ಹಾವೇರಿ: ಬೆಳಗಾವಿ ಜಿಲ್ಲೆಯ ವಂಟಮೂರಿಯ ಪ್ರಕರಣ ಮಾಸುವ ಮುನ್ನವೇ, ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮುದೇನೂರಿನಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ, ಥಳಿಸಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮುದೇನೂರಿನಲ್ಲಿ ಪ್ರೇಮಿಗಳಿಬ್ಬರು ಮನೆಬಿಟ್ಟು ಹೋದ ಕಾರಣ, ಯುವತಿಯ ಮನೆಯವರು ಯುವಕನ ಮಾವ, ಮುದೇನೂರು ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ ಕಬ್ಬಾರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ್ದಾರೆ ಎಂದು ಹಲಗೇರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಮುದೇನೂರಿನ ಯುವಕ ಮತ್ತು ಚಳಗೇರಿಯ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಮನೆಗಳಲ್ಲಿ ಒಪ್ಪಿಗೆ ಸಿಗದ ಕಾರಣ ನಾಲ್ಕೈದು ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ನಂತರ ಯುವತಿಯ ಕಡೆಯವರು ಬೈಕ್ ಮತ್ತು ಕಾರಿನಲ್ಲಿ ಸೋಮವಾರ ರಾತ್ರಿ ಸುಮಾರು 12 ಮಂದಿ ಯುವಕನ ಮನೆಗೆ ನುಗ್ಗಿ, ಗಲಾಟೆ ಮಾಡಿ ದಾಂಧಲೆ ಎಬ್ಬಿಸಿದ್ದಾರೆ. ನಂತರ ಯುವಕನ ಮಾವ ಪ್ರಶಾಂತ ಅವರನ್ನು ಥಳಿಸಿದ್ದಾರೆ ಎಂದು ದೂರಲಾಗಿದೆ.
ಈ ಸಂದರ್ಭದಲ್ಲಿ ಬಿಡಿಸಲು ಬಂದ ಹೆಣ್ಣುಮಕ್ಕಳನ್ನು ಎಳೆದಾಡಿ, ಹಣ ಮತ್ತು ಚಿನ್ನಾಭರಣವನ್ನು ಕಿತ್ತುಕೊಂಡಿದ್ದಾರೆ. ನಂತರ ರಾಣೆಬೆನ್ನೂರಿನ ದನದ ಮಾರುಕಟ್ಟೆಗೆ ಪ್ರಶಾಂತ ಅವರನ್ನು ಕರೆದೊಯ್ದು, ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಯುವತಿಗೆ ಮತ್ತೊಬ್ಬ ಯುವಕನೊಂದಿಗೆ 20 ದಿನಗಳ ಹಿಂದೆ ನಿಶ್ಚಿತಾರ್ಥ ಆಗಿತ್ತು. ಆದರೆ, ಇದು ಯುವತಿಗೆ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ.
ಹಾವೇರಿಯ ದೇವಸ್ಥಾನದಲ್ಲಿ ಸೋಮವಾರ ಮದುವೆಯಾದ ಪ್ರೇಮಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರ ಬಳಿ ಮಂಗಳವಾರ ರಕ್ಷಣೆ ಕೋರಿದ್ದಾರೆ.
‘ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಈಚೆಗೆ ಸಭೆ ನಡೆದಿತ್ತು. ಯುವತಿಯನ್ನು ಮನೆಗೆ ಕಳುಹಿಸುವಂತೆ ಯುವತಿಯ ಮನೆಯವರು ಕೋರಿದ್ದರು. ಆದರೆ, ಯುವತಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮುದೇನೂರು ಗ್ರಾಮದಲ್ಲಿ ಗಲಾಟೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇದು ಬೆಳಗಾವಿ ಜಿಲ್ಲೆಯ ವಂಟಮೂರಿ ಮಾದರಿಯ ಪ್ರಕರಣವಲ್ಲ’ ಎಂದು ಎಸ್ಪಿ ಅಂಶುಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.