ರಟ್ಟೀಹಳ್ಳಿ: ‘ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ₹680 ಕೋಟಿ ಎನ್.ಡಿ.ಆರ್.ಎಫ್. ಹಣ ಈಗಾಗಲೇ ಮಂಜೂರಾಗಿದೆ. ಅದನ್ನೇ ತಮಗೆ ಪ್ರತಿ ತಿಂಗಳು ₹2ಸಾವಿರ ದಂತೆ ನೀಡುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ’ ಎಂದು ಹಾವೇರಿ- ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ದೂರಿದರು.
ಅವರು ತಾಲ್ಲೂಕಿನ ಕುಡಪಲಿ ಗ್ರಾಮದಲ್ಲಿ ಬುಧವಾರ ಲೋಕಸಭಾ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರದಿಂದ ಹಣ ಬಂದಿರುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಸ್ವಾತಂತ್ರ್ಯಾ ನಂತರ ಬಂದ ಹಲವಾರು ಪ್ರಧಾನಿಗಳಿಗೆ ದೇಶದ ಬಡತನ ಹೋಗಲಾಡಿಸಲು ಸಾಧ್ಯವಾಗಿರಲಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ, ಶಿಕ್ಷಣ, ವಸತಿ ಸೌಕರ್ಯ ನೀಡುವ ಮೂಲಕ 15 ಕೋಟಿ ಭಾರತೀಯರನ್ನು ಬಡತನ ರೇಖೆಯಿಂದ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕಳೆದ 10 ತಿಂಗಳಿಂದ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕೈಗೊಂಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಕೈಗೊಂಡ ಮಡ್ಲೂರ ಏತ ನೀರಾವರಿ ಯೋಜನೆ, ಸರ್ವಜ್ಞ ಏತ ನೀರಾವರಿ ಯೋಜನೆಗಳಿಗೆ ಇನ್ನೂ ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಜೆಪಿಯ ನರೇಂದ್ರ ಮೋದಿ ಸರ್ಕಾರ ಬಡವರ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ದೇಶದ ಸುಭದ್ರತೆಗೆ ಸಾಕಷ್ಟು ಒತ್ತು ನೀಡಿದ್ದಾರೆ. ಕೋವಿಡ ಲಸಿಕೆ ದೇಶದಾದ್ಯಂತ ಉಚಿತವಾಗಿ ನೀಡುವ ಮೂಲಕ ಭಾರತೀಯ ರಕ್ಷಣೆ ಮಾಡಿದ್ದಾರೆ. ಅಂತಹ ಮಹಾನ್ ನಾಯಕನನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಅಮೂಲ್ಯ ಮತ ನೀಡಿ ಅವರನ್ನು ಚುನಾಯಿಸಬೇಕು ಎಂದರು.
ಬಿಜೆಪಿ ಮುಖಂಡರಾದ ಎಸ್.ಎಸ್.ಪಾಟೀಲ, ದೇವರಾಜ ನಾಗಣ್ಣನವರ, ಪಾಲಾಕ್ಷಗೌಡ ಪಾಟೀಲ, ಲಿಂಗರಾಜ ಚಪ್ಪರದಹಳ್ಳಿ, ಡಿ.ಎಂ.ಸಾಲಿ. ಎನ್.ಎಂ. ಈಟೇರ, ಸೃಷ್ಟಿ ಪಾಟೀಲ, ಆರ್.ಎನ್. ಗಂಗೋಳ, ಬಿ.ಎನ್. ಬಣಕಾರ, ಶಿವಕುಮಾರ ತಿಪ್ಪಶೆಟ್ಟಿ, ಲತಾ ಬಣಕಾರ, ರವಿಶಂಕರ ಬಾಳಿಕಾಯಿ, ಶೇಖಣ್ಣ ತುಮ್ಮಿನಕಟ್ಟಿ, ಆನಂದಪ್ಪ ಹಾದಿಮನಿ, ಸುಶೀಲ ನಾಡಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.