ADVERTISEMENT

ವಕ್ಫ್‌ ಆಸ್ತಿ ವಿಷಯಕ್ಕೆನೇ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು: ಹಾನಗಲ್ ರೈತ

ಹಾವೇರಿಯ ಹರನಗಿರಿ ರೈತನ ಸಾವು ಪ್ರಕರಣ; ಮೃತನ ತಂದೆಯ ಆರೋಪ..

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 7:22 IST
Last Updated 10 ನವೆಂಬರ್ 2024, 7:22 IST
<div class="paragraphs"><p>ಹಾನಗಲ್ ತಾಲ್ಲೂಕಿನ&nbsp;ರೈತರನ್ನು ಭೇಟಿಯಾಗಿ&nbsp;ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತುಕತೆ ನಡೆಸಿದರು.&nbsp;</p></div>

ಹಾನಗಲ್ ತಾಲ್ಲೂಕಿನ ರೈತರನ್ನು ಭೇಟಿಯಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತುಕತೆ ನಡೆಸಿದರು. 

   

ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹರನಗಿರಿ ಗ್ರಾಮದ ರೈತ ರುದ್ರಪ್ಪ ಬಾಳಿಕಾಯಿ (24) ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ‘ನಮ್ಮ ಜಮೀನು, ವಕ್ಫ್‌ ಆಸ್ತಿ ಆಯಿತು ಎಂಬ ಕಾರಣಕ್ಕೆ ಮಗ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡ’ ಎಂದು ರುದ್ರಪ್ಪ ತಂದೆ ಚನ್ನಪ್ಪ ಬಾಳಿಕಾಯಿ ಆರೋಪಿಸಿದ್ದಾರೆ.

‘ಅಲ್ಲಾಪುರ ಗ್ರಾಮದಲ್ಲಿದ್ದ ಮೊಹಮ್ಮದ್ ಯೂಸೂಫ್ ಎಂಬುವರಿಗೆ ಸೇರಿದ್ದ 4 ಎಕರೆ 36 ಗುಂಟೆ ಜಮೀನನ್ನು ನಮ್ಮ ತಂದೆ 1964ರಲ್ಲಿ ಖರೀದಿಸಿದ್ದರು. ಎಲ್ಲ ದಾಖಲೆಗಳು ತಂದೆ ಹೆಸರಿಗೆ ವರ್ಗಾವಣೆಯಾಗಿದ್ದವು. ಅವರ ನಂತರ, ನನ್ನ ಹೆಸರಿಗೆ ಜಮೀನು ಬಂದಿತ್ತು. 2015ರಲ್ಲಿ ಪೊಲೀಸರ ಸಮೇತ ಬಂದ ಉಪವಿಭಾಗಾಧಿಕಾರಿ ಹಾಗೂ ಇತರರು ಜಮೀನು ಸುಪರ್ದಿಗೆ ಪಡೆದು, ‘ವಕ್ಪ್‌ ಆಸ್ತಿ ಮೊಕಾಶಿ ಟ್ರಸ್ಟ್‌’ಗೆ ನೀಡಿದ್ದಾರೆ’ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಜಮೀನು ತೆರವಿಗೆ ನಮ್ಮ ಒಪ್ಪಿಗೆ ಇರಲಿಲ್ಲ. ಪಂಚನಾಮೆಯಲ್ಲಿ ಮಗನ ನಕಲಿ ಸಹಿ ಮಾಡಲಾಗಿದೆ. ನಮ್ಮ ಪರ ಧ್ವನಿ ಎತ್ತಿದ್ದಕ್ಕೆ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು ಸರಿಯಲ್ಲ’ ಎಂದರು.

