ಹಾವೇರಿ: ಜಿಲ್ಲೆಯಲ್ಲಿ ಬೆಳೆದಿರುವ ಗೋವಿನ ಜೋಳ, ಸೋಯಾಬೀನ್, ಹೆಸರು, ಭತ್ತ ಹಾಗೂ ಇತರೆ ಬೆಳೆಗಳು ಕಟಾವು ಹಂತಕ್ಕೆ ಬರುತ್ತಿವೆ. ಕಾರ್ಮಿಕರ ಕೊರತೆ ಹಾಗೂ ನಾನಾ ಸಮಸ್ಯೆ ಎದುರಿಸುತ್ತಿರುವ ರೈತರು, ಫಸಲು ಕಟಾವು ಮಾಡಲು ಯಂತ್ರಗಳ ಮೊರೆ ಹೋಗುತ್ತಿದ್ದಾರೆ.
ಜಿಲ್ಲೆಯ ಹಾವೇರಿ, ಹಾನಗಲ್, ರಾಣೆಬೆನ್ನೂರು, ಹಿರೇಕೆರೂರು, ಶಿಗ್ಗಾವಿ, ಸವಣೂರು, ರಟ್ಟೀಹಳ್ಳಿ ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಮಳೆ ಸಮರ್ಪಕವಾಗಿ ಬರದಿದ್ದರಿಂದ, ಕೆಲವು ಕಡೆಗಳಲ್ಲಿ ಬೆಳೆ ಮೊಳಕೆಯೊಡದಿರಲಿಲ್ಲ. ಅಲ್ಲೆಲ್ಲ ಮರು ಬಿತ್ತನೆ ಮಾಡಲಾಗಿದೆ. ಇದೀಗ, ಎಲ್ಲ ಕಡೆಯೂ ಕ್ರಮೇಣವಾಗಿ ಬೆಳೆಯ ಕಟಾವು ಶುರುವಾಗಿದೆ.
ಭೂಮಿ ಹದ ಮಾಡುವುದರಿಂದ ಹಿಡಿದು ಬೆಳೆ ಕಟಾವು ಹಂತಕ್ಕೆ ಬರುವವರೆಗಿನ ಕೃಷಿ ಚಟುವಟಿಕೆ ಕೈಗೊಳ್ಳಲು ಕಾರ್ಮಿಕರ ಕೊರತೆ ಇದೆ. ಲಭ್ಯವಿರುವ ಕಾರ್ಮಿಕರು, ತಾವು ಕೇಳಿದಷ್ಟು ಹಣ ಹಾಗೂ ಇತರೆ ವ್ಯವಸ್ಥೆ ಮಾಡಿದರೆ ಮಾತ್ರ ಕೆಲಸಕ್ಕೆ ಬರುವುದಾಗಿ ನೇರವಾಗಿಯೇ ಹೇಳುತ್ತಿದ್ದಾರೆ. ಕೆಲ ರೈತರು, ಅನಿವಾರ್ಯವಾಗಿ ಕೇಳಿದಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.
ಕೆಲ ರೈತರು ತಮ್ಮ ಕುಟುಂಬದ ಸದಸ್ಯರ ಜೊತೆ ಸೇರಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಕಡಿಮೆ ಜನ ಇದ್ದರೆ, ಅಂಥವರು ಕೃಷಿ ಕೆಲಸಕ್ಕೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ. ದಿನ ಕಳೆದಂತೆ ಕಾರ್ಮಿಕರ ಕೂಲಿ ದರವೂ ಹೆಚ್ಚಾಗುತ್ತದೆ. ದರ ಕೊಟ್ಟು ಕೆಲವೆಡೆ ಕಾರ್ಮಿಕರು ಲಭ್ಯವಾಗುತ್ತಿಲ್ಲವೆಂದು ರೈತರು ದೂರುತ್ತಿದ್ದಾರೆ.
ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳನ್ನು ಕಟಾವು ಮಾಡಿ ಮಾರಲು ರೈತರು ಸಜ್ಜಾಗಿದ್ದಾರೆ. ಇಂಥ ರೈತರಿಗೆ, ಕಾರ್ಮಿಕರ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ರೈತರು, ಕಟಾವು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಕೃಷಿ ಯಂತ್ರ ಹೊಂದಿರುವವರಿಗೆ ಬೇಡಿಕೆ ಹೆಚ್ಚಾಗಿದೆ.
ಸೋಯಾಬಿನ್, ಹೆಸರು, ಭತ್ತ ಸೇರಿದಂತೆ ಸಣ್ಣ ಬೆಳೆಗಳನ್ನು ಹಾಗೂ ಗೋವಿನ ಜೋಳದಂಥ ದೊಡ್ಡ ಬೆಳೆಗಳನ್ನು ಕಟಾವು ಮಾಡಲು ತರಹೇವಾರಿ ಯಂತ್ರಗಳು ಮಾರುಕಟ್ಟೆಗೆ ಬಂದಿದೆ. ಇಂಥ ಯಂತ್ರಗಳನ್ನು ಖರೀದಿಸಿರುವ ಕೆಲವರು, ಅವುಗಳನ್ನು ಬಳಸಿಕೊಂಡು ಬಾಡಿಗೆ ಆಧಾರದಲ್ಲಿ ಬೆಳೆ ಕಟಾವು ಮಾಡುತ್ತಿದ್ದಾರೆ.
ಜಿಲ್ಲೆಯ ಹಲವು ತಾಲ್ಲೂಕಿನಲ್ಲಿರುವ ವ್ಯಾಪಾರಿಗಳು ಹಾಗೂ ಉದ್ಯಮಿಗಳು, ಹೆಚ್ಚಾಗಿ ಯಂತ್ರಗಳನ್ನು ಹೊಂದಿದ್ದಾರೆ. ಇವರ ಬಳಿಯ ಯಂತ್ರಗಳನ್ನು ರೈತರು ಬಾಡಿಗೆಗಾಗಿ ಪಡೆಯುತ್ತಿದ್ದಾರೆ. ಸದ್ಯದ ಮಾರುಕಟ್ಟೆಯಲ್ಲಿ ಯಂತ್ರದ ಬಳಕೆಗಾಗಿ ಪ್ರತಿ ಗಂಟೆಗೆ ₹2,300 ರಿಂದ ₹2,500 ರ ವರೆಗೆ ಬಾಡಿಗೆ ದರ ನಿಗದಿ ಮಾಡಲಾಗಿದೆ. ಕಾಯಂ ರೈತರು ಹಾಗೂ ಪರಿಚಯಸ್ಥರ ರೈತರಿಗೆ ರಿಯಾಯಿತಿ ಸಹ ಸಿಗುತ್ತಿದೆ.
ಹಣ, ಸಮಯ ಉಳಿತಾಯ: ಆಯಾ ಬೆಳೆಗಳ ಕಟಾವಿಗೆ ಅಗತ್ಯವಿರುವ ಉಪಕರಣಗಳನ್ನು ಒಳಗೊಂಡಿರುವ ಯಂತ್ರಗಳು ಇಂದು ಲಭ್ಯವಿವೆ. ಕಡಿಮೆ ಸಮಯದಲ್ಲಿ ಕಟಾವು ಮುಗಿಸುವ ಸಾಮರ್ಥ್ಯವನ್ನೂ ಹೊಂದಿದೆ. ಕಾರ್ಮಿಕರ ಕೂಲಿಗಿಂತ ಕಡಿಮೆ ಹಣದಲ್ಲಿ ಕಟಾವು ಪ್ರಕ್ರಿಯೆ ಪೂರ್ಣಗೊಳ್ಳುವುದಾಗಿ ರೈತರು ಹೇಳುತ್ತಿದ್ದಾರೆ.
‘ಕಾರ್ಮಿಕರನ್ನು ಬಳಸಿಕೊಂಡು ಒಂದು ಎಕರೆ ಸೋಯಾಬೀನ್ ಕಟಾವು ಮಾಡಲು ಸುಮಾರು ₹5,700 ಬೇಕಾಗುತ್ತದೆ. ಗಿಡ ಕಿತ್ತು ಬಣವೆ ಮಾಡಲು ₹2,600 ಹಾಗೂ ಕಾಳು ಬೇರ್ಪಡಿಸುವ ಯಂತ್ರಕ್ಕೆ ಹಾಕಲು ₹1,500 ಕೊಡಬೇಕು. ಯಂತ್ರದ ಸಹಾಯಕ್ಕಾಗಿ ಕೆಲಸ ಮಾಡಲು ನಾಲ್ವರು ಕಾರ್ಮಿಕರು ಬೇಕು. ಅವರಿಗೆ ತಲಾ ₹400 ರಂತೆ ₹1,600 ನೀಡಬೇಕು’ ಎಂದು ದೇವಗಿರಿ ರೈತ ಅಶೋಕ ಮೇಗಿಲಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಿಡ ಕಿತ್ತು, ಕಾಳು ಬೇರ್ಪಡಿಸುವ ಯಂತ್ರ ಲಭ್ಯವಿದೆ. ಇದಕ್ಕೆ ಗಂಟೆಗೆ ₹2,300 ಹೇಳುತ್ತಾರೆ. ಚೌಕಾಶಿ ಮಾಡಿ ಕಡಿಮೆ ಮಾಡುತ್ತಾರೆ. ಈ ಹಣದಲ್ಲಿ ಕಟಾವು ಕೆಲಸ ಪೂರ್ಣಗೊಂಡು ಕಾಳುಗಳು ಸಿಗುತ್ತವೆ’ ಎಂದರು.
ಯಂತ್ರದಿಂದ ಕಟಾವು ಮಾಡಿಸಿದರೆ ಹಣ ಹಾಗೂ ಸಮಯ ಎರಡೂ ಉಳಿಯುತ್ತದೆ. ಯಂತ್ರದಿಂದ ಬರುವ ಕಾಳುಗಳನ್ನು ಒಣಗಿಸಿ ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ದು ಮಾರಬಹುದುಅಶೋಕ ಮೇಗಿಲಮನಿ ರೈತ ದೇವಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.