ADVERTISEMENT

ಗುತ್ತಲ: ಬ್ಯಾಂಕ್‌ ಗ್ರಾಹಕರಿಗೆ ₹2 ಲಕ್ಷಕ್ಕೂ ಹೆಚ್ಚು ವಂಚನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 12:39 IST
Last Updated 6 ಆಗಸ್ಟ್ 2024, 12:39 IST
ಹಾವನೂರ ಗ್ರಾಮದ ಕೆವಿಜಿ ಬ್ಯಾಂಕ
ಹಾವನೂರ ಗ್ರಾಮದ ಕೆವಿಜಿ ಬ್ಯಾಂಕ   

ಗುತ್ತಲ: ಸಮೀಪದ ಹಾವನೂರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಹಲವು ಗ್ರಾಹಕರ ಅಕೌಂಟ್‌ನಿಂದ ಕಳೆದ ನವೆಂಬರ್‌ನಿಂದ ಹಣ ಮಾಯವಾಗುತ್ತಿರುವ ಘಟನೆಗಳು ನಡೆದಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಟ್ಟು ಇಲ್ಲಿಯವರೆಗೆ ₹ 2 ಲಕ್ಷ 10 ಸಾವಿರ ವಂಚನೆಯಾಗಿರುವುದಾಗಿ ತಿಳಿದು ಬಂದಿದೆ.

ಹಾಂವಶಿ ಗ್ರಾಮದ ಪರಮೇಶಪ್ಪ ಪಾಟೀಲ ಅವರ ಖಾತೆಯಿಂದ 2023ರ ಡಿ. 1 ರಂದು ₹ 10 ಸಾವಿರ, ಡಿ. 2 ಮತ್ತು 3 ರಂದು ತಲಾ ₹ 10 ಸಾವಿರ ಸೇರಿ ಒಟ್ಟು 37,500 ವಂಚನೆಯಾಗಿದೆ. ಹಾವನೂರ ಗ್ರಾಮದ ಸುರೇಶ ಮಾಜಿ ಅವರ ಖಾತೆಯಿಂದ 2024ರ ಏ.15 ರಂದು ₹ 26,900 ನಾಪತ್ತೆಯಾಗಿದೆ. 2023ರ ನ. 23 ರಂದು ಸವಿತಾ ಮಡಿವಾಳರ ಅವರ ಖಾತೆಯಿಂದ ₹ 50,000 ನಾಪತ್ತೆಯಾಗಿದೆ. ಸುಭಾಸ ಗೊರವರ ಎಂಬವರ ಖಾತೆಯಿಂದ ₹ 96 ಸಾವಿರ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ADVERTISEMENT

‘ಮಂಗಳವಾರ ಬ್ಯಾಂಕ್‌ಗೆ ಹೋಗಿ ಹಲವು ಗ್ರಾಹಕರ ಖಾತೆಯಿಂದ ಹಣ ನಾಪತ್ತೆಯಾಗಿರುವ ಬಗ್ಗೆ ಬ್ಯಾಂಕ್‌  ವ್ಯವಸ್ಥಾಪಕರನ್ನು ವಿಚಾರಿಸಿದಾಗಿ, ಅವರು ಉತ್ತರ ನೀಡಲು ನಿರಾಕರಿಸಿದರಲ್ಲದೇ ಧಾರವಾಡ ಶಾಖೆಯಲ್ಲಿ ಕೇಳಿಕೊಳ್ಳುವಂತೆ ಏರು ದನಿಯಲ್ಲಿ ಗದರಿಸಿದರು’ ಎಂದು ಹಣ ಕಳೆದುಕೊಂಡ ಪರಮೇಶಪ್ಪ ದೂರಿದರು.

‘ನಾವು ಕಡುಬಡವರು 10ಕ್ಕೂ ಹೆಚ್ಚು ಮನೆಗಳ ಮುಸುರೆ ತಿಕ್ಕಿ ಜೀವನ ಸಾಗಿಸುತ್ತಿದ್ದೇವೆ. ದುಡಿಮೆಯಿಂದ ಬಂದ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದೇವೆ. ಆದರೆ ನಮ್ಮ ಖಾತೆಯಿಂದ ಎಲ್ಲ ಹಣವನ್ನು ವಂಚಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಆದರೆ ಪೊಲೀಸ್ ಇಲಾಖೆ ಮತ್ತು ಬ್ಯಾಂಕಿನ ವ್ಯವಸ್ಥಾಪಕರು ನಮಗೆ ನ್ಯಾಯ ಒದಗಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ನಮ್ಮ ಹಣ ಪತ್ತೆ ಹಚ್ಚಿ ಮರುಪಾವತಿಸಬೇಕು’ ಎಂದು ಸವಿತಾ ಮಡಿವಾಳರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.