ADVERTISEMENT

ಕುಡಿಯುವ ನೀರಿನ ಗ್ಯಾರಂಟಿ ಕೊಡಿ: ಬೊಮ್ಮಾಯಿ

ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 14:16 IST
Last Updated 17 ಮಾರ್ಚ್ 2024, 14:16 IST
ಹಿರೇಕೆರೂರಿನ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ ಅವರ ಗೃಹ ಕಚೇರಿಯಲ್ಲಿ ಹಿರೇಕೆರೂರ-ರಟ್ಟೀಹಳ್ಳಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದ ಲೋಕಸಭಾ ಚುನವಣಾ ಪೂರ್ವಭಾವಿ ಸಭೆಯಲ್ಲಿ ಶಾಸಕ ಹಾಗೂ ಹಾವೇರಿ- ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿದರು
ಹಿರೇಕೆರೂರಿನ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ ಅವರ ಗೃಹ ಕಚೇರಿಯಲ್ಲಿ ಹಿರೇಕೆರೂರ-ರಟ್ಟೀಹಳ್ಳಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದ ಲೋಕಸಭಾ ಚುನವಣಾ ಪೂರ್ವಭಾವಿ ಸಭೆಯಲ್ಲಿ ಶಾಸಕ ಹಾಗೂ ಹಾವೇರಿ- ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿದರು   

ಹಿರೇಕೆರೂರು: ಗ್ಯಾರಂಟಿಗಳು ಬೇಡ, ಕುಡಿಯುವ ನೀರಿನ ಗ್ಯಾರಂಟಿ ಕೊಡಿ ಎಂದು ರಾಜ್ಯದ ಜನತೆ ಕೇಳುತ್ತಿದ್ದಾರೆ. ನೀರು ನೀಡದ ಸರ್ಕಾರದ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ ಉತ್ತರ ನೀಡುತ್ತಾರೆ ಎಂದು ಶಿಗ್ಗಾಂವಿ ಕ್ಷೇತ್ರದ ಶಾಸಕ ಹಾಗೂ ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಮಾಜಿ ಸಚಿವ ಬಿ.ಸಿ.ಪಾಟೀಲ ಅವರ ಗೃಹ ಕಚೇರಿಯಲ್ಲಿ ಹಿರೇಕೆರೂರ-ರಟ್ಟೀಹಳ್ಳಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರೊಂದಿಗೆ ಭಾನುವಾರ ನಡೆದ ಲೋಕಸಭಾ ಚುನವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ನಾಯಕರು, ಶಾಸಕರು ಜನರಿಗೆ ಮುಖ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಬಂದಿದೆ. ಕುಡಿಯುವ ನೀರಿಗೆ ಯಾವುದೇ ಯೋಜನೆ ರೂಪಿಸಿಲ್ಲ. ರಾಜ್ಯದಲ್ಲಿ 800 ಜನರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಬರಿ ಸುಳ್ಳು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸುವಂತ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಒಂದು ಬಾರಿ ಮೋಸ ಮಾಡಬಹುದು. ಪದೇ ಪದೇ ಮತದಾರರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದರು.

ADVERTISEMENT

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರಿಗೆ ಲೋಕಸಭಾ ಚುನಾವಣೆ ಟಿಕೆಟ್ ದೊರಕಿರುವುದು ಸಂತಸದ ವಿಷಯ. ಅಪಸ್ವರ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳಾದರೂ ನಮ್ಮ ತಾಲ್ಲೂಕಿನ ಅಭಿವೃದ್ಧಿಗೆ ಹಣ ಬಂದಿಲ್ಲ. ಗ್ಯಾರಂಟಿಗಳ ಹೆಸರಲ್ಲಿ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಜನರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ನಮ್ಮ ಸರ್ಕಾರ ಇದ್ದಾಗ ಹಿರೇಕೆರೂರು ತಾಲ್ಲೂಕಿನ ಅಭಿವೃದ್ಧಿಗೆ ವಿವಿಧ ಯೋಜನೆಗಳಿಗೆ ₹1,300 ಕೋಟಿ ಅನುದಾನ ತಂದಿದ್ದೆ, ಆದರೆ 10 ತಿಂಗಳಾದರೂ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಿಲ್ಲ. ರೈತರಿಗೆ ನೀರು ಒದಗಿಸಿಲ್ಲ. ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ತಾಲ್ಲೂಕಿಗೆ ಎರಡು ನೀರಾವರಿ ಯೋಜನೆಗಳನ್ನು ತಂದಿದ್ದೆ. ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿದರು. ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಸುಷ್ಟಿ ಪಾಟೀಲ, ಡಿ.ಎಂ. ಸಾಲಿ. ಎನ್.ಎಂ. ಈಟೇರ, ಲಿಂಗರಾಜ ಚಪ್ಪರದಹಳ್ಳಿ, ಆರ್.ಎನ್. ಗಂಗೋಳ, ಶಿವಕುಮಾರ ತಿಪ್ಪಶೇಟ್ಟಿ, ದೇವರಾಜ ನಾಗಣ್ಣನವರ, ದುರಗೇಶ ತಿರಕಪ್ಪನವರ, ಬಸವರಾಜ ಕೇಲಗಾರ, ಆನಂದಪ್ಪ ಹಾದಿಮನಿ, ಬಸಮ್ಮ ಅಬಲೂರ, ಶೋಭಾ ನಿಸ್ಸಿಮಗೌಡ್ರ, ಭಾರತಿ ಅಳಬಂಡಿ, ಡಿ.ಸಿ.ಪಾಟೀಲ, ರವಿಶಂಕರ ಬಾಳಿಕಾಯಿ, ಬಿ.ಎನ್.ಬಣಕಾರ ಇದ್ದರು.

ಈ ಚುನಾವಣೆಯಲ್ಲಿ ಗ್ಯಾರಂಟಿಗಳ ಕೆಲಸ ನಡೆಯಲ್ಲ. ರಾಜ್ಯದ ಜನತೆ ಇನ್ನೊಂದು ಬಾರಿ ಮೋದಿಯವರು ದೇಶದ ಪ್ರಧಾನಿಯಾಗಬೇಕು ಎಂದು ತಿರ್ಮಾನಿಸಿದ್ದಾರೆ

-ಬಸವರಾಜ ಬೊಮ್ಮಾಯಿ ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.