‘₹7 ಲಕ್ಷ ಸಾಲ ತೀರಿಸಲಾಗದೇ ಮಗ ಆತ್ಮಹತ್ಯೆ ಮಾಡಿಕೊಂಡನೆಂದು ಪೊಲೀಸರೇ ಸಿದ್ಧಪಡಿಸಿದ ದೂರಿಗೆ ನಾನು ಪೊಲೀಸರ ಒತ್ತಾಯದಿಂದ ಸಹಿ ಮಾಡಿದೆ. ಸರ್ಕಾರದಿಂದ ₹ 5 ಲಕ್ಷ ಪರಿಹಾರ ಬಂತು. ಆದರೆ, ನಂತರ ವಕ್ಫ್‌ಗೆ ಸಂಬಂಧಿಸಿದಂತೆ ದೂರು ಕೊಡಲು ಆಗಲಿಲ್ಲ’ಎಂದರು.

‘ರೈತರ ಕಾನೂನು ಹೋರಾಟಕ್ಕೆ ಬೆಂಬಲ’

‘ವಕ್ಫ್ ಆಸ್ತಿ ವಿಷಯಕ್ಕೆ ಮಗ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿ ರುವುದಾಗಿ ತಂದೆ ಹೇಳಿದ್ದು, ದಾಖಲೆಗಳನ್ನು ಪಡೆದಿದ್ದೇವೆ. ವಕ್ಫ್‌ ಆಸ್ತಿಯೆಂದು ರಾಜ್ಯದಲ್ಲಿ 9 ಲಕ್ಷ ಎಕರೆ ಕಬಳಿಸುವ ಹುನ್ನಾರ ನಡೆದಿದೆ. ರೈತರ ಕಾನೂನು ಹೋರಾಟ ನಮ್ಮ ಬೆಂಬಲವಿದ್ದು, ಎಲ್ಲ ವೆಚ್ಚವನ್ನು ನಾವೇ ಭರಿಸುತ್ತೇವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬಿಜೆಪಿ ನಿಯೋಗದ ನೇತೃತ್ವ ವಹಿಸಿಕೊಂಡು ಶನಿವಾರ ರುದ್ರಪ್ಪ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಕ್ಫ್ ಆಸ್ತಿ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದೆ. ಇದನ್ನು ಉಲ್ಲಂಘಿಸಿ, ನೋಟಿಸ್ ನೀಡದೇ ಜಮೀನು ವಕ್ಫ್‌ ಆಸ್ತಿ ಮಾಡಲಾಗಿದೆ’ ಎಂದರು.

ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ ಸಹ ವಕ್ಫ್ ಆಸ್ತಿ

'ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ ಸಹ ವಕ್ಫ್ ಆಸ್ತಿ ಎಂಬುದಾಗಿ ವಕ್ಫ್ ಮಂಡಳಿ ಹೇಳುತ್ತಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

'ಜಮೀನು ವಕ್ಫ್ ಆಸ್ತಿ ಆಯಿತೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎನ್ನಲಾದ ರೈತ ರುದ್ರಪ್ಪ ಅವರ ಹಾನಗಲ್ ತಾಲ್ಲೂಕಿನ ಹರನಗಿರಿ ಗ್ರಾಮಕ್ಕೆ ಭೇಟಿ ನೀಡಿದ ಅವರು, 'ವಕ್ಫ್ ಮೂಲಕ ರಾಜ್ಯ ಸರ್ಕಾರ, 9 ಲಕ್ಷ ಎಕರೆ ಜಮೀನು ಕಬಳಿಸಲು ಹೊರಟಿದೆ' ಎಂದರು.

'ಬೆಂಗಳೂರಿನ ಮೆಜೆಸ್ಟಿಕ್, 175 ಎಕರೆ ಇದೆ. ಇದು ಸಹ ವಕ್ಫ್ ಆಸ್ತಿಯೆಂದು ಹೇಳುತ್ತಿದ್ದಾರೆ. ನಾಳೆ ವಿಧಾನಸೌಧವೂ ವಕ್ಫ್ ಆಸ್ತಿಯಾದರೂ ಆಶ್ಚರ್ಯವಿಲ್ಲ' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.