ADVERTISEMENT

ಹ್ಯಾಟ್ರಿಕ್‌ನಗೆ ಬೀರಿದ ಅದೃಷ್ಟದ ಚಾಣಾಕ್ಷ,ಮೋದಿ ಲಕ್ಷ್ಯದಲ್ಲಿ ಲಕ್ಷ ದಾಟಿದ ಉದಾಸಿ

1,40,882 ಮತಗಳ ಅಂತರದಿಂದ ಗೆಲುವು

ಹರ್ಷವರ್ಧನ ಪಿ.ಆರ್.
Published 24 ಮೇ 2019, 19:30 IST
Last Updated 24 ಮೇ 2019, 19:30 IST
ಅಭಿಮಾನಿಗಳ ಹರ್ಷೋದ್ಘಾರದ ನಡುವೆ ತನ್ಮಯರಾದ ಹ್ಯಾಟ್ರಿಕ್‌ ವೀರ ಉದಾಸಿಯ ಹಾವಭಾವ ಹೀಗಿತ್ತು  -ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ
ಅಭಿಮಾನಿಗಳ ಹರ್ಷೋದ್ಘಾರದ ನಡುