ರಾಣೆಬೆನ್ನೂರು: 'ಮಕ್ಕಳಿಗೆ ಸೊಳ್ಳೆ ಕಚ್ಚಬಾರದು ಎಂದು ತಾಲ್ಲೂಕಿನ 379 ಅಂಗನವಾಡಿ ಕೇಂದ್ರಗಳಿಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಸೊಳ್ಳೆ ಪರದೆ ಪೂರೈಸಲಾಗಿದೆ' ಎಂದು ಸಿಡಿಪಿಓ ಪಾರ್ವತಿ ಹುಂಡೇಕಾರ ತಿಳಿಸಿದ್ದಾರೆ.
ತಾಲ್ಲೂಕಿನ ವೈಟಿ ಹೊನ್ನತ್ತಿ (ಯಲ್ಲಾಪುರ) ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳು ಸೊಳ್ಳೆ ಕಾಟದಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕೆಲವು ಖಾಸಗಿ ಟಿವಿ ವಾಹಿನಿಯಲ್ಲಿ ಸುದ್ದಿಯಾಗಿತ್ತು. ಈ ಬಗ್ಗೆ ಪಾರ್ವತಿ ಹುಂಡೇಕಾರ ಸ್ಪಷ್ಟನೆ ನೀಡಿದ್ದಾರೆ.
‘ವೈಟಿ ಹೊನ್ನತ್ತಿಯಲ್ಲಿ ಅಷ್ಟೇ ಅಲ್ಲ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಸೊಳ್ಳೆ ಪರದೆ ಕಟ್ಟಲಾಗುತ್ತಿದೆ. ಮಂಗಳವಾರ ವೈಟಿ ಹೊನ್ನತ್ತಿಯಲ್ಲಿ ನಮ್ಮ ಕಾರ್ಯಕರ್ತೆಯರು ಇಲಾಖೆಯಿಂದ ಮತ್ತೊಂದು ಹೊಸ ಸೊಳ್ಳೆ ಪರದೇ ಕಟ್ಟಿ ಪಾಠ ಮಾಡಿ ಮಕ್ಕಳನ್ನು ವಿಶ್ರಾಂತಿಗಾಗಿ ಸೊಳ್ಳೆ ಪರದೆಯಲ್ಲಿಯೇ ಮಲಗಿಸಿದ್ದಾರೆ’ ಎಂದರು.
‘ನಾನು ಕರ್ತವ್ಯಕ್ಕೆ ಹಾಜರಾಗಿ ಒಂದು ವಾರವಾಗಿದೆ. 15 ಅಂಗನವಾಡಿ ಕೇಂದ್ರಗಳಲ್ಲಿ ಸೊಳ್ಳೆ ಪರದೆ ಹಳೆಯದಾಗಿವೆ ಎಂದು ತಿಳಿದಿತ್ತು. ನನ್ನ ಸ್ವಂತ ಖರ್ಚಿನಿಂದ ಸೊಳ್ಳೆ ಪರದೆ ಖರೀದಿಸಿ 15ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಲಾಗಿದೆ’ ಎಂದು ತಿಳಿಸಿದರು.
ಸ್ವಚ್ಛತೆಗೆ ಗ್ರಾಪಂ ಕ್ರಮ: ವೈಟಿ ಹೊನ್ನತ್ತಿ ಗ್ರಾಮ ಪಂಚಾಯಿತಿ ಸದಸ್ಯರು, ಪಾಲಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಈ ಕುರಿತು ಬುಧವಾರ ವಿಶೇಷ ಸಭೆ ನಡೆಸಿದರು.
ಗ್ರಾಮ ಪಂಚಾಯಿತಿಯಿಂದ ಅಂಗನವಾಡಿ ಸುತ್ತಮುತ್ತ ಮತ್ತು ಗ್ರಾಮದ ಮುಖ್ಯರಸ್ತೆ ಎರಡೂ ಬದಿಗೆ ಬೆಳೆದಿದ್ದ ಕಸ, ಪಾರ್ಥೇನಿಯ, ಮುಳ್ಳು ಕಂಠಿಗಳನ್ನು ತೆಗೆದು ಸ್ವಚ್ಚಗೊಳಿಸಲಾಗಿದೆ.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹೇಮಣ್ಣ ಹೊಳಲ, ನಿಂಗಪ್ಪ ಗುಡಗೂರ, ಪಾಲಕರ ಪ್ರತಿನಿಧಿಯಾಗಿ ಶೇಖಪ್ಪ ಹರಿಜನರ, ಪ್ರಕಾಶ ಪೂಜಾರ, ಎಸ್‌ಡಿಎಂಸಿ ಅಧ್ಯಕ್ಷ ಶಿವರಾಜ ಹೊನ್ನಚಿಕ್ಕಣ್ಣನವರ, ಚಂದ್ರು ಬನ್ನಿಹಟ್ಟಿ, ಹಾಲಪ್ಪ ಕುಲಕರ್ಣಿ, ಪಿಡಿಓ ತಿಪ್ಪೇಶ ಮೂಗಾನವರ, ಮಕ್ಕಳ ಪಾಲಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.