ರಟ್ಟೀಹಳ್ಳಿ: ತಾಲ್ಲೂಕು ಕೇಂದ್ರವಾದ ರಟ್ಟೀಹಳ್ಳಿ ಪಟ್ಟಣದಲ್ಲಿ ಸುಸಜ್ಜಿತವಾದ ಗ್ರಂಥಾಲಯವಿಲ್ಲ. ಈಗಿರುವ ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಓದಲು ಉತ್ತಮ ವ್ಯವಸ್ಥೆ ಇಲ್ಲ. ಇಡೀ ಗ್ರಂಥಾಲಯವು ದೂಳಿನಿಂದ ಕೂಡಿದೆ.
ಪಟ್ಟಣದ ಕುರಬಗೇರಿ ಕ್ರಾಸ್ ಹತ್ತಿರ ಮೊದಲನೇ ಮಹಡಿಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ರಟ್ಟೀಹಳ್ಳಿ ಶಾಖೆ ಎಂದು ನೆಪ ಮಾತ್ರಕ್ಕೆ ನಾಮಫಲಕ ಹಾಕಿದಂತಿದೆ.
ಕಚೇರಿ ಪ್ರವೇಶಿಸುತ್ತಲೇ ಮುರಿದ ಕುರ್ಚಿ, ಟೇಬಲ್‌ಗಳು ಮೂಲೆಯಲ್ಲಿ ಕಸದ ರಾಶಿ, ಎಲ್ಲಂದರಲ್ಲಿ ಮೂಲೆಯಲ್ಲಿ ತುಂಬಿದ ಕಸದ ಚೀಲಗಳು ಹಾಗೂ ಅಲ್ಲಲ್ಲಿ ಬಿದ್ದಿರುವ ಅಮೂಲ್ಯ ಗ್ರಂಥಗಳು, ದಿನಪತ್ರಿಕೆಗಳು ಕಣ್ಣಿಗೆ ರಾಚುತ್ತವೆ.
ಮಳೆಗಾಲದ ವೇಳೆ ಕಟ್ಟಡ ಸೋರುತ್ತದೆ. ಇದರಿಂದಾಗಿ ಪುಸ್ತಕ, ದಿನಪತ್ರಿಕೆಗಳು ನೆನೆಯುತ್ತವೆ. ಕಟ್ಟಡ ಮುಂಭಾಗದಲ್ಲಿ ಅಲ್ಲಲ್ಲಿ ಮದ್ಯದ ಪೌಚ್, ಎಲೆ ಅಡಿಕೆ ಜಗಿದು ಉಗಿಳಿರುವುದು ಕಂಡುಬರುತ್ತದೆ.
1-2 ದಿನಪತ್ರಿಕೆಗಳನ್ನು ಹೊರತುಪಡಿಸಿದರೆ ಉಳಿದ ದಿನಪತ್ರಿಕೆಗಳು, ವಾರಪತ್ರಿಕೆಗಳು, ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಅನುಕೂಲವಾಗುವ ವಾರಪತ್ರಿಕೆ, ಮಾಸಿಕಪತ್ರಿಕೆಗಳ ಸರಬರಾಜು ಇರುವುದಿಲ್ಲ. ಇದರಿಂದಾಗಿ ಯಾರೊಬ್ಬ ಓದುಗರು ಗ್ರಂಥಾಲಯದ ಹತ್ತಿರ ಸುಳಿಯದಂತಾಗಿದೆ.
ಓದಿಗೆ ಪೂರಕವಾದ ವಾತಾವರಣ ನಿರ್ಮಿಸಿ ಎಂದು ಸಂಬಂಧಿಸಿದ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳಿಗೆ ಸಾಕಷ್ಟು ಸಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಮೊದಲು ಉತ್ತಮ ಗ್ರಂಥಾಲಯ: ರಟ್ಟೀಹಳ್ಳಿ ತಾಲ್ಲೂಕು ಕೇಂದ್ರವಾಗುವ ಮೊದಲು ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಗ್ರಂಥಾಲಯವಿತ್ತು. ಅಲ್ಲಿ ಸಾಕಷ್ಟು ಸುವ್ಯವಸ್ಥೆಯಿಂದ ಗ್ರಂಥಾಲಯ ನಿರ್ವಹಣೆಯಾಗುತ್ತಿತ್ತು. ಇಬ್ಬರು ಗ್ರಂಥಾಲಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಓದುಗರ ಸಂಖ್ಯೆ ಕೂಡ ಹೆಚ್ಚಾಗಿತ್ತು.
‘ಗ್ರಾಮ ಪಂಚಾಯ್ತಿಯವರು ಕಾರ್ಯಾಲಯಕ್ಕೆ ಕೊಠಡಿ ಅವಶ್ಯವಿರುವ ಕಾರಣ ನೀಡಿ ಗ್ರಂಥಾಲಯ ತೆರವುಗೊಳಿಸಿದರು. ನಂತರ ಗ್ರಂಥಾಲಯ ಕುರಬಗೇರಿ ಕ್ರಾಸ್ ಹತ್ತಿರ ಇರುವ ಮೇಲಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಜನರಿಗೆ ಮಹಡಿ ಮೇಲೆ ಹತ್ತುವುದು ಕಷ್ಟವಾಯಿತು. ಹೀಗಾಗಿ ಗ್ರಂಥಾಲಯ ಹಾಳಾಯಿತು‘ ಎನ್ನುತ್ತಾರೆ ಪಟ್ಟಣ ನಿವಾಸಿಗಳು.
‘ರಟ್ಟೀಹಳ್ಳಿ ಪಟ್ಟಣದಲ್ಲಿ ಉತ್ತಮ ಗ್ರಂಥಾಲಯದ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗ ಪೂರಕವಾದ ವಾರ, ಮಾಸ ಪತ್ರಿಕೆಗಳ ಅವಶ್ಯಕತೆಯೂ ಇದೆ. ಇವೆಲ್ಲವೂ ಸಿಗುವಂತಾಬೇಕು. ಮಹಡಿ ಮೇಲೆ ಗ್ರಂಥಾಲಯ ಇರುವುದರಿಂದ ವಯಸ್ಸಾದವರಿಗೆ ತೊಂದರೆಯಾಗುತ್ತದೆ. ಅಧಿಕಾರಿಗಳು ಕೂಡಲೇ ಕಟ್ಟಡ ಬದಲಿಸಿ ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಬೇಕು‘ ಎನ್ನುತ್ತಾರೆ ನಿವೃತ್ತ ಶಿಕ್ಷಕ ಎಸ್.ಎಂ.ಮಠದ.
‘ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯಿಂದ ಅಗತ್ಯ ನಿವೇಶನ ನೀಡಿದರೆ ಸುಸಜ್ಜಿತವಾದ ತಾಲ್ಲೂಕು ಗ್ರಂಥಾಲಯ ಕೇಂದ್ರ ಕಟ್ಟಡ ನಿರ್ಮಿಸಲಾಗುವುದು ಎಂದು ಗ್ರಂಥಾಲಯ ಇಲಾಖೆಯ ಅಧಿಕಾರಿಗಳು ಹೇಳಿದ್ದರು. ಆದರೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ನಿವೇಶನವಿಲ್ಲ ಎಂದು ಅಂದಿನ ಮುಖ್ಯಾಧಿಕಾರಿಗಳು ತಿಳಿಸಿದರು. ಹೀಗೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹೇಳುತ್ತಾ ಕಾಲಾಹರಣ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಸ್ಥಳೀಯ ಓದುಗರು ಬೇಸರ ವ್ಯಕ್ತಪಡಿಸುತ್ತಾರೆ.
ನಿರ್ವಹಣೆಯಿಲ್ಲದೆ ರಟ್ಟೀಹಳ್ಳಿ ತಾಲ್ಲೂಕು ಕೇಂದ್ರ ಗ್ರಂಥಾಲಯ ಹಾಳಾಗಿದೆ. ಓದುಗರಿಗೆ ಅಗತ್ಯ ಸೌಕರ್ಯವಿಲ್ಲ. ಅಧಿಕಾರಿಗಳು ಸೌಲಭ್ಯ ಕಲ್ಪಿಸಬೇಕು.–ಪುಟ್ಟನಗೌಡ ಪಾಟೀಲ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.