ADVERTISEMENT

ಹಾವೇರಿ ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: 567 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 12:20 IST
Last Updated 19 ನವೆಂಬರ್ 2021, 12:20 IST
ಹಿರೇಕೆರೂರು ತಾಲ್ಲೂಕು ಚನ್ನಳ್ಳಿ ಗ್ರಾಮದಲ್ಲಿ ನಿರಂತರ ಮಳೆಯ ಪರಿಣಾಮ ಮನೆಯ ಗೋಡೆ ಮತ್ತು ಚಾವಣಿ ಕುಸಿದಿರುವ ದೃಶ್ಯ  –ಪ್ರಜಾವಾಣಿ ಚಿತ್ರ
ಹಿರೇಕೆರೂರು ತಾಲ್ಲೂಕು ಚನ್ನಳ್ಳಿ ಗ್ರಾಮದಲ್ಲಿ ನಿರಂತರ ಮಳೆಯ ಪರಿಣಾಮ ಮನೆಯ ಗೋಡೆ ಮತ್ತು ಚಾವಣಿ ಕುಸಿದಿರುವ ದೃಶ್ಯ –ಪ್ರಜಾವಾಣಿ ಚಿತ್ರ   

ಹಾವೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಶುಕ್ರವಾರ ಒಂದೇ ದಿನ ಜಿಲ್ಲೆಯಾದ್ಯಂತ 567 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನವೆಂಬರ್‌ 1ರಿಂದ 18ರವರೆಗೆ ಒಟ್ಟು 254 ಮನೆಗಳು ಭಾಗಶಃ ಶಿಥಿಲವಾಗಿವೆ.

ರಾಣೆಬೆನ್ನೂರು ತಾಲ್ಲೂಕು ಚೌಡಯ್ಯದಾನಪುರ ಗ್ರಾಮದಲ್ಲಿ ಭತ್ತದ ರಾಶಿಗೆ ನೀರು ನುಗ್ಗಿ, ಹತ್ತು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವಿವಿಧೆಡೆ ಭತ್ತದ ಬೆಳೆ ಕೂಡಾ ಜಲಾವೃತವಾಗಿದ್ದು, ಕೈಗೆ ಸಿಕ್ಕ ತುತ್ತು ಬಾಯಿಗೆ ಸಿಗಲಿಲ್ಲ ಎಂದು ರೈತರು ಕಣ್ಣೀರು ಸುರಿಸಿದ್ದಾರೆ.

ನವೆಂಬರ್‌ ತಿಂಗಳಲ್ಲಿ ಅತಿವೃಷ್ಟಿಯಿಂದ 18,665 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 230 ಹೆಕ್ಟೇರ್‌ ತೋಟಗಾರಿಕಾ ಬೆಳೆ ನಾಶವಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. 4799 ಹೆಕ್ಟೇರ್‌ ಭತ್ತದ ಬೆಳೆ ಜಲಾವೃತವಾಗಿ ನಾಶವಾಗಿದೆ.

ADVERTISEMENT

ಕೃಷಿ ಸಚಿವ ಪರಿಶೀಲನೆ: ಅತಿವೃಷ್ಟಿಯಿಂದ ಹಾನಿಗೊಳಗಾದ ರಟ್ಟೀಹಳ್ಳಿ ತಾಲ್ಲೂಕಿನ ಹಳ್ಳೂರ ಗ್ರಾಮದ ಜಮೀನುಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಭೇಟಿ ನೀಡಿ, ಪರಿಶೀಲಿಸಿದರು. ಸರ್ಕಾರಕ್ಕೆ ವರದಿ ಸಲ್ಲಿಸಿ, ಎನ್‌ಡಿಆರ್‌ಎಫ್‌ ಮೂಲಕ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಾಲೆಗೆ ರಜೆ: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಅನಾನುಕೂಲವಾಗಬಾರದು ಎಂಬ ಉದ್ದೇಶದಿಂದ ನ.20ರಂದು ಎಲ್ಲ ಶಾಲೆ ಮತ್ತು ಕಾಲೇಜುಗಳಿಗೆ ಒಂದು ದಿನ ರಜೆಯನ್ನು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.