ADVERTISEMENT

ಅಕ್ಕಿಆಲೂರು | ಸಮುದಾಯ ಆರೋಗ್ಯ ಕೇಂದ್ರ: ಚಾವಣಿ ಶಿಥಿಲ, ಸೋರುವ ಕಟ್ಟಡ

ಸುರೇಖಾ ಪೂಜಾರ
Published 29 ಜುಲೈ 2024, 4:36 IST
Last Updated 29 ಜುಲೈ 2024, 4:36 IST
ಅಕ್ಕಿಆಲೂರು ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದ ಚಾವಣಿ ಶಿಥಿಲಗೊಂಡಿರುವುದು
ಅಕ್ಕಿಆಲೂರು ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದ ಚಾವಣಿ ಶಿಥಿಲಗೊಂಡಿರುವುದು   

ಅಕ್ಕಿಆಲೂರು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದ ಚಾವಣಿ ಶಿಥಿಲಗೊಂಡಿದ್ದು, ಮಳೆಗಾಲದ ಸಂದರ್ಭದಲ್ಲಿ ಅಲ್ಲಲ್ಲಿ ಸೋರುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಉತ್ತಮ ವೈದ್ಯಕೀಯ ಸೇವೆ ಹಾಗೂ ಸ್ವಚ್ಛತೆಗಾಗಿ ರಾಜ್ಯಮಟ್ಟದ ಕಾಯಕಲ್ಪ, ಸ್ವಚ್ಛರತ್ನ ಪ್ರಶಸ್ತಿಗೆ ಭಾಜನವಾಗಿರುವ ಈ ಆಸ್ಪತ್ರೆಯೇ ನಾನಾ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಜನರು ದೂರುತ್ತಿದ್ದಾರೆ.

ಹಾನಗಲ್ ತಾಲ್ಲೂಕು ಮಾತ್ರವಲ್ಲದೇ ಹಾವೇರಿ, ಹಿರೇಕೆರೂರು, ಬ್ಯಾಡಗಿ ತಾಲ್ಲೂಕುಗಳ ಗಡಿ ಗ್ರಾಮಗಳ ಹಲವು ಜನರು ನಿತ್ಯವೂ ಈ ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಆಸ್ಪತ್ರೆಯಲ್ಲಿ 7 ವೈದ್ಯರ ಹುದ್ದೆಗಳು ಮಂಜೂರಾಗಿದ್ದು, ಇಬ್ಬರು ವೈದ್ಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಐವರು ಕಾಯಂ ವೈದ್ಯರ ಹುದ್ದೆಗಳು ಖಾಲಿ ಇವೆ. ಎನ್‌ಎಚ್‌ಎಂ ಯೋಜನೆಯಡಿ ಮೂವರು ವೈದ್ಯರು ಸೇವೆ ಸಲ್ಲಿಸುತ್ತಿರುವುದು ಸದ್ಯದ ವೈದ್ಯರಿಗೆ ಆಸರೆಯಾಗಿದೆ.

ADVERTISEMENT

‘ಡಿ’ ದರ್ಜೆಯ ಎಂಟು ಕಾಯಂ ಸಿಬ್ಬಂದಿ ಜಾಗದಲ್ಲಿ ಕೇವಲ ಒಬ್ಬರೇ ಕೆಲಸ ಮಾಡುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದಲ್ಲಿ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಸ್ವಚ್ಛತೆ ಕೆಲಸ ಎಲ್ಲರಿಗೂ ಹೊರೆಯಾಗಿದೆ.

ಈ ಸಮುದಾಯ ಆರೋಗ್ಯ ಕೇಂದ್ರದ ಹೊರ ರೋಗಿಗಳ ವಿಭಾಗಕ್ಕೆ ನಿತ್ಯವೂ 350ಕ್ಕೂ ಹೆಚ್ಚು ಜನರು ಬಂದು ಹೋಗುತ್ತಿದ್ದಾರೆ. 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಒಳ ರೋಗಿಗಳ ವಿಭಾಗದಲ್ಲಿ ನಿತ್ಯವೂ 20ರಿಂದ 25 ಮಂದಿ ಚಿಕಿತ್ಸೆ ಪಡೆಯುವುದು ಕಂಡುಬರುತ್ತಿದೆ. ಇದೇ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 25ರಿಂದ 30 ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.

