ಗುತ್ತಲ (ಹಾವೇರಿ): ಗಾಂಧಿವಾದಿ, ಸ್ವಾತಂತ್ರ್ಯ ಸೇನಾನಿ ಗುದ್ಲೆಪ್ಪ ಹಳ್ಳಿಕೇರಿ ಸ್ಮರಣಾರ್ಥ ನೀಡುವ ಪ್ರಸಕ್ತ ಸಾಲಿನ ‘ಸೇವಾ ಗೌರವ’ ಪ್ರಶಸ್ತಿಗೆ ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ ಆಯ್ಕೆಯಾಗಿದ್ದಾರೆ.
ಹಾವೇರಿ ತಾಲ್ಲೂಕಿನ ಹೊಸರಿತ್ತಿ ಗ್ರಾಮದ ಮಹಾತ್ಮ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಗುದ್ಲೆಪ್ಪ ಹಳ್ಳಿಕೇರಿಯವರ 117ನೇ ಜನ್ಮದಿನೋತ್ಸವದಂದು (ಜೂನ್ 6ರಂದು) ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ‘ಸೇವಾ ಗೌರವ’ ಪ್ರಶಸ್ತಿಯು ₹20 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.
ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾದ ಜನರಿಗೆ, ಅಶಕ್ತ ಮಕ್ಕಳಿಗೆ ಹಾಗೂ ಅಸಹಾಯಕ ಮಹಿಳೆಯರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸೌಲಭ್ಯಗಳನ್ನು ಜಿತೇಂದ್ರ ಮಜೇಥಿಯಾ ಅವರು ತಮ್ಮ ಫೌಂಢೇಶನ್ ಮೂಲಕ ಕಲ್ಪಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.