ADVERTISEMENT

25 ವರ್ಷಗಳ ರಂಗಸೇವೆಗೆ ಸಂದ ನಾಟಕ ಅಕಾಡೆಮಿ ಪ್ರಶಸ್ತಿ

ಶೇಷಗಿರಿಯ ಸಿದ್ದಪ್ಪ ರೊಟ್ಟಿ ಅವರಿಗೆ ಪ್ರಸಕ್ತ ಸಾಲಿನ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 15:43 IST
Last Updated 9 ಆಗಸ್ಟ್ 2024, 15:43 IST
ಸಿದ್ದಪ್ಪ ರೊಟ್ಟಿ
ಸಿದ್ದಪ್ಪ ರೊಟ್ಟಿ   

ಅಕ್ಕಿಆಲೂರು: ರಂಗಗ್ರಾಮ ಎಂಬ ಹಿರಿಮೆಗೆ ಪಾತ್ರವಾಗಿರುವ ಶೇಷಗಿರಿಯ ಹಿರಿಯ ರಂಗಕರ್ಮಿ ಸಿದ್ದಪ್ಪ ರೊಟ್ಟಿ ಅವರ ಸುದೀರ್ಘ ಕಲಾಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ 2024-25 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಪ್ರಶಸ್ತಿ ₹ 25 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಒಳಗೊಂಡಿದೆ.

ಕಳೆದ ಹಲವು ದಶಕಗಳ ಸಿದ್ದಪ್ಪ ಅವರ ರಂಗ ಪ್ರೀತಿಯಿಂದಾಗಿ ನೂರಾರು ನಾಟಕಗಳು ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಸಹ ಪ್ರದರ್ಶನ ಕಂಡು ರಂಗಾಸಕ್ತರ ಗಮನ ಸೆಳೆದಿವೆ. ಇಡೀ ಶೇಷಗಿರಿ ಗ್ರಾಮ ರಂಗಾಸಕ್ತಿಯ ತವರಾಗಿದೆ. ಕಥೆಯಾದ ಕಾಳ, ಕೊರಳೊಂದು ತಾಳಿ ಎರಡು, ಅಕ್ಷರ ಬಾಳಿಗೊಂದು ಉತ್ತರ, ಮಾತು ಕೊಟ್ಟ ಮುತ್ತೈದೆ, ಕಂಪನಿ ಸವಾಲ್, ಬಣ್ಣಕ್ಕೆ ಬೆರಗಾದವರು, ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ, ನ್ಯಾಯದ ಬಾಗಿಲು, ನಮಗೂ ಒಂದು ಕಾಲ, ಜಾತಿ ಮಾಡಬ್ಯಾಡ್ರಿ ಅಧಿಕಾರದೊಳಗ, ಚಂಬು ಪುರಾಣ ಸೇರಿದಂತೆ ನೂರಾರು ನಾಟಕಗಳಲ್ಲಿ ಮನೋಜ್ಞ ಪಾತ್ರಗಳಲ್ಲಿ ಸಿದ್ದಪ್ಪ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಮುಖವಾಗಿ ಹಾಸ್ಯ ಪಾತ್ರಗಳಲ್ಲಿ ರಂಗಪ್ರಿಯರನ್ನು ಆಹ್ಲಾದಗೊಳಿಸಿದ್ದಾರೆ.

