ಹಾವೇರಿ: ‘ನಮಗಿರುವುದು ಒಂದೇ ಎಕರೆ ಕೃಷಿ ಭೂಮಿ. ಹೀಗಾಗಿ ನನ್ನ ತಂದೆ ರೈತನಾಗಿ ಮತ್ತು ಕೃಷಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಾರೆ. ತಂದೆ–ತಾಯಿಯ ಪರಿಶ್ರಮ ಮತ್ತು ತ್ಯಾಗದಿಂದ ಉನ್ನತ ಶಿಕ್ಷಣ ಪಡೆದು, ಚಿನ್ನದ ಪದಕ ಪಡೆಯಲು ಸಾಧ್ಯವಾಗಿದೆ’ ಎಂದು ಜಾನಪದ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ರೂಪಾ ಮೂಡೇರ ಸಂತಸ ಹಂಚಿಕೊಂಡರು.
ಶಿಗ್ಗಾವಿ ತಾಲ್ಲೂಕು ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ‘ಜನಪದ ಸಾಹಿತ್ಯ’ ವಿಭಾಗದಲ್ಲಿ ಚಿನ್ನದ ಪದಕ ಸ್ವೀಕರಿಸಿದ ಸಂದರ್ಭ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.
‘ಬ್ಯಾಡಗಿ ತಾಲ್ಲೂಕು ಚಿಕ್ಕಳ್ಳಿಯ ರೈತ ಕುಟುಂಬ ನಮ್ಮದು. ಚಿಕ್ಕಪ್ಪ ಸತೀಶ ಮೂಡೇರ ಅವರ ಪ್ರೇರಣೆಯೇ ಎಂ.ಎ. ಮಾಡಲು ಕಾರಣ. ಇದೇ ವಿ.ವಿ.ಯಲ್ಲಿ ಈಚೆಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಪಿಎಚ್.ಡಿಗೆ ದಾಖಲಾಗಿದ್ದೇನೆ. ದೇಸಿ ಸಂಪ್ರದಾಯವನ್ನು ಉಳಿಸಿ–ಬೆಳೆಸಬೇಕು ಎಂಬ ಅಭಿಲಾಷೆ ನನ್ನದು’ ಎಂದರು.
ಎರಡು ಚಿನ್ನದ ಪದಕಗಳನ್ನು ಪಡೆದ ಹುಸೇನ್‌ಸಾಬ್ ಪಿ. ಮಾತನಾಡಿ, ‘ಗಡಿನಾಡು ಬಳ್ಳಾರಿಯಿಂದ 20 ವರ್ಷಗಳ ಹಿಂದೆ ಬೆಂಗಳೂರಿಗೆ ನನ್ನ ಕುಟುಂಬ ಗುಳೇ ಹೋಗಿತ್ತು. ಇಂದಿಗೂ ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದೇವೆ. ತೆಲುಗು ನಮ್ಮ ಮಾತೃಭಾಷೆ. ಕಡು ಬಡತನದಲ್ಲೇ ಬೆಳೆದ ನಾನು ಪರಿಶ್ರಮದಿಂದ ‘ಜನಪದ ಸಾಹಿತ್ಯ’ದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಚಿನ್ನದ ಪದಕ ಗಳಿಸಿರುವುದು ಹೆಮ್ಮೆ ಎನಿಸಿದೆ. ಪೂರ್ವಿಕರು ಕಟ್ಟಿಕೊಟ್ಟ ಜ್ಞಾನ, ಕಲೆಯನ್ನು ಮುಂದಿನ ಪೀಳಿಗೆಗೂ ತಿಳಿಸುವ ಹಂಬಲ ನನ್ನದು’ ಎಂದರು.
ಗೌರವ ಡಾಕ್ಟರೇಟ್: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಮಾಳೇನಹಳ್ಳಿಯ ವೀರಗಾಸೆ ಕಲಾವಿದ ಎಂ.ಆರ್.ಬಸಪ್ಪ ಅವರಿಗೆ ಜಾನಪದ ವಿ.ವಿ.ಯಿಂದ ‘ಗೌರವ ಡಾಕ್ಟರೇಟ್’ ಪ್ರದಾನ ಮಾಡಲಾಯಿತು. ಇವರು ರಾಜ್ಯದಾದ್ಯಂತ 2 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು, 60ಕ್ಕೂ ಹೆಚ್ಚು ಮೇಳಗಳನ್ನು ಕಟ್ಟಿ ಬೆಳೆಸಿದ್ದಾರೆ.
ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ‘ಘಟಿಕೋತ್ಸವ ಭಾಷಣ’ ಮಾಡಿದರು. 789 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ, ಕುಲಸಚಿವರಾದ ಪ್ರೊ.ಎನ್.ಎಂ.ಸಾಲಿ, ಪ್ರೊ.ಕೆ.ಎನ್. ಗಂಗಾನಾಯಕ್, ಸಿಂಡಿಕೇಟ್ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.