ADVERTISEMENT

ಹಾವೇರಿ | ಕೆರೆಗಳು ಭಾಗಶಃ ಭರ್ತಿ: ಸದ್ಯಕ್ಕೆ ಜನ ನಿರಾಳ

ಸಂತೋಷ ಜಿಗಳಿಕೊಪ್ಪ
Published 11 ನವೆಂಬರ್ 2024, 4:20 IST
Last Updated 11 ನವೆಂಬರ್ 2024, 4:20 IST
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕಲ್ಯಾಣ ಗ್ರಾಮದ ಬಳಿಯ ಕೆರೆಯಲ್ಲಿ ಜಾನುವಾರು ಮೈ ತೊಳೆಯುತ್ತಿರುವ ರೈತ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕಲ್ಯಾಣ ಗ್ರಾಮದ ಬಳಿಯ ಕೆರೆಯಲ್ಲಿ ಜಾನುವಾರು ಮೈ ತೊಳೆಯುತ್ತಿರುವ ರೈತ   

ಹಾವೇರಿ: ಜಿಲ್ಲೆಯ ಬಹುತೇಕ ಕೆರೆಗಳು ನೀರು ತುಂಬಿಕೊಂಡು ಕಂಗೊಳಿಸುತ್ತಿವೆ. ಕೆರೆ ಅಚ್ಚುಕಟ್ಟಿನಲ್ಲಿರುವ ಜಮೀನಿನ ರೈತರು ಹಾಗೂ ಗ್ರಾಮಗಳ ನಿವಾಸಿಗಳ ಮುಖದಲ್ಲಿ ಸದ್ಯಕ್ಕೆ ಖುಷಿ ಮೂಡಿದೆ.

ಮುಂಗಾರು ಆರಂಭದ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆ ಇತ್ತು. ಮಳೆಗಾಲ ಕೈಕೊಟ್ಟಿತೆಂದು ರೈತರು ಅಂದುಕೊಳ್ಳುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ದಾಖಲೆ ಮಳೆ ಸುರಿದಿದೆ. ಇದರಿಂದಾಗಿ ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದು, ಹಲವು ಕೆರೆಗಳು ಕೋಡಿ ಸಹ ಬಿದ್ದಿವೆ.

40 ಎಕರೆಗಿಂತ ಕಡಿಮೆ ಇರುವ ಕೆರೆಗಳನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ನಿರ್ವಹಣೆ ಮಾಡುತ್ತಿದೆ. ಇಂಥ ಕೆರೆಗಳಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಕನಿಷ್ಠ ಶೇ 30 ಹಾಗೂ ಗರಿಷ್ಠ ಶೇ 100ರ ವರೆಗೂ ನೀರು ಕೆರೆಯಲ್ಲಿದೆ.

ADVERTISEMENT

ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿರುವ ಹಲವು ಕೆರೆಗಳು ನೀರಿನಿಂತ ಭರ್ತಿಯಾಗಿವೆ. ಕೆಲ ಕೆರೆಗಳು ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದ್ದು, ಜನರು ತಂಡೋಪತಂಡವಾಗಿ ಕೆರೆ ಪ್ರದೇಶಕ್ಕೆ ಹೋಗಿ ಕಾಲ ಕಳೆಯುತ್ತಿದ್ದಾರೆ.

ಕೋಡಿ ಬಿದ್ದಿರುವ ಕೆರೆಗಳ ದಡದಲ್ಲಿ, ನೀರು ಹಾಲಿನ ನೊರೆಯಂತೆ ಹರಿಯುತ್ತಿದೆ. ಇಂಥ ಸ್ಥಳಗಳಲ್ಲಿ ನಿಂತುಕೊಂಡು ಜನರು, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕೆರೆಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.