30 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯನ್ನು 50ಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಸರ್ಕಾರ ಇದುವರೆಗೂ ಒಪ್ಪಿಗೆ ನೀಡದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

‘ಲಭ್ಯವಿರುವ ಸೌಕರ್ಯಗಳಲ್ಲಿಯೇ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಅವರಿಗೆ ಅಗತ್ಯವಿರುವ ಸೌಕರ್ಯ ಪೂರೈಸುವಲ್ಲಿ ಹಿರಿಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ವೈದ್ಯರು ನಮ್ಮ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ’ ಎಂದು ಸ್ಥಳೀಯರು ಹೇಳಿದರು.

‘ಸೋರುತ್ತಿರುವ ಕಟ್ಟಡವನ್ನು ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ, 50 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಕಾಯಕಲ್ಪ ಹಾಗೂ ಸ್ವಚ್ಛ ರತ್ನ ಪ್ರಶಸ್ತಿ ಪಡೆದಿರುವ ಈ ಆಸ್ಪತ್ರೆಯೂ ನಾನಾ ಸೌಲಭ್ಯಗಳಿಂದ ವಂಚಿತವಾಗಿದ್ದು, ಇದು ಆಡಳಿತ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕೈಗನ್ನಡಿ’ ಎಂದು ದೂರಿದರು.

ಅಡ್ಡಾದಿಡ್ಡಿ ವಾಹನ ನಿಲುಗಡೆ: ಆಸ್ಪತ್ರೆಯ ಎದುರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಜನರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಜನರು ಸಹ ಅಡಿಕೆ–ಎಲೆ ಹಾಗೂ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆ. ಇದರಿಂದ ಅಲ್ಲಲ್ಲಿ ಕಲೆಗಳು ಕಾಣುತ್ತಿವೆ. ಆಸ್ಪತ್ರೆಯ ಸ್ವಚ್ಛತೆಗೆ ಜನರೂ ಸಹಕಾರ ನೀಡುಬೇಕೆಂದು ವೈದ್ಯರು ಕೋರುತ್ತಿದ್ದಾರೆ.

ವೈದ್ಯರ ಕೊರತೆಯಿಂದ ಜನರಿಗೆ ಸಂಕಷ್ಟ ಸೌಕರ್ಯ ವಂಚಿತ ಆಸ್ಪತ್ರೆ ಆಡಳಿತ ವ್ಯವಸ್ಥೆಯ ಲೋಪಕ್ಕೆ ಕೈಗನ್ನಡಿ
ಆಸ್ಪತ್ರೆಯ ಕಟ್ಟಡದ ಚಾವಣಿ ಸೋರುತ್ತಿರುವುದರಿಂದ ಮಳೆಗಾಲದಲ್ಲಿ ತೊಂದರೆ ಉಂಟಾಗುತ್ತಿದೆ. ನೀರು ಒಳಗೆ ಬಾರದಂತೆ ಕಟ್ಟಡ ದುರಸ್ತಿ ಮಾಡಬೇಕು
ಕಮಲವ್ವ ಲಮಾಣಿ ಗುರುರಾಯಪಟ್ಟಣ
ವೈದ್ಯರು ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಕೇಂದ್ರಕ್ಕೆ ಬರುವ ಸಾರ್ವಜನಿಕರೊಂದಿಗೆ ವೈದ್ಯರು ಸೌಜನ್ಯದಿಂದ ವರ್ತಿಸಿ ಉತ್ತಮ ಸೇವೆ ನೀಡಲು ಕಾಳಜಿ ವಹಿಸಲಾಗಿದೆ
ಡಾ. ಅಖಿಲೇಷ ಮಾಳೋದೆ ಆಡಳಿತ ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.