ಬ್ಯಾಡಗಿ: ‘ದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯ, ಶಾಂತಿ ಹಾಗೂ ಅಹಿಂಸೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ ಗಾಂಧೀಜಿಯವರು ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿಟ್ಟಿದ್ದರು’ ಎಂದು ರಾಜ್ಯ ಅರಣ್ಯ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಬುಧವಾರ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ ಮಾತನಾಡಿ, ‘ಲಾಲ್ ಬಹಾದ್ದೂರ್ ಶಾಸ್ತ್ರೀ ದೇಶ ಕಂಡ ಅಪ್ರತಿಮ, ಮುತ್ಸದ್ದಿ ರಾಜಕಾರಣಿಯಾಗಿದ್ದರು. ದೇಶದ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.
ಶಿಕ್ಷಕ ಪ್ರಕಾಶ ಕೊರಮರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ಕಚೇರಿಗಳ ಆವರಣ ಸ್ವಚ್ಛತೆ ಕುರಿತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಕೆ.ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ, ಸದಸ್ಯರಾದ ಫಕ್ಕೀರಮ್ಮ ಛಲವಾದಿ, ಗಾಯತ್ರಿ ರಾಯ್ಕರ್, ಕವಿತಾ ಸೊಪ್ಪಿನಮಠ, ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.
ಕದರಮಂಡಲಗಿ: ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಗಾಂಧೀಜಿ ಮತ್ತು ಲಾಲ್‌ಬಹಾದ್ದೂರ್ ಶಾಸ್ತ್ರೀ ಜಯಂತಿ ಆಚರಿಸಲಾಯಿತು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅರ್ಚಕರಾದ ನಾಗಪ್ಪ ಅಜ್ಜಮ್ಮನವರ ದೇಣಿಗೆಯಾಗಿ ನೀಡಿದ ನಾಲ್ಕು ಅಡಿ ಎತ್ತರದ ಮಹಾತ್ಮ ಗಾಂಧಿ ಮೂರ್ತಿಯನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕನ್ನಪ್ಪ ಛತ್ರದ ಅನಾವರಣಗೊಳಿಸಿದರು.
ಬಳಿಕ ನಾಗಪ್ಪ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಗದಿಗೆಯ್ಯ ಹಿರೇಮಠ, ಮಾಲತೇಶ ಬಡಿಗೇರ, ಮುಖ್ಯ ಶಿಕ್ಷಕಿ ಛತ್ರದ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.