ADVERTISEMENT

ಹಾವೇರಿ | ಪಾಳುಬಿದ್ದ ಸಂಕೀರ್ಣ: ಅಕ್ರಮ ಚಟುವಟಿಕೆ ತಾಣ

ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಅವ್ಯವಸ್ಥೆ | ನಿರ್ವಹಣೆ ಕೊರತೆ, ಗಲೀಜಿನಲ್ಲೇ ವ್ಯಾಪಾರ

ಸಂತೋಷ ಜಿಗಳಿಕೊಪ್ಪ
Published 8 ಜುಲೈ 2024, 4:44 IST
Last Updated 8 ಜುಲೈ 2024, 4:44 IST
ಹಾವೇರಿ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಹೊಸ ವಾಣಿಜ್ಯ ಸಂಕೀರ್ಣದಲ್ಲಿರುವ ಶೌಚಾಲಯದ ಸ್ಥಿತಿ
ಹಾವೇರಿ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಹೊಸ ವಾಣಿಜ್ಯ ಸಂಕೀರ್ಣದಲ್ಲಿರುವ ಶೌಚಾಲಯದ ಸ್ಥಿತಿ   

ಹಾವೇರಿ: ನಿಂತಲೇ ನೀರು ನಿಂತು ದುರ್ನಾತ ಬೀರುವ ಕಾಲುವೆಗಳು. ನಿರ್ವಹಣೆ ಕೊರತೆಯಿಂದ ಗಲೀಜಾದ ಪ್ರದೇಶ. ಬಳಕೆಯಾಗದೇ ಪಾಳುಬಿದ್ದ ಮಳಿಗೆಗಳು. ಬಾಗಿಲು ಮುರಿದಿದ್ದರಿಂದ ದುಸ್ಥಿತಿಯಲ್ಲಿರುವ ಶೌಚಾಲಯಗಳು. ಆವರಣದಲ್ಲಿ ಎಲ್ಲೆಂದರಲ್ಲಿ ಕುಡಿದು ಬಿಸಾಕಿರುವ ಮದ್ಯದ ಬಾಟಲಿ– ಟೆಟ್ರಾ ಪೊಟ್ಟಣಗಳು...

ಇದು, ನಗರದ ಹೃದಯ ಭಾಗದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ದುಸ್ಥಿತಿ!

ತರಕಾರಿ, ಕಿರಾಣಿ ಹಾಗೂ ಇತರೆ ವಸ್ತುಗಳ ಹೋಲ್‌ಸೇಲ್ ಮಾರಾಟದ ಪ್ರಮುಖ ಮಾರುಕಟ್ಟೆಯಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ನಿರ್ವಹಣೆ ಕೊರತೆಯಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೂಳು ತುಂಬಿದ ಕಾಲುವೆಗಳು, ಕಸ ವಿಲೇವಾರಿ ವಿಳಂಬ, ಹಾಳಾದ ರಸ್ತೆ, ಬಳಕೆಯಾಗದ ಮಳಿಗೆಗಳು... ಸೇರಿದಂತೆ ಹಲವು ಸಮಸ್ಯೆಗಳು ಮಾರುಕಟ್ಟೆಯ ಹೆಸರನ್ನು ಹಾಳು ಮಾಡಿವೆ.

ADVERTISEMENT

ಮಾರುಕಟ್ಟೆ ಸುಧಾರಣೆಗಾಗಿ ಸರ್ಕಾರದ ಹಲವು ಯೋಜನೆಗಳ ಅನುದಾನ ಬಳಸಿಕೊಂಡು ನಗರಸಭೆ ವತಿಯಿಂದ ಮಳಿಗೆ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಮಳಿಗೆಗಳು ಹಾಗೂ ವಾಣಿಜ್ಯ ಸಂಕೀರ್ಣ ಪಾಳು ಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.

