾಮಯ್ಯ, ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ನೀಡುತ್ತಿಲ್ಲ. ಸರ್ಕಾರವು ಎಲ್ಲವನ್ನೂ ದಿವಾಳಿ ಮಾಡುತ್ತಿದೆ’ ಎಂದರು.

‘ದೇಶದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ನರೇಂದ್ರ ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಟೀಕಿಸುತ್ತಾರೆ. ರೈತರು ಹಾಗೂ ಬಡವರ ಪರ ಹೋರಾಟ ನಡೆಸಿದ್ದ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆಯೂ ನಾಲಿಗೆ ಹರಿಬಿಡುತ್ತಾರೆ. ಮುಡಾ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು’ ಎಂದರು.

ADVERTISEMENT

ಅದೃಷ್ಟದ ಮುಖ್ಯಮಂತ್ರಿ ಸಿದ್ದರಾಮಯ್ಯ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು, ಬಡವರ ಪರ ಹೋರಾಟ ಮಾಡಿಲ್ಲ. ಅವರೊಬ್ಬ ಅದೃಷ್ಟದ ಮುಖ್ಯಮಂತ್ರಿ. ಆದರೆ, ಯಡಿಯೂರಪ್ಪ ಅವರು 30–40 ವರ್ಷಗಳ ಜನಪರ ಹೋರಾಟದ ಮೂಲಕವೇ ಮುಖ್ಯಮಂತ್ರಿಯಾಗಿದ್ದರು. ಸರ್ವಜನಾಂಗದ ಜನರಿಗಾಗಿ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಘೋಷಣೆಯೊಂದಿಗೆ ಆಡಳಿತ ನಡೆಸಿದರು’ ಎಂದು ವಿಜಯೇಂದ್ರ ಹೇಳಿದರು.

‘ದೇಶಕ್ಕೆ ಕರ್ನಾಟಕ ಮಾದರಿ ಎಂಬುದಾಗಿ ಸಿದ್ದರಾಮಯ್ಯ ಹೇಳುತ್ತಾರೆ. ಅವರಿಗೆ ನಾಚಿಕೆಯಾಗಬೇಕು. ಬೆಂಗಳೂರು, ದಾವಣಗೆರೆ ಸೇರಿ ಹಲವೆಡೆ ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ. ಅವರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಸಚಿವೆ ಲಕ್ಷ್ಮಿ ಹೆಬಾಳ್ಕರ್ ಪಿ.ಎ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

‘ಸಿದ್ದರಾಮಯ್ಯ ಹಾಗೂ ಕುಟುಂಬದವರು ಮುಡಾ ಹಗರಣ ಮಾಡಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಇರಿಸಿದ್ದ ಹಣವನ್ನು ಲೂಟಿ ಮಾಡಿ, ಲೋಕಸಭಾ ಚುನಾವಣೆಗೆ ಖರ್ಚು ಮಾಡಿದರು. ಈಗ ಮುಡಾ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ಸದ್ಯದಲ್ಲೇ ಮುಖ್ಯಮಂತ್ರಿಗೆ ಕ್ಲಿನ್‌ಚಿಟ್‌ ಕೊಡಲಿದೆ. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ಮಾಡುತ್ತಿದೆ. ಭ್ರಷ್ಟಾಚಾರದ ಮುಖವಾಡ ಹೊರಗೆ ಬೀಳುತ್ತಿದೆ’ ಎಂದು ವಿಜಯೇಂದ್ರ ತಿಳಿಸಿದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡರಿಗಿಲ್ಲ
ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
‘15000 ರೈತರ ಜಮೀನು ಕಬಳಿಸಲು ಹುನ್ನಾರ’
‘ವಕ್ಫ್ ಆಸ್ತಿ ಹೆಸರಿನಲ್ಲಿ ರಾಜ್ಯದಲ್ಲಿರುವ 15000 ರೈತರ ಜಮೀನು ಕಬಳಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸುತ್ತಿದೆ. ಒಂದಿಂಚು ಭೂಮಿ ಕಬಳಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ. ರೈತರ ಪರ ನಿಂತು ಹೋರಾಟ ಮಾಡುತ್ತೇವೆ’ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.