ಕುಮಾರಪಟ್ಟಣ: ವಿಭಿನ್ನ ಬಗೆಯ ಹಣ್ಣಿನ ಮರಗಳು, ಔಷಧಿ ಸಸಿಗಳು ಹಾಗೂ ಹೂವು, ಬಳ್ಳಿಗಳಿಂದ ಸಮೀಪದ ಕೊಡಿಯಾಲ ಗ್ರಾಮದ ಅಮೃತವರ್ಷಿಣಿ ವಿದ್ಯಾಲಯದ ಗೋಕುಲ ಗಾರ್ಡನ್ ಮತ್ತು ಬೃಂದಾವನ ಕ್ಯಾಂಪಸ್ ಕಂಗೊಳಿಸುತ್ತಿದೆ.
100ಕ್ಕೂ ಹೆಚ್ಚು ಕುಂಡಗಳಲ್ಲಿ ಬಗೆ ಬಗೆಯ ಅಲಂಕಾರಿಕ ಮತ್ತು ಔಷಧಿ ಗುಣವುಳ್ಳ ಸಸಿಗಳನ್ನು ಬೆಳೆಸಲಾಗಿದೆ. ಅನುಪಯುಕ್ತ ಪ್ಲಾಸ್ಟಿಕ್ ಬಾಟಲ್, ಡಬ್ಬಗಳಲ್ಲಿ ಸಸಿಗಳನ್ನು ನೆಟ್ಟು ತೂಗು ಹಾಕಲಾಗಿದೆ.
ಶಾಲಾ ಆವರಣದಲ್ಲಿ ಆವರಣದಲ್ಲಿ ಬೆಳೆಸಿರುವ ಮಾವು, ಹಲಸು, ಬಾಳೆ, ನೆಲ್ಲಿಕಾಯಿ, ಅಶೋಕ ಮರ, ತೇಗ, ಅಮಟೆಕಾಯಿ, ರಾಮಫಲ, ಫನ್ನೇರಳೆ, ಸಪೋಟ, ಅಡಿಕೆ, ನಿಂಬೆ, ತೆಂಗು, ಗಸಗಸೆ ಗಿಡ, ಹೆಬ್ಬೇವು, ಹುಣಸೆ ಗಿಡ, ಬಿದಿರು, ಪಪ್ಪಾಯ, ಅತ್ತಿಮರ, ನೇರಳೆ ಸಸಿಗಳು ನೆರಳು, ಶುದ್ಧ ಗಾಳಿ ಮತ್ತು ಹಣ್ಣುಗಳನ್ನು ಕೊಡುತ್ತಿವೆ.
ಬ್ರಹ್ಮ ಕಮಲ, ಕಣಗಿಲೆ, ರತ್ನ ಗಂಧ, ನಂದಿ ಬಟ್ಟಲು, ಚೆಂಡು ಹೂವು, ಕಾಗದ ಪುಷ್ಪ, ಕನಕಾಂಬರ, ಮೆಹೆಂದಿ ಸಸಿ, 10 ಬಗೆಯ ದಾಸವಾಳ, 3 ಬಗೆಯ ಮಲ್ಲಿಗೆ, 5 ತಳಿಯ ಲಿಲ್ಲಿ ಪುಷ್ಪ ಸೇರಿದಂತೆ 25ಕ್ಕೂ ಹೆಚ್ಚು ತಳಿಯ ಪುಷ್ಪಗಳನ್ನು ಇಲ್ಲಿ ಬೆಳೆಸಲಾಗಿದೆ.
ಮಕ್ಕಳಿಗೆ ಚಿತ್ರಗಳನ್ನು ತೋರಿಸಿ ಹೇಳುವುದಕ್ಕಿಂತ ಪ್ರತ್ಯಕ್ಷವಾಗಿ ಗಿಡ–ಮರಗಳನ್ನು ಪರಿಚಯಿಸಿ ಪಾಠ ಬೋಧನೆ ಮಾಡುವುದು ಫಲಪ್ರದವಾಗಲಿದೆ. ಅರಣ್ಯಗಳ ಪ್ರಮಾಣ ತೀರ ಕುಸಿದಿದ್ದು, ಹಸಿರು ಮಾಯವಾಗುತ್ತಿದೆ. ಹೆಚ್ಚುತ್ತಿರುವ ಉಷ್ಣಾಂಶ ತಡೆಯಲು ಎಲ್ಲ ಮಕ್ಕಳಿಗೂ ತಮ್ಮ ಹೆಸರಿನಲ್ಲಿ ಜಮೀನು, ಮನೆ ಹಿಂದೆ, ಮುಂದೆ ಸಸಿ ನೆಟ್ಟು ಪೋಷಿಸುವಂತೆ ಪ್ರೋತ್ಸಾಹಿಸಲಾಗಿದೆ ಎನ್ನುತ್ತಾರೆ ಕಾರ್ಯದರ್ಶಿ ವಿನಯ್ ರಾವ್.
ಪರಿಸರ ಸಂರಕ್ಷಣೆಗೆ ಜಗತ್ತು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಾವಿರುವ ಜಾಗವನ್ನಾದರೂ ಹಸಿರಾಗಿಸಬೇಕು. ಹಸಿರೇ ನಮ್ಮ ಉಸಿರಾಗಬೇಕು-ಪಿ.ಕೆ.ಪ್ರಕಾಶರಾವ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ
ಔಷಧಿ ಸಸಿ ಬಳ್ಳಿ ಪೋಷಣೆ ಕರಿಬೇವು ವೀಳ್ಯದೆಲೆ ಅಮೃತ ಬಳ್ಳಿ ತುಳಸಿ ದೊಡ್ಡ ಪತ್ರೆ ಬ್ರಾಹ್ಮೀ ಪತ್ರೆ ಬಿಳಿ ತುಳಸಿ ಹಾಡುಸೋಗೆ ಸೇರಿದಂತೆ ಔಷಧಿ ಗುಣವುಳ್ಳ 12 ಬಗೆಯ ಬಳ್ಳಿಗಳನ್ನು ಪೋಷಿಸಲಾಗಿದೆ. ಪ್ರತಿಯೊಂದು ಸಸಿ ಮತ್ತು ಬಳ್ಳಿಯನ್ನು ನಾಟಿ ಮಾಡುವಾಗ ಫಲವತ್ತಾದ ಮಣ್ಣು ಮತ್ತು ಸಗಣಿ ಬೆರೆಸಿ ಹದಗೊಳಿಸಿ ಬಳಸಲಾಗುವುದು. ಹಿತವಾದ ಗಾಳಿ ಬೆಳಕು ನೀರು ದೊರೆಯುವಂತೆ ಕಾಳಜಿ ವಹಿಸಲಾಗಿದೆ. ವೃತ್ತಿಯ ಜೊತೆಗೆ ಶಾಲಾ ಆವರಣ ಹಸಿರಾಗಿಸುವ ಪ್ರವೃತ್ತಿ ರೂಢಿಸಿಕೊಳ್ಳಲಾಗಿದೆ. ಪಾಠ ಬೋಧನೆಗೆ ಪೂರಕವಾಗಿ ಅಗತ್ಯವುಳ್ಳ ಸಸಿ ಮತ್ತು ಬಳ್ಳಿಗಳ ಬಗ್ಗೆ ಮಕ್ಕಳಿಗೆ ಪರಿಚಯಿಸಲಾಗುವುದು ಎನ್ನುತ್ತಾರೆ ಮುಖ್ಯ ಶಿಕ್ಷಕಿ ಚೇತನಾ ವಿನಯ್ ರಾವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.