ಹಾವೇರಿ:ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರವಾಗಿ ಪಕ್ಷದ ಹಿರಿಯರು ಮತ್ತು ಜೆಡಿಎಸ್ ಮುಖಂಡರ ಜೊತೆ ಮಾತುಕತೆ ನಡೆಸಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಹಾವೇರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಇಷ್ಟು ದಿನ ನಾವು ಕಾಂಗ್ರೆಸ್ ಪಕ್ಷ ಎಂದರೆ ಮಾಸ್ ಬೇಸ್ ಪಕ್ಷ ಎಂಬ ಭ್ರಮೆಯಲ್ಲಿ ಕಾಲ ಕಳೆದಿದ್ದೇವೆ. ಆ ಯೋಚನೆಯಿಂದ ಹೊರಬಂದು ಕೇಡರ್ ಬೇಸ್ ಮೂಲಕ ಪಕ್ಷವನ್ನು ಸಂಘಟಿಸಬೇಕು. ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷ ಹಿನ್ನೆಲೆಯನ್ನು ಮರೆಮಾಚಿ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಪಕ್ಷದ ಮುಖವಾಡ ಕಳಚುವ ಮಟ್ಟಿಗೆ ಪಕ್ಷದ ಕಾರ್ಯಕರ್ತರನ್ನು ನಾವು ತಯಾರಿಸಬೇಕಾಗಿದೆ ಎಂದರು.
ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಕ್ಷವನ್ನು ಸಂಘಟಿಸಬೇಕಾಗಿದೆ. ಸಾಮಾಜಿಕ ನ್ಯಾಯ ತತ್ವವನ್ನು ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ವಿಚಾರ ಸಂಕಿರಣಗಳನ್ನು, ತರಬೇತಿಗಳನ್ನು ನಡೆಸುವ ಮೂಲಕ ಪ್ರಬುದ್ಧ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕಾಗಿದೆ. ಅಂದಾಗ ಸಾಮಾನ್ಯ ಪ್ರಜೆಗೆ ದೇಶ ಇತಿಹಾಸವನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜೂನ್ 7ರಂದು ಪದಗ್ರಹಣ:ಎರಡು ತಿಂಗಳ ಹಿಂದೆ ನೇಮಕಗೊಂಡಿರುವ ಕೆಪಿಸಿಸಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ 7ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, 8 ಸಾವಿರ ಟವಿಗಳಲ್ಲಿ 4 ಲಕ್ಷ ಜನರು ಸಾಕ್ಷಿಯಾಗಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯದಂತೆ ಈ ಸಮಾರಂಭವನ್ನು ಅದ್ಧೂರಿಯಾಗಿ ಮಾಡುವ ಚಿಂತನೆ ಇತ್ತು. ಕೊರೊನಾ ಸಂಕಷ್ಟ ಸಮಯದಲ್ಲಿ ಅಂತಹ ಸಮಾರಂಭ ಮಾಡಿದರೆ, ವಿರೋಧಿಗಳ ಟೀಕೆಗೆ ತುತ್ತಾಬೇಕಾಗುತ್ತದೆ ಎಂಬ ಕಾರಣದಿಂದ ಹಿರಿಯ ನಾಯಕ ಸಲಹೆ ಮೇರೆಗೆ 200 ಜನರ ಸಮ್ಮುಖದಲ್ಲಿ ಪದಗ್ರಹಣ ಸಮಾರಂಭ ಹಮ್ಮಿಕೊಂಡಿದ್ದೇವೆ ಎಂದರು.
ಎರಡು ತಿಂಗಳಿನಿಂದ ನಮ್ಮ ಪಕ್ಷ ಕೋವಿಡ್‌ನಲ್ಲಿ ಸಕ್ರಿಯವಾಗಿಕೆಲಸ ಮಾಡಿದೆ. ಬಿಜೆಪಿ ಸರ್ಕಾರ ಇದ್ದರೂ, ಅವರಿಗಿಂತ ಹೆಚ್ಚು ಜನರ ಸಂಕಷ್ಟ ದೂರ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಮ್ಮನ್ನು ಉತ್ತೇಜಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.