ಹಾವೇರಿ: ‘ರೇಷ್ಮೆ ಬೆಳಗಾರರಿಂದ ಕೆಲವು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ. ಕಮಿಷನ್ ನೀಡದೇ ಇದ್ದರೆ ರೇಷ್ಮೆ ಹುಳು ಸಾಕಾಣಿಕೆ ಮನೆಯನ್ನೇ ಮಂಜೂರು ಮಾಡುತ್ತಿಲ್ಲ. ರೈತರ ರಕ್ತ ಕುಡಿಯುವ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಹನಿ ನೀರಾವರಿ ಸೌಲಭ್ಯಕ್ಕೂ ಕಮಿಷನ್ ಕೇಳುತ್ತಿದ್ದಾರೆ. ಇಲಾಖೆಯಲ್ಲಿ ಅನುದಾನವಿದ್ದರೂ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಕಳೆದ ವರ್ಷ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದೆ. ಲಂಚ ಕೇಳುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಅಮಾನತು ಮಾಡುತ್ತೇನೆ ಎಂದು ಗುಡುಗಿದರು.
ರಾಜ್ಯದಲ್ಲಿ ಕ್ರೀಡಾಮೇಳ ಆಯೋಜನೆ
‘2022ರ ಮಾರ್ಚ್‌ನಲ್ಲಿ 11 ದಿನ ರಾಜ್ಯದಲ್ಲಿ ‘ಕ್ರೀಡಾಮೇಳ’ ಆಯೋಜನೆ ಮಾಡಲಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ 7 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕ್ರೀಡಾಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ’ ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘75 ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರ ದತ್ತು ಪಡೆದಿದ್ದು, 2024ರ ಒಲಿಂಪಿಕ್ಸ್‌ಗೆ ಕಳುಹಿಸಲು ವಿಶೇಷ ತರಬೇತಿ ನೀಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ಸುಮಾರು ₹30 ಲಕ್ಷ ಖರ್ಚು ಬರುತ್ತದೆ. ಇದನ್ನು ಭರಿಸಲು ಬಡ ಕ್ರೀಡಾಪಟುಗಳಿಂದ ಸಾಧ್ಯವಿಲ್ಲ. ಹೀಗಾಗಿ 150 ಖಾಸಗಿ ಕಂಪನಿಗಳನ್ನು ಕರೆಸಿ, ಅವರಿಗೂ ಜವಾಬ್ದಾರಿ ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ 2.31 ಲಕ್ಷ ಯುವಜನರನ್ನು ಕೌನ್ಸೆಲಿಂಗ್ ಮಾಡಿ, ಅರ್ಹರಿಗೆ ಕ್ರೀಡಾ ತರಬೇತಿ ನೀಡಲು ಕ್ರಮ ಕೈಗೊಂಡಿದ್ದೇವೆ. ಸಿಬ್ಬಂದಿ ಮತ್ತು ಕ್ರೀಡಾ ತರಬೇತುದಾರರ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.