‘ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 1,622 ಕೆರೆಗಳಿವೆ. ಈ ಪೈಕಿ 973 ಕೆರೆಗಳು ಶೇ 85ರಿಂದ ಶೇ 100ರಷ್ಟು ಭರ್ತಿಯಾಗಿವೆ’ ಎಂದು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿರುವ 40 ಎಕರೆಗಿಂತ ಕಡಿಮೆ ವಿಸ್ತೀರ್ಣ ಇರುವ ಕೆರೆಗಳನ್ನು ನಮ್ಮ ವಿಭಾಗದಿಂದ ನಿರ್ವಹಣೆ ಮಾಡುತ್ತೇವೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇಂಥ ಕೆರೆಗಳಿವೆ. 40 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಇತರೆ ಇಲಾಖೆಯವರು ನಿರ್ವಹಣೆ ಮಾಡುತ್ತಾರೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಮಳೆ ಆಗಿದೆ. ಜೊತೆಗೆ, ದಾಖಲೆ ಮಳೆಯೂ ಸುರಿದಿದೆ. ಹೀಗಾಗಿ, ಕೆರೆಗಳು ಭರ್ತಿಯಾಗಿ ಕಂಗೊಳಿಸುತ್ತಿವೆ’ ಎಂದು ತಿಳಿಸಿದರು.

ಪಕ್ಷಿಗಳ ಕಲರವ: ಕೆರೆಗಳು ಭರ್ತಿಯಾಗಿರುವುದರಿಂದ ನಾನಾ ಭಾಗಗಳಿಂದ ಪಕ್ಷಿಗಳ ಆಗಮನವಾಗುತ್ತಿದೆ. ಕೆರೆ ನೀರಿನಲ್ಲಿ ಹಾಗೂ ಕೆರೆ ದಡಗಳಲ್ಲಿ ಪಕ್ಷಿಗಳ ಕಲರವ ಕೇಳುತ್ತಿದೆ. ಪಕ್ಷಿಗಳ ತರಹೇವಾರಿ ಶಬ್ದಗಳು, ಜನರನ್ನು ಸೆಳೆಯುತ್ತಿವೆ.

ಹಾವೇರಿಯ ಹೆಗ್ಗೇರಿ, ಗುತ್ತಲ, ಕಲ್ಯಾಣ, ಹೋತನಹಳ್ಳಿ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಈ ಕೆರೆಗಳಲ್ಲಿ ನಾನಾ ಜಾತಿಯ ಪಕ್ಷಿಗಳು ಬೀಡು ಬಿಟ್ಟಿವೆ. ಪಕ್ಷಿಗಳು ಗುಂಪು ಕಟ್ಟಿಕೊಂಡು ಹಾರಾಡುತ್ತಿವೆ. ಕೆಲ ಪಕ್ಷಿಗಳು, ನೀರಿನಲ್ಲಿರುವ ಮೀನು ಹಾಗೂ ಇತರೆ ಕೀಟಗಳನ್ನು ಬೇಟೆಯಾಡಿ ತಿನ್ನುತ್ತಿವೆ.

ಜಾನುವಾರುಗಳಿಗೆ ನೀರು: ಕೆರೆಗಳು ಭರ್ತಿಯಾಗಿರುವುದರಿಂದ ಎರಡುಮೂರು ತಿಂಗಳು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದೆಂದು ಜನರು ಹೇಳುತ್ತಿದ್ದಾರೆ. ಆದರೆ, ನಂತರ ಕೆರೆ ಖಾಲಿಯಾದರೆ ನೀರಿನ ಸಮಸ್ಯೆ ಉಲ್ಬಣಿಸುವ ಆತಂಕವೂ ಇದೆ.

