ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನದ ಮುನ್ನಾದಿನವಾದ ಮಂಗಳವಾರ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ‘ಗೃಹಲಕ್ಷ್ಮಿ’ ಹಣ ಜಿಲ್ಲೆಯ ಹಲವು ಮಹಿಳೆಯರ ಖಾತೆಗೆ ಜಮೆಯಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮ ತಡೆಗೆ ಜಿಲ್ಲಾಡಳಿತ ಹದ್ದಿನಕಣ್ಣು ಇರಿಸಿದೆ. ಇದರ ನಡುವೆಯೇ, ಕ್ಷೇತ್ರದ ಹಲವು ಮಹಿಳಾ ಮತದಾರರ ಖಾತೆಗಳಿಗೆ ₹ 2,000 ನಗದು ಜಮೆ ಆಗಿದೆ.
ಹಣ ಜಮೆ ಆಗಿರುವ ಮಾಹಿತಿಯನ್ನು ಕೆಲ ಮಹಿಳಾ ಮತದಾರರು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮತದಾನದ ಸಂದರ್ಭದಲ್ಲಿ ಗೃಹಲಕ್ಷ್ಮಿ ಹಣ ಜಮೆ ಮಾಡಿರುವುದನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಬಸವರಾಜ ಬೊಮ್ಮಾಯಿ, ‘ಕಾಂಗ್ರೆಸ್ ಪಕ್ಷ, ಸರ್ಕಾರದ ದುಡ್ಡಿನಲ್ಲಿ ರಾಜಕೀಯ ಭ್ರಷ್ಟಾಚಾರ ಮಾಡುತ್ತಿದೆ. ಇದು, ನೀತಿ ಸಂಹಿತೆಯ ಉಲ್ಲಂಘನೆ. ಚುನಾವಣೆ ಆಯೋಗದವರು ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಿಳಾ ಮತದಾರರಿಗೆ ಆಮಿಷವೊಡ್ಡಿ ಜಮೆ ಮಾಡಿರುವ ಹಣವನ್ನು ವಾಪಸು ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.
‘ಚುನಾವಣೆ ಪಾರದರ್ಶಕವಾಗಿರಬೇಕು. ರಾಜ್ಯ ಸರ್ಕಾರ ಪ್ರತಿ ಬಾರಿಯೂ ಮತದಾನದ ಮುನ್ನಾದಿನ ಸರ್ಕಾರದ ಹಣದಲ್ಲಿ ರಾಜಕೀಯದ ರೊಟ್ಟಿ ಸುಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ. ಹಾವೇರಿ ಜಿಲ್ಲಾಧಿಕಾರಿಯವರು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.