ADVERTISEMENT

ಹಾವೇರಿ: ವಿ.ವಿ ಬೆಳವಣಿಗೆಗೆ ಅನುದಾನ ನೀಡಿ

ಜಾನಪದ ವಿವಿ 5ನೇ ಘಟಿಕೋತ್ಸವ ಭಾಷಣದಲ್ಲಿ ಡಾ.ಆರ್‌.ಬಾಲಸುಬ್ರಹ್ಮಣ್ಯಂ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 17:00 IST
Last Updated 9 ಮಾರ್ಚ್ 2021, 17:00 IST
‘ಜನಪದ ಸಾಹಿತ್ಯ’ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಹುಸೇನ್‌ಸಾಬ್‌ ಪಿ. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತಸ ಹಂಚಿಕೊಂಡರು  –ಪ್ರಜಾವಾಣಿ ಚಿತ್ರ 
‘ಜನಪದ ಸಾಹಿತ್ಯ’ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಹುಸೇನ್‌ಸಾಬ್‌ ಪಿ. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತಸ ಹಂಚಿಕೊಂಡರು  –ಪ್ರಜಾವಾಣಿ ಚಿತ್ರ    

ಹಾವೇರಿ: ‘ಈ ನಾಡಿನ ಕೋಟ್ಯಂತರ ಜನರ ಬೆವರಿನ ಸಂಸ್ಕೃತಿಯ ಪ್ರತಿನಿಧಿಯಾಗಿರುವ ‘ಕರ್ನಾಟಕ ಜಾನಪದ ವಿಶ್ವವಿದ್ಯಾಲಯ’ಕ್ಕೆ ಸರ್ಕಾರ ಅಗತ್ಯವಾದ ಅನುದಾನ ನೀಡಬೇಕು. ದೂರದರ್ಶಿತ್ವ ಮತ್ತು ಬದ್ಧತೆಯಿಂದ ವಿಶ್ವವಿದ್ಯಾಲಯದ ಬೆಳವಣಿಗೆಗೆ ಕ್ರಿಯಾಯೋಜನೆ ರೂಪಿಸಬೇಕು’ ಎಂದು ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥಾಪಕ ಡಾ.ಆರ್‌.ಬಾಲಸುಬ್ರಹ್ಮಣ್ಯಂ ಒತ್ತಾಯಿಸಿದರು.

ಶಿಗ್ಗಾವಿ ತಾಲ್ಲೂಕುಗೊಟಗೋಡಿಯ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಐದನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ‘ಘಟಿಕೋತ್ಸವ ಭಾಷಣ’ ಮಾಡಿದರು.

ನಾಡಿನ ಜನಪದ ಸಂಸ್ಕೃತಿಯ ವಿರಾಟ್‌ ಸ್ವರೂಪವನ್ನು ಪರಿಚಯಿಸುವ ಹಾಗೂ ಅಧ್ಯಯನದ ಮೂಲಕ ಅದರ ಅಂತಃಸತ್ವವನ್ನು ತಿಳಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ಮಾಡಬೇಕು. ಜಾನಪದ ಸರ್ವೇಕ್ಷಣೆ ಮತ್ತು ದಾಖಲಾತಿ ಕಾರ್ಯ ಇನ್ನಷ್ಟು ನಡೆಯಬೇಕು. ಒಟ್ಟಾರೆ ಜಾಗತಿಕ ಪ್ರಸಿದ್ಧಿಗೆ ಅಗತ್ಯವಾದ ಎಲ್ಲ ನೆರವನ್ನು ಸರ್ಕಾರ ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ವಸ್ತುಸಂಗ್ರಹಾಲಯ ಸ್ಥಾಪನೆ:ಜಿಲ್ಲಾ ಮಟ್ಟದಲ್ಲಿ ಜಾನಪದ ಪರಿವೀಕ್ಷಣೆ ಹಾಗೂ ಸಂರಕ್ಷಣಾ ಕಾರ್ಯಗಳನ್ನು ವಿಶ್ವವಿದ್ಯಾಲಯ ನಡೆಸಬೇಕಿದೆ. ಆದ್ಯತೆ ಮೇರೆಗೆ ಜನಪದ ವಸ್ತುಸಂಗ್ರಹಾಲಯಗಳ ಸ್ಥಾಪನೆ, ಜಾನಪದ ತರಬೇತಿ ಶಿಬಿರಗಳು ಮತ್ತು ಕೇಂದ್ರಗಳನ್ನು ಸ್ಥಾಪಿಸುವುದು, ಜಾನಪದ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜಾನಪದವೇ ಜೀವನಶೈಲಿ:ಕೊರೊನಾ ಕಾಲಘಟ್ಟದಲ್ಲಿ ವಿಜ್ಞಾನ–ತಂತ್ರಜ್ಞಾನ, ಲಸಿಕೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಇವುಗಳೇ ಅಭಿವೃದ್ಧಿ ಎಂದು ಭಾವಿಸಬಾರದು. ದೇಸಿ ಚಿಂತನಾಕ್ರಮವೊಂದನ್ನು ಕಟ್ಟಲು ಆಯಾ ಜನಾಂಗಗಳ ಉಸಿರಾದ ಜಾನಪದದ ವರ್ಣ ವೈಭವವನ್ನು ಮಾಸಿ ಮರೆಯಾಗುವ ಮೊದಲೇ ನಾವು ಉಳಿಸಿಕೊಳ್ಳಬೇಕಿದೆ. ಜಾನ‍ಪದ ನಂಟು ಹೊಂದಿರುವವರಿಗೆ ‘ಮಾನಸಿಕ ಅನಾರೋಗ್ಯ’ದ ಬಾಧೆ ಕಾಡಲಿಲ್ಲ. ಜಾನಪದ ಎಂಬುದು ಜೀವನಶೈಲಿ ಎಂದು ಹೇಳಿದರು.

