ಹಾವೇರಿ: ಮಲೇರಿಯಾ ರೋಗ ನಿರ್ಮೂಲನೆಗೆ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಸೊಳ್ಳೆ ಪರದೆ ಬಳಸಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಸಹಯೋಗದಲ್ಲಿ ವಿಶ್ವ ಮಲೇರಿಯಾ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ಕೊಳಚೆ ಪ್ರದೇಶಗಳು ಸೇರಿ ವಿವಿಧ ಬೀದಿಗಳ ಚರಂಡಿಗಳನ್ನು ಸ್ವಚ್ಛಗೊಳ್ಳಿಸಿ, ಸೊಳ್ಳೆ ನಿವಾರಕ ಔಷಧಿ ಸಿಂಪಡಣೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರು ಜಾಗೃತರಾಗಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯವನ್ನು ಚರಂಡಿಗೆ ಹಾಕದೆ ನಗರಸಭೆ ಕಸದ ವಾಹನಗಳಿಗೆ ಹಾಕಬೇಕು. ರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಹಾಗಾಗಿ ಎಲ್ಲರೂ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ.ಪ್ರಭಾಕರ ಕುಂದೂರ ಮಾತನಾಡಿ, ಸಾಮಾನ್ಯ ಜ್ವರಕ್ಕೂ ರಕ್ತ ಪರೀಕ್ಷೆ ಮಾಡಿಸಿ ತ್ವರಿತವಾಗಿ ಚಿಕಿತ್ಸೆ ಪಡೆಯಿರಿ. ಮಲೇರಿಯಾ ರೋಗ ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಭಾಧಿಸುತ್ತದೆ. ರೋಗವನ್ನು ನಿಯಂತ್ರಿಸಲು ಸೊಳ್ಳೆ ಪರದೆ ಮತ್ತು ಸೊಳ್ಳೆ ನಿವಾರಕಗಳನ್ನು ಮಾಳಕೆಮಾಡಬೇಕು ಎಂದು ಸಲಹೆ ನೀಡಿದರು.
ಈ ವರ್ಷದ ವಿಶ್ವ ಮಲೇರಿಯಾ ದಿನಾಚಾರಣೆಯನ್ನು ‘ನವೀನ ವಿಧಾನ ಬಳಸಿ, ಮಲೇರಿಯಾ ಕಡಿಮೆ ಮಾಡಿ ಜೀವ ಉಳಿಸೋಣ’ ಎಂಬ ಧ್ಯೇಯವಾಕ್ಯ ಮೂಲಕ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷದಿಂದ ಯಾವುದೇ ಮಲೇರಿಯಾ ಪ್ರಕರಣ ಕಂಡು ಬಂದಿಲ್ಲ. ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ದುಡಿಯಲು ಹೋದ ಕಾರ್ಮಿಕರಲ್ಲಿ ರೋಗ ಕಂಡು ಬರುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಲೇರಿಯಾ ರೋಗದಿಂದ ಯಾವುದೇ ಸಾವು-ನೋವು ಉಂಟಾಗಿಲ್ಲ ಎಂದು ಹೇಳಿದರು.
ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ಮಲೇರಿಯಾ ರೋಗದ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರ, ನಗರಸಭೆ ಸದಸ್ಯರಾದ ಬಾಬುಸಾಬ್ ಮೊಮಿನಗಾರ್, ಶಿವರಾಜ್ ಮತ್ತಿಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.