ADVERTISEMENT

ಮನೆ ಬೀಗ ಹಾಕಿ ಉಪನಿರ್ದೇಶಕ ನಾಪತ್ತೆ: ಬಾಗಿಲು ಕಾಯುತ್ತಿರುವ ಲೋಕಾಯುಕ್ತ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 12:31 IST
Last Updated 12 ನವೆಂಬರ್ 2024, 12:31 IST
<div class="paragraphs"><p>ರಾಣೆಬೆನ್ನೂರಿನಲ್ಲಿರುವ ಉಪನಿರ್ದೇಶಕ ಶ್ರೀನಿವಾಸ್ ಆಲದರ್ತಿ ಮನೆ</p></div>

ರಾಣೆಬೆನ್ನೂರಿನಲ್ಲಿರುವ ಉಪನಿರ್ದೇಶಕ ಶ್ರೀನಿವಾಸ್ ಆಲದರ್ತಿ ಮನೆ

   

ಹಾವೇರಿ: ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ಆಲದರ್ತಿ ತಮ್ಮ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ. ಅವರ ಮನೆಗೆ ಸೋಮವಾರ ಬೆಳಿಗ್ಗೆ 6 ಗಂಟೆಗೆ ಬಂದಿರುವ ಲೋಕಾಯಕ್ತ ಪೊಲೀಸರು, 12 ಗಂಟೆಯಿಂದ ಬಾಗಿಲು ಬಳಿಯೇ ಕುಳಿತು ಶ್ರೀನಿವಾಸ್ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಶ್ರೀನಿವಾಸ್ ಆಲದರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿ ಲೋಕಾಯುಕ್ತ ಪೊಲೀಸರು, ಅವರ ರಾಣೆಬೆನ್ನೂರಿನಲ್ಲಿರುವ ಮನೆಗೆ ಸೋಮವಾರ ಬೆಳಿಗ್ಗೆ 6 ಗಂಟೆಗೆ ಬಂದಿದ್ದಾರೆ. ಆದರೆ, ಶ್ರೀನಿವಾಸ್ ಮನೆಯಲ್ಲಿ ಯಾರೂ ಇಲ್ಲ. ಬೀಗ ಹಾಕಿಕೊಂಡು ಶ್ರೀನಿವಾಸ್, ಸ್ವಂತ ಊರಾದ ಯಾದಗಿರಿಗೆ ಹೋಗಿರುವುದಾಗಿ ಮಾಹಿತಿ ಲಭ್ಯವಾಗಿದೆ.

ADVERTISEMENT

ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲು ಬಂದಿರುವ ಲೋಕಾಯುಕ್ತ ಪೊಲೀಸರು, ಸ್ಥಳೀಯ ಪೊಲೀಸರ ಜೊತೆಯಲ್ಲಿಯೇ ಮನೆ ಕಾಯುತ್ತಿದ್ದಾರೆ. ಮಧ್ಯಾಹ್ನ ಊಟ ಹಾಗೂ ತಿಂಡಿಯನ್ನು ಸಹ ಮನೆ ಹೊರಗೆಯೇ ಕುಳಿತು ತಿಂದಿದ್ದಾರೆ.

‘ಶ್ರಿನಿವಾಸ್ ಅವರ ತಾಯಿ ಯಾದಗಿರಿಯಲ್ಲಿ ತೀರಿಕೊಂಡಿರುವ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಅವರು ಯಾದಗಿರಿಗೆ ಹೋಗಿರುವುದು ಗೊತ್ತಾಗಿದೆ. ಪರಿಚಯಸ್ಥರ ಮೂಲಕ ಅವರ ಜೊತೆ ಮಾತನಾಡಲಾಗಿದೆ. ಅವರು ರಾಣೆಬೆನ್ನೂರಿಗೆ ಬರುತ್ತಿದ್ದಾರೆ. ಅವರ ಬರುವಿಕೆಗಾಗಿ ಮನೆ ಎದುರು ಕಾದು ಕುಳಿತಿದ್ದೇವೆ’ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.

‘ಬೆಳಿಗ್ಗೆಯೇ ಯಾದಗಿರಿ ಬಿಟ್ಟಿರುವುದಾಗಿ ಹೇಳಿರುವ ಶ್ರೀನಿವಾಸ್, ಸಂಜೆಯಾದರೂ ರಾಣೆಬೆನ್ನೂರಿಗೆ ಬಂದಿಲ್ಲ. ರಾತ್ರಿಯವರೆಗೂ ಕಾಯುತ್ತೇವೆ. ನಂತರ, ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.