ಅಕ್ಕಿಆಲೂರು: ‘ನರೇಂದ್ರ ಮೋದಿ ಅವರು 60 ತಿಂಗಳು ಅವಕಾಶ ಕೊಡಿ ಎಂದಿದ್ದರು. ದೇಶದ ಜನ 120 ತಿಂಗಳು ಅವಕಾಶ ಕೊಟ್ಟರು. ಆದರೆ ಏನೂ ಮಾಡದ ಇವರು ಇದು ಬರೀ ಟ್ರೇಲರ್ ಅಷ್ಟೆ ಎನ್ನುತ್ತಿದ್ದಾರೆ. 10 ವರ್ಷ ನೋಡಿದ್ದು ಟ್ರೇಲರ್ ಎನ್ನುವುದಾದರೆ ಪಿಕ್ಚರ್ ನೋಡುವುದಾದರೂ ಯಾವಾಗ’ ಎಂದು ಶಾಸಕ ಶ್ರೀನಿವಾಸ ಮಾನೆ ಲೇವಡಿ ಮಾಡಿದರು.
ಹಾನಗಲ್ ತಾಲ್ಲೂಕಿನ ಹಾವಣಗಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘60 ತಿಂಗಳು ಅವಕಾಶ ಕೊಡಿ. ವಿದೇಶದಿಂದ ಕಪ್ಪುಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗಳಿಗೆ ₹15 ಲಕ್ಷ ಹಾಕುವೆ. ರೈತರ ಆದಾಯ ದುಪ್ಪಟ್ಟು ಮಾಡುವೆ, ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವೆ, ಮನೆ ಇಲ್ಲದ ಪ್ರತಿಯೊಬ್ಬರಿಗೂ ಮನೆ ಕಟ್ಟಿಕೊಡುವೆ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸುತ್ತೇನೆ ಎಂದೆಲ್ಲಾ ಹೇಳಿದ್ದರು. ಇದನ್ನೆಲ್ಲ ಮಾಡಿದ್ದಾರಾ? ₹15 ಲಕ್ಷ ನಿಮ್ಮ ಖಾತೆಗೆ ಬಂತಾ?, ರೈತರ ಆದಾಯ ದುಪ್ಪಟ್ಟು ಆಗಿದೆಯಾ, ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿತಾ?, ಮನೆ ನಿರ್ಮಿಸಿ ಕೊಟ್ಟಿದ್ದಾರಾ?’ ಎಂದು ಪ್ರಶ್ನಿಸಿದರು.
ಬಿಜೆಪಿಯವರ ಮಾತಿಗೂ, ಕೃತಿಗೂ ಸಂಬಂಧವೇ ಇರುವುದಿಲ್ಲ. 120 ತಿಂಗಳ ಇವರ ಟ್ರೇಲರ್ ಇಷ್ಟೊಂದು ಭಯಾಕನವಾಗದೆ. ಇನ್ನು ಪಿಕ್ಚರ್ ಹೇಗಿರಬಹುದು ಯೋಚಿಸಿ. ಇಂಥವರ ಕೈಯಲ್ಲಿ ಅಧಿಕಾರ ನೀಡಿದರೆ ಬಡವರ ಕಲ್ಯಾಣ ಕನಸಿನ ಮಾತು. ತೆರಿಗೆ ಪಾಲು ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ. ಬರಗಾಲ ಇದ್ದರೂ ರೈತರ ಸಂಕಷ್ಟಗಳಿಗೆ ಸ್ಪಂದಿಸದೇ ಮೌನ ವಹಿಸಿದೆ ಎಂದರು.
ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, 2014ರಲ್ಲಿದ್ದ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಈಗ ಎರಡು, ಮೂರು ಪಟ್ಟು ಹೆಚ್ಚಾಗಿವೆ. ಆದರೆ ರೈತರು, ಜನರ ಆದಾಯ ಮಾತ್ರ ಕಡಿಮೆಯಾಗಿದೆ. ಉದ್ಯೋಗ ನಷ್ಟ ಉಂಟಾಗಿದೆ. ಬಿಜೆಪಿಯ 10 ವರ್ಷಗಳ ಆಡಳಿತದಲ್ಲಿ ಕರಾಳ ದಿನಗಳನ್ನು ಕಂಡಿದ್ದೇವೆ. ಈ ಆಡಳಿತಕ್ಕೆ ಬೇಸತ್ತು ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸಿದ್ದಾರೆ ಎಂದರು.
ಅತಿಹೆಚ್ಚು ಮತಗಳ ಅಂತರದಿಂದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ. ವಿಶ್ವಾಸ ಹುಸಿಗೊಳಿಸದೇ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಮಾಲತೇಶ ಓಲೇಕಾರ, ಜಗದೀಶ ಬಡಿಗೇರ, ನೂರಅಹ್ಮದ್ ತಿಳವಳ್ಳಿ, ಬಸವರಾಜ ಗುಮಗಂಡಿ, ಸಿದ್ದನಗೌಡ ಪಾಟೀಲ, ಜಮೀರ್‍ವುಲ್ಲಾ, ವಿಜಯೇಂದ್ರ ಅಂಗಡಿ, ನಾಗಪ್ಪ ಮಲ್ಲಿಗಾರ, ಪುಟ್ಟಪ್ಪ ಮಕರವಳ್ಳಿ, ನಾಗನಗೌಡ ಪಾಟೀಲ, ಮಹಾಂತೇಶ ಮುದಿಯಪ್ಪನವರ, ಚಂದ್ರಪ್ಪ ಕೋಡಿಹಳ್ಳಿ, ಪಾಲಾಕ್ಷಪ್ಪ ಕಾಗಿನೆಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.