ಧಾರವಾಡ ಆಕಾಶವಾಣಿಯ ರೇಡಿಯೊ ನಾಟಕಗಳಾದ ಉಷಾಹರಣ, ಕತ್ತಲೆಯಿಂದ ಬೆಳಕಿನೆಡೆಗೆ, ಇವ ನಮ್ಮವ, ಚಂದನವಾಹಿನಿಯ ಸಿರಿ ಗಂಧ ಸಿರಿ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾರೆ. ಅತ್ಯಂತ ಹೆಸರುವಾಸಿಯಾದ ಉಷಾಹರಣ, ವಾಲಿವಧೆ, ಚಾವುಂಡರಾಯ, ಭಾರತಾಂಬೆ, ಶೋಕಚಕ್ರ ಈ ನಾಟಕಗಳು ಮುಂಬೈ ಹಾಗೂ ದೆಹಲಿಗಳಲ್ಲಿ ಪ್ರದರ್ಶಗೊಂಡಿವೆ. ಸಿಜಿಕೆ ಪ್ರಶಸ್ತಿ, ಹಾವೇರಿಯ ಗೆಳೆಯರ ಬಳಗ, ಬ್ಯಾಡಗಿಯಲ್ಲಿ ನಡೆದ ಜಿಲ್ಲಾ ಉತ್ಸವ, ಅಕ್ಕಿಆಲೂರಿನ ನುಡಿ ಸಂಭ್ರಮ, ಹಾನಗಲ್ಲಿನ ರಂಗ ಸಮ್ಮಾನ ಸೇರಿದಂತೆ ಹಲವು ಸಮ್ಮಾನಗಳು ಲಭಿಸಿವೆ.

ADVERTISEMENT

ರಂಗಪ್ರಿಯ ಹೋಟೆಲ್: ಕೃಷಿ ಕೂಲಿ ಕಾರ್ಮಿಕರಾಗಿ ಜೀವನೋಪಾಯದಲ್ಲಿದ್ದ ಸಿದ್ದಪ್ಪ ರೊಟ್ಟಿ, ಹಳ್ಳಿಯಲ್ಲಿ ಚಹಾ ಅಂಗಡಿಯೊಂದನ್ನು ಆರಂಭಿಸಿದಾಗ ರಂಗ ಪ್ರೀತಿಗಾಗಿ ರಂಗಪ್ರಿಯ ಹೋಟೆಲ್ ಎಂದು ನಾಮಕರಣ ಮಾಡಿದರು. ಪ್ರತಿ ವರ್ಷ ಶೇಷಗಿರಿಯ ರಂಗ ಮಂದಿರಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ಸಾವಿರಾರು ಕಲಾವಿದರಿಗೆ ಇದೇ ಹೋಟೆಲ್‍ನ ಊಟ ಖಚಿತ. ಅದು ರಂಗ ಪ್ರೀತಿಯ ಶುಚಿ ರುಚಿಯನ್ನೂ ಹೊಂದಿರುತ್ತದೆ. ಇಲ್ಲಿಯ ರಂಗ ಮಂದಿರದಲ್ಲಿ ರಾತ್ರಿಯಿಡೀ ರಿಹರ್ಸಲ್ ಮಾಡುವ ಕಲಾವಿದರು ರಾತ್ರಿ ಹೊತ್ತಿನಲ್ಲಿ ಚಹಾ ಉಪಾಹಾರ ಬೇಕಾದಲ್ಲಿ ಸಿದ್ದಪ್ಪ ರೊಟ್ಟಿ ಅವರ ರಂಗಪ್ರಿಯ ಹೋಟೆಲ್‍ನಲ್ಲಿ ಉಪಾಹಾರ, ಚಹಾ ಸ್ವೀಕರಿಸಿ ತಾವೇ ಅಷ್ಟು ಹಣ ಅಲ್ಲಿಟ್ಟು ಹೋಗುತ್ತಾರೆ. ಮಾಲಿಕರಿಲ್ಲದೆ ರಂಗ ಕಲಾವಿದರಿಗಾಗಿ ರಾತ್ರಿಯಿಡೀ ಹೊಟೆಲ್ ತೆರೆದಿರುತ್ತದೆ. ಇದು ಒಬ್ಬ ರಂಗ ಕಲಾವಿದನ ಸೇವೆ.

ಸಿದ್ದಪ್ಪ ರೊಟ್ಟಿ ಅಭಿನಯದ ನಾಟಕವೊಂದರ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.