ಪಾರಂಪರಿಕ ಜ್ಞಾನ:ಕೊಠಡಿಗಳ ಒಳಗೆ ಸಂಶೋಧನೆ ನಡೆಸಲು ಸಾಧ್ಯವಿಲ್ಲ. ಗ್ರಾಮೀಣ ಮತ್ತು ಆದಿವಾಸಿ ಸಮುದಾಯ ನೆಲೆಸಿರುವ ಹಳ್ಳಿ, ಗುಡ್ಡಗಾಡು, ಕಾಡುಗಳಲ್ಲಿರುವ ಅಂತರ್ಗತವಾದ, ಪ್ರಕಾಶಿತಗೊಳ್ಳದ ಅಭಿವೃದ್ಧಿಯ ಜ್ಞಾನಭಂಡಾರವನ್ನು ಹೊರತರಬೇಕು. ಸಮುದಾಯಗಳ ಪಾರಂಪರಿಕ ಜ್ಞಾನವನ್ನು ವ್ಯವಸ್ಥಿತವಾಗಿ ಜೋಡಿಸಿ, ವೈಜ್ಞಾನಿಕ ದಾಖಲೀಕರಣ ಮಾಡಬೇಕಿದೆ ಎಂದರು.

ಜಗತ್ತಿನ ಆಧುನಿಕ ಬೆಳವಣಿಗೆಯ ಹೊಸ ಆಯಾಮದ ಹಿನ್ನೆಲೆಯಲ್ಲಿ ಮುಂದಿನ ಐದಾರು ವರ್ಷಗಳಲ್ಲಿ ಜಗತ್ತಿನಲ್ಲಿ ಸ್ಥಾಪಿತವಾದ ಬಹುಪಾಲು ವಿಶ್ವವಿದ್ಯಾಲಯಗಳು ಅಪ್ರಸ್ತುತವಾಗುತ್ತಿವೆ. ಐದು ಸಾವಿರ ವಿ.ವಿ.ಗಳ ಪೈಕಿ ಕೇವಲ 50 ವಿ.ವಿ.ಗಳು ಮಾತ್ರ ಉಳಿಯಬಲ್ಲವು ಎಂದು ಹೇಳಲಾಗುತ್ತಿದೆ. ನಮ್ಮ ಬದುಕಿಗೆ ಹತ್ತಿರವಾಗಬಲ್ಲ ಶಿಕ್ಷಣ ಕ್ರಮಗಳು, ವಿಶ್ವವಿದ್ಯಾಲಯಗಳು ಉಳಿಯಬಲ್ಲವು. ಈ ಆಯಾಮದಲ್ಲಿ ಜನಪದ ವಿಶ್ವವಿದ್ಯಾಲಯವು ಉಳಿಯಬಲ್ಲದು ಎಂದರು.

ಕುಲಸಚಿವ ಪ್ರೊ.ಕೆ.ಎನ್‌.ಗಂಗಾನಾಯಕ್‌ ಅವರು ಸ್ವಾಗತ ಭಾಷಣ ಮಾಡಿದರು. ಕುಲಪತಿ ಪ್ರೊ.ಡಿ.ಬಿ.ನಾಯಕ, ಕುಲಸಚಿವರಾದ ಪ್ರೊ.ಎನ್‌.ಎಂ.ಸಾಲಿ, ಸಿಂಡಿಕೇಟ್‌ ಸದಸ್ಯರು, ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.