ಅಕ್ಕಿಆಲೂರ: ಶಿರಸಿ- ಮೊಣಕಾಲ್ಮೂರು ರಾಜ್ಯ ಹೆದ್ದಾರಿಯಿಂದ ಕೂಗಳತೆಯ ದೂರದಲ್ಲಿರುವ ವಿಜಯನಗರ ಗ್ರಾ.ಪಂ. ವ್ಯಾಪ್ತಿಯ ಕೋಡಿಯಲ್ಲಾಪುರ ಗ್ರಾಮದ ಸಮಸ್ಯೆಗಳನ್ನು ಹೊದ್ದು ಮಲಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.
112 ಮನೆಗಳಿರುವ ಈ ಗ್ರಾಮದಲ್ಲಿ 550ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮಸ್ಥರ ನೆಮ್ಮದಿಯ ಜೀವನಕ್ಕೆ ಇಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸುವಲ್ಲಿ ಮಾತ್ರ ಅಧಿಕಾರಿಗಳು ಎಡವಿದ್ದಾರೆ. ಹೆದ್ದಾರಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ಇಲ್ಲಿ ಪ್ರಯಾಸ ಪಡುವಂತಾಗಿದೆ.
ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಸ್ವಲ್ಪ ಯಾಮಾರಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ನಿತ್ಯವೂ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತಿಲ್ಲ.
ನಡೆದೇ ಹೋಗಬೇಕು:ಗ್ರಾಮದಿಂದ ಆಡೂರು, ಅಕ್ಕಿಆಲೂರ, ಹಾನಗಲ್, ಹಾವೇರಿಗೆ ನಿತ್ಯ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಗೋಳು ಹೇಳತೀರದ್ದು. ಕೋಡಿಯಲ್ಲಾಪುರದಿಂದ ನಿತ್ಯ ಆಡೂರಿನವರೆಗೆ 3 ಕಿ.ಮೀ. ನಡೆದುಕೊಂಡೇ ವಿದ್ಯಾರ್ಥಿಗಳು ಬಸ್ ಹಿಡಿಯಬೇಕಿದೆ. ಗರ್ಭಿಣಿಯರು, ವೃದ್ಧರು, ಮಹಿಳೆಯರು, ಮಕ್ಕಳ ಗೋಳಂತೂ ಹೇಳತೀರದ್ದು. ಆಸ್ಪತ್ರೆ, ತುರ್ತು ಹಾಗೂ ನಿತ್ಯದ ಕೆಲಸಗಳಿಗೆ ಖಾಸಗಿ ವಾಹನ ಅವಲಂಬಿಸುವುದು ಅನಿವಾರ್ಯವಾಗಿದೆ. ಶಾಲೆ-ಕಾಲೇಜು ಸಮಯಕ್ಕೆ ಕನಿಷ್ಟ ಒಂದಾದರೂ ಬಸ್ ಓಡಿಸಿ ಎನ್ನುವ ಗ್ರಾಮಸ್ಥರ ಮನವಿಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕಿವಿಗೊಟ್ಟಿಲ್ಲ.
ತ್ಯಾಜ್ಯದ ದುರ್ವಾಸನೆ:ಇನ್ನು ಕೆರೆ ಏರಿಯ ಮೇಲೆ ವ್ಯಾಪಕ ಪ್ರಮಾಣದಲ್ಲಿ ವ್ಯಾಜ್ಯ, ಕೊಳೆತ ಮಾಂಸ ತಂದು ಎಸೆಯಲಾಗುತ್ತಿದ್ದು, ದುರ್ವಾಸನೆಯಿಂದ ತಿರುಗಾಡಲೂ ಸಾಧ್ಯವಾಗುತ್ತಿಲ್ಲ. ಈ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗುವರು, ಹೊಲ-ಗದ್ದೆಗಳಿಗೆ ತೆರಳುವರು ಮೂಗುಮುಚ್ಚಿ ಓಡಾಡುವಂಥ ಸ್ಥಿತಿ ಇದ್ದರೂ ಗ್ರಾಪಂ ಲಕ್ಷ್ಯ ವಹಿಸಿಲ್ಲ. ಗ್ರಾಮದ ಒಳಗಿನ ಸಂಪರ್ಕ ರಸ್ತೆಗಳಲ್ಲಿ ಗುಂಡಿಗಳ ಕಾರುಬಾರು ಹೆಚ್ಚಿದೆ. ಅಲ್ಲಲ್ಲಿ ಗಟಾರು ನಿರ್ಮಿಸಬೇಕಿದ್ದೂ ಸಂಬಂಧಿಸಿದವರು ತಲೆ ಕೆಡಿಸಿಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.