ADVERTISEMENT

ಹಾವೇರಿ–ಬ್ಯಾಡಗಿ; ಕುರಿ, ನಾಯಿಯನ್ನು ಪರಚಿ ಕೊಂದ ಚಿರತೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 10:07 IST
Last Updated 12 ಜೂನ್ 2024, 10:07 IST
   

ಹಾವೇರಿ/ಬ್ಯಾಡಗಿ: ಜಿಲ್ಲೆಯ ಕೆಲ ಅರಣ್ಯ ಪ್ರದೇಶ ಹಾಗೂ ಅಕ್ಕ–ಪಕ್ಕದ ತೋಟಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಾಯಿ ಹಾಗೂ ಕುರಿಯನ್ನು ಪರಚಿ ಕೊಂದಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಹಾವೇರಿ ತಾಲ್ಲೂಕಿನ ಕನವಳ್ಳಿ, ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರು, ಕದರಮಂಡಲಗಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿರತೆ ಓಡಾಡಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆಯಿಂದ ಗೊತ್ತಾಗಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

‘ಎರಡು ದಿನಗಳ ಹಿಂದೆಯಷ್ಟೇ ಕನವಳ್ಳಿ ಹಾಗೂ ಕಲ್ಲೆದೇವರು ಬಳಿಯ ಅರಣ್ಯ ಪ್ರದೇಶದಲ್ಲಿ ಚಿರತೆ ಓಡಾಡಿದೆ. ಇದೇ ಸಂದರ್ಭದಲ್ಲಿ ನಾಯಿ ಹಾಗೂ ಕುರಿಯನ್ನು ಪರಚಿ ಕೊಂದಿದೆ. ಜಮೀನಿನಲ್ಲಿಯೇ ನಾಯಿ ಹಾಗೂ ಕುರಿ ಮೃತದೇಹಗಳು ಬಿದ್ದಿದ್ದವು’ ಎಂದು ಗ್ರಾಮಸ್ಥರು ಹೇಳಿದರು.

ADVERTISEMENT

‘ಈ ಭಾಗದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದೆ. ಜಮೀನಿನಲ್ಲಿ ಕೆಲಸ ಮಾಡಲು ಹಾಗೂ ಓಡಾಡಲು ಜನರು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಬೇಕು’ ಎಂದು ಒತ್ತಾಯಿಸಿದರು.

‘ಹಾವೇರಿ ಹಾಗೂ ಬ್ಯಾಡಗಿ ತಾಲ್ಲೂಕಿನ ಅರಣ್ಯ ಪ‍್ರದೇಶದಲ್ಲಿ ಚಿರತೆ ಓಡಾಡುತ್ತಿದೆ. ಹೆಜ್ಜೆ ಗುರುತುಗಳನ್ನು ಆಧರಿಸಿ ಚಿರತೆಯನ್ನು ಪತ್ತೆ ಮಾಡಲಾಗುತ್ತಿದೆ. ಸದ್ಯ ಕದರಮಂಡಲಿಯನ್ನು ಚಿರತೆ ಇರುವ ಮಾಹಿತಿ ಇದ್ದು, ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ಚಿರತೆಯನ್ನು ಹಿಡಿಯುವ ಕೆಲಸ ಮುಂದುವರಿಸಿದ್ದಾರೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.