ನಗರದ ಅತ್ಯಂತ ಹಳೇ ಮಾರುಕಟ್ಟೆಯಾಗಿದ್ದರಿಂದ, ಹಲವು ವರ್ಷಗಳಿಂದ ವ್ಯಾಪಾರಿಗಳು ತಮ್ಮದೇ ನಿರ್ದಿಷ್ಟ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ತಮ್ಮ ಜಾಗವನ್ನು ಬಿಟ್ಟು ಬೇರೆಡೆ ಹೋಗಲು ವ್ಯಾಪಾರಿಗಳು ಒಪ್ಪುತ್ತಿಲ್ಲ. ಇದೇ ಕಾರಣಕ್ಕೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಬಳಕೆಯಾಗದ ಒಳಾಂಗಣ ಮಾರುಕಟ್ಟೆ

ಲಾಲ್‌ ಬಹದ್ದೂರ್ ಶಾಸ್ತ್ರಿ ತರಕಾರಿ ಮಾರುಕಟ್ಟೆಗೆಂದು ಒಳಾಂಗಣ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದೊಳಗೆ ಹಾಕರ್ಸ್ ಜೋನ್ ಸಹ ನಿರ್ಮಿಸಿ, ಹಂಚಿಕೆ ಮಾಡಲಾಗಿದೆ. ಆದರೆ, ವ್ಯಾಪಾರಿಗಳು ಮಾತ್ರ ಅದನ್ನು ಬಳಕೆ ಮಾಡುತ್ತಿಲ್ಲ.

‘ಒಳಾಂಗಣ ಮಾರುಕಟ್ಟೆಯಲ್ಲಿ ನೆರಳು, ಗಾಳಿ ಹಾಗೂ ಬೆಳಕು ಸಮರ್ಪಕವಾಗಿದೆ. ನಿರ್ದಿಷ್ಟ ಜಾಗವನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಇದುವರೆಗೂ ಯಾರೊಬ್ಬರೂ ನಿಗದಿತ ಜಾಗದಲ್ಲಿ ವ್ಯಾಪಾರ ಮಾಡುತ್ತಿಲ್ಲ. ಮಾರುಕಟ್ಟೆಯಿಂದ ಹೊರಗಿರುವ ತಮ್ಮ ಕಾಯಂ ಜಾಗದಲ್ಲೇ ಕುಳಿತುಕೊಳ್ಳುತ್ತಿದ್ದಾರೆ’ ಎಂದು ವ್ಯಾಪಾರಿ ಹಜರತ್ ಅಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಡೀ ಒಳಾಂಗಣ ಮಾರುಕಟ್ಟೆಯಲ್ಲಿ ನಾನೊಬ್ಬನ್ನೇ ವ್ಯಾಪಾರ ಮಾಡುತ್ತಿದ್ದೇನೆ. ಉಳಿದಂತೆ 100ಕ್ಕೂ ಹೆಚ್ಚು ಹಾಕರ್ಸ್ ಜೋನ್ ಖಾಲಿ ಇದೆ. ಇದರಿಂದಾಗಿ ಜನರು, ಇದೇ ಜಾಗದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಮದ್ಯ ಕುಡಿದವರು ಇಲ್ಲಿಯೇ ಬಂದು ಮಲಗುತ್ತಿದ್ದಾರೆ. ಮಾರುಕಟ್ಟೆಗೆ ಮೀಸಲಿಟ್ಟ ಜಾಗ ಪಾರ್ಕಿಂಗ್ ಹಾಗೂ ಮಲಗುವ ಜಾಗವಾಗಿ ಮಾರ್ಪಟ್ಟಿದೆ’ ಎಂದು ಸಮಸ್ಯೆ ಹೇಳಿಕೊಂಡರು.

ಪಾಳುಬಿದ್ದ ಹೊಸ ವಾಣಿಜ್ಯ ಸಂಕೀರ್ಣ

ಮಾರುಕಟ್ಟೆಯಲ್ಲಿ ಸದ್ಯ ಇರುವ ನಗರಸಭೆ ಮಳಿಗೆಗಳು ಶಿಥಿಲಾವಸ್ಥೆಯಲ್ಲಿವೆ. ಇದಕ್ಕೆ ಪರ್ಯಾಯವಾಗಿ 2015–16ನೇ ಸಾಲಿನಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದ್ದು, ಇದರಲ್ಲಿ 28 ಪ್ರತ್ಯೇಕ ಮಳಿಗೆಗಳಿವೆ. ಇವುಗಳನ್ನು ಹಂಚಿಕೆ ಮಾಡದಿದ್ದರಿಂದ, ಇಡೀ ವಾಣಿಜ್ಯ ಸಂಕೀರ್ಣ ಪಾಳು ಬಿದ್ದಿದೆ.

ಹಳೇ ಮಳಿಗೆಗಳ ಹಿಂಭಾಗದ ಜಾಗದಲ್ಲಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಮಾರುಕಟ್ಟೆಗೆ ಬರುವ ಗ್ರಾಹಕರು, ಹಳೇ ಮಳಿಗೆಗಳಿಗೆ ಹೆಚ್ಚು ಹೋಗುತ್ತಿದ್ದಾರೆ. ಹಿಂಬದಿಯಲ್ಲಿರುವ ಮಳಿಗೆಯತ್ತ ಯಾರೂ ಹೋಗುತ್ತಿಲ್ಲ. ಇದೇ ಕಾರಣಕ್ಕೆ ಹೊಸ ವಾಣಿಜ್ಯ ಸಂಕೀರ್ಣಗಳಲ್ಲಿ ಮಳಿಗೆ ಬಾಡಿಗೆ ಪಡೆಯಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ನಿರ್ವಹಣೆ ಕೊರತೆ

ನಿರ್ವಹಣೆ ಹಾಗೂ ಭದ್ರತೆ ಕೊರತೆಯಿಂದಾಗಿ ವಾಣಿಜ್ಯ ಸಂಕೀರ್ಣ, ಮದ್ಯ ಕುಡಿಯವ ಹಾಗೂ ಅಕ್ರಮ ಚಟುವಟಿಕೆ ನಡೆಸುವ ತಾಣವಾಗಿದೆ. ಇಲ್ಲಿಯ ಶೌಚಾಲಯದ ಬಾಗಿಲು ಮುರಿದಿರುವ ಕಿಡಿಗೇಡಿಗಳು, ಒಳಗೆ ಮದ್ಯದ ಪೊಟ್ಟಣ ಹಾಗೂ ಬಾಟಲಿ ಎಸೆದಿದ್ದಾರೆ. ಪಕ್ಕದ ಜಾಗದಲ್ಲಿಯೂ ಮದ್ಯದ ಪೊಟ್ಟಣಗಳು ಬಿದ್ದಿವೆ. ಸಂಕೀರ್ಣಗಳ ಮುಂಭಾಗದಲ್ಲಿ ಮದ್ಯದ ಬಾಟಲಿಗಳನ್ನು ಒಡೆಯಲಾಗಿದ್ದು, ಎಲ್ಲೆಂದರಲ್ಲಿ ಗಾಜಿನ ಚೂರುಗಳು ಬಿದ್ದಿವೆ. ಸಂಕಿರ್ಣ ನಿರ್ಮಿಸಿರುವ ನಗರಸಭೆ, ಅವುಗಳ ಭದ್ರತೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹಾವೇರಿಯ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಮೀಸಲಿಟ್ಟ ಜಾಗದಲ್ಲಿ ಬೈಕ್‌ಗಳನ್ನು ನಿಲ್ಲಿಸಿರುವುದು

ಹಾವೇರಿಯ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಹೊಸ ವಾಣಿಜ್ಯ ಸಂಕೀರ್ಣ ಮಳಿಗೆ ಎದುರು ವಿಲೇವಾರಿಯಾಗದ ಕಸದ ರಾಶಿ         – ಪ್ರಜಾವಾಣಿ ಚಿತ್ರಗಳು/ ಮಾಲತೇಶ ಇಚ್ಚಂಗಿ

‘ನಿತ್ಯವೂ ಹಣ ಸಂಗ್ರಹ’

‘ನಗರಸಭೆಯ ಸಿಬ್ಬಂದಿ ನಿತ್ಯವೂ ಮಾರುಕಟ್ಟೆಗೆ ಬರುತ್ತಾರೆ. ದಿನಕ್ಕೆ ₹ 20 ಪಡೆದುಕೊಂಡು ಹೋಗುತ್ತಾರೆ. ರಶೀದಿ ಕೇಳಿದರೆ ಕೊಡುವುದಿಲ್ಲ’ ಎಂದು ವ್ಯಾಪಾರಿ ಹಜರತ್ ಅಲಿ ಹೇಳಿದರು. ‘ಹಣ ಪಡೆಯಲು ಬಂದಾಗ ಮಾರುಕಟ್ಟೆಯ ಸಮಸ್ಯೆಗಳನ್ನು ಅವರ ಬಳಿ ಹೇಳುತ್ತೇವೆ. ಆದರೆ ಅವರು ನಮಗೆ ಸಂಬಂಧವಿಲ್ಲವೆಂದು ಹೇಳಿ ಹೊರಟು ಹೋಗುತ್ತಿದ್ದಾರೆ. ಹೀಗಾಗಿ ಯಾರಿಗೆ ಸಮಸ್ಯೆ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದು ತಿಳಿಸಿದರು. ‘ನಗರಸಭೆ ಆಯುಕ್ತ ಹಾಗೂ ಹಿರಿಯ ಅಧಿಕಾರಿಗಳು ಮಾರುಕಟ್ಟೆಯತ್ತ ಸುಳಿಯುವುದಿಲ್ಲ. ತಮ್ಮ ಸಿಬ್ಬಂದಿಯನ್ನಷ್ಟೇ ಕಳುಹಿಸಿ ಕಚೇರಿಯಲ್ಲೇ ಕುಳಿತು ಆಡಳಿತ ಮಾಡುತ್ತಾರೆ. ಇದರಿಂದ ಅವರಿಗೆ ವ್ಯಾಪಾರಿಗಳು ಹಾಗೂ ಗ್ರಾಹಕರ ಕಷ್ಟ ಗೊತ್ತಾಗುತ್ತಿಲ್ಲ’ ಎಂದು ದೂರಿದರು. 

ಮಳೆ ಬಂದರೆ ಫಜೀತಿ...

‘ಮಳೆಗಾಲದಲ್ಲಿ ಮಾರುಕಟ್ಟೆ ಸ್ಥಿತಿ ತುಂಬಾ ಶೋಚನೀಯ. ಕಾಲುವೆ ಹಾಗೂ ಚರಂಡಿಗಳು ಹೂಳು ತುಂಬಿಕೊಂಡಿದ್ದು ಮಳೆಯ ನೀರು ಹರಿದು ಹೋಗಲು ಜಾಗವಿಲ್ಲ. ಎಲ್ಲೆಂದರಲ್ಲಿ ಹರಿಯುವ ನೀರು ಮಳಿಗೆಗೆ ನುಗ್ಗುತ್ತದೆ. ಜೊತೆಗೆ ಮಳೆ ಬಂದ ಸಂದರ್ಭದಲ್ಲಿ ಇಡೀ ಮಾರುಕಟ್ಟೆ ಕೊಳಚೆ ಪ್ರದೇಶವಾಗುತ್ತದೆ. ಈ ಬಗ್ಗೆ ನಗರಸಭೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿಲ್ಲ’ ಎಂದು ವ್ಯಾಪಾರಿಗಳು ಆರೋಪಿಸಿದರು. 

ಪೊಲೀಸ್ ಗಸ್ತು ಹೆಚ್ಚಳಕ್ಕೆ ಆಗ್ರಹ

‘ಮಾರುಕಟ್ಟೆಯಲ್ಲಿ ಆಗಾಗ ಕಳ್ಳತನಗಳೂ ನಡೆಯುತ್ತಿವೆ. ವ್ಯಾಪಾರ ಹೆಚ್ಚಿರುವ ಅಂಗಡಿಗಳು ಹಾಗೂ ಮಳಿಗೆಗಳ ಬಾಗಿಲು ಮುರಿದು ಒಳನುಗ್ಗುವ ಕಳ್ಳರು ಹಣ ಹಾಗೂ ಇತರೆ ವಸ್ತುಗಳನ್ನು ಕದ್ದುಕೊಂಡು ಹೋಗುತ್ತಿದ್ದಾರೆ’ ಎಂದು ವ್ಯಾಪಾರಿ ಶಂಕ್ರಪ್ಪ ಹೇಳಿದರು. ‘ಮಾರುಕಟ್ಟೆಯಲ್ಲಿ ಪೊಲೀಸರು ಗಸ್ತು ತಿರುಗುವ ಪ್ರಮಾಣ ಕಡಿಮೆ ಇದೆ. ಯಾವಾಗಲಾದರೂ ಠಾಣೆಗೆ ದೂರು ನೀಡಿದರೆ ಮಾತ್ರ ಅವರು ಮಾರುಕಟ್ಟೆಗೆ ಬಂದು ಹೋಗುತ್ತಾರೆ. ನಿತ್ಯವೂ ಗಸ್ತು ಹೆಚ್ಚಿಸಿದರೆ ಕಳ್ಳತನ ಕಡಿಮೆಯಾಗುತ್ತವೆ’ ಎಂದು ತಿಳಿಸಿದರು.

ಹಳೇ ಮಳಿಗೆ ತೆರವಿಗೆ ತಯಾರಿ

ನಗರಸಭೆ ‘ಮಾರುಕಟ್ಟೆಯಲ್ಲಿರುವ ಹಳೇ ಮಳಿಗೆಗಳು ಶಿಥಿಲಗೊಂಡಿವೆ. ಅವುಗಳನ್ನು ತೆರವು ಮಾಡಲು ತಯಾರಿ ನಡೆದಿದೆ’ ಎಂದು ನಗರಸಭೆಯ ಅಧಿಕಾರಿಯೊಬ್ಬರು ಹೇಳಿದರು. ‘ಹಳೇ ಮಳಿಗೆ ಹಿಂಭಾಗದಲ್ಲಿಯೇ ಹೊಸ ವಾಣಿಜ್ಯ ಸಂಕೀರ್ಣವಿದೆ. ಹಳೇ ಮಳಿಗೆ ತೆರವು ಮಾಡಿದರೆ ಹೊಸ ಸಂಕೀರ್ಣದಲ್ಲಿರುವ ಮಳಿಗೆಗಳಿಗೆ ಬೇಡಿಕೆ ಬರುತ್ತದೆ. ಅವಾಗಲೇ ಹರಾಜು ಪ್ರಕ್ರಿಯೆ ನಡೆಸಿ ಮಳಿಗೆ ಹಂಚಿಕೆ ಮಾಡಲಾಗಿದೆ. ಬಳಿಕ ನಿರ್ವಹಣೆ ಯಥಾಪ್ರಕಾರ ಮುಂದುವರಿಯಲಿದೆ’ ಎಂದು ತಿಳಿಸಿದರು.

ಹೊಸ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಹಂಚಿಕೆಗೆ ನಾಲ್ಕು ಬಾರಿ ಹರಾಜು ಕರೆಯಲಾಗಿತ್ತು. ಠೇವಣಿ ಹಾಗೂ ಬಾಡಿಗೆ ಹೆಚ್ಚು ಎಂಬ ಕಾರಣಕ್ಕೆ ಯಾರೂ ಭಾಗವಹಿಸಿಲ್ಲ. ಕೆಲ ಸ್ಥಳೀಯ ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸಿದ ನಂತರ ಪುನಃ ಹರಾಜು ಪ್ರಕ್ರಿಯೆ ನಡೆಸಲಾಗುವುದು.
ದುರ್ಗೇಶ ಬಿ.ಎಂ, ನಗರಸಭೆ ಕಂದಾಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.