‘ನಮ್ಮೂರಿನ ಕೆರೆ ಈಗ ಭರ್ತಿಯಾಗಿದೆ. ಜಾನುವಾರು ಮೈ ತೊಳೆಯಲು, ಅವುಗಳಿಗೆ ನೀರು ಕುಡಿಸಲು, ಬಟ್ಟೆ ತೊಳೆಯಲು ಹಾಗೂ ಇತರೆ ಕೆಲಸಗಳಿಗೆ ನೀರು ಅನುಕೂಲವಾಗುತ್ತಿದೆ. ಕೆರೆ ಭರ್ತಿಯಾಗಿರುವುದಕ್ಕೆ ಖುಷಿಯೂ ಇದೆ’ ಎಂದು ಕಲ್ಯಾಣ ಗ್ರಾಮದ ಬಸವಂತಪ್ಪ ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ–ಬಂಕಾಪುರ ರಸ್ತೆಯಲ್ಲಿರುವ ಕೆರೆ ನೀರು ತುಂಬಿಕೊಂಡು ಕಂಗೊಳಿಸುತ್ತಿದೆ
ನೀರು ಅಮೂಲ್ಯವಾದದ್ದು. ಉತ್ತಮ ಮಳೆಯಿಂದಾಗಿ ಕೆರೆಗಳು ತುಂಬಿದ್ದು ಜನರು ನೀರನ್ನು ಮಿತವಾಗಿ ಬಳಸಬೇಕು. ಜಾನುವಾರುಗಳ ಕುಡಿಯುವ ನೀರಿನ ಬಗ್ಗೆ ಕಾಳಜಿ ಇರಬೇಕು
ದೇವರಾಜ್ ಕಾರ್ಯಪಾಲಕ ಎಂಜಿನಿಯರ್ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ

ಹಿಂಗಾರು ಕೃಷಿಗೆ ನೀರು ಬಳಕೆ

ಹಲವು ಕೆರೆಗಳ ಅಚ್ಚುಕಟ್ಟಿನಲ್ಲಿ ಕೃಷಿ ಜಮೀನುಗಳಿವೆ. ಈಗ ಹಿಂಗಾರು ಹಂಗಾಮು ಆರಂಭವಾಗಿದ್ದು ರೈತರು ಬಿತ್ತನೆ ಆರಂಭಿಸಿದ್ದಾರೆ. ಬಿತ್ತನೆ ಮಾಡಿದ ನಂತರ ಬೆಳೆಗಳಿಗೆ ಅಗತ್ಯವಿರುವ ನೀರನ್ನು ಕೆರೆಯಿಂದ ಪಡೆಯಲಿದ್ದಾರೆ. ರೈತರು ಕೆರೆಯಲ್ಲಿರುವ ನೀರನ್ನು ಸಂಪೂರ್ಣವಾಗಿ ತಮ್ಮ ಹೊಲಗಳಿಗೆ ಉಪಯೋಗಿಸಿದರೆ ಮುಂದಿನ ದಿನಗಳಲ್ಲಿ ಕೆರೆ ಖಾಲಿಯಾಗಬಹುದು. ಜೊತೆಗೆ ಮುಂಬರುವ ಬೇಸಿಗೆ ಕಾಲದವರೆಗೂ ಕೆರೆಯಲ್ಲಿ ನೀರು ಕಾಯ್ದುಕೊಳ್ಳುವ ಸವಾಲು ಎದುರಾಗಬಹುದು. ‘ಕೆರೆ ಸಂಪೂರ್ಣ ತುಂಬಿರುವುದು ಒಂದು ಕಡೆ ಖುಷಿ ತಂದಿದೆ. ಆದರೆ ಅಕ್ಕ–ಪಕ್ಕದ ರೈತರು ಎಲ್ಲ ನೀರು ಬಳಕೆ ಮಾಡಿದರೆ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದಿಲ್ಲ. ವಿಭಾಗದ ಅಧಿಕಾರಿಗಳು ನೀರು ಉಳಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರವಾಗದಂತೆ ನೋಡಿಕೊಳ್ಳಬೇಕು’ ಎಂದು ಹೋತನಹಳ್ಳಿ ಗ್ರಾಮಸ್ಥ ಈಶ್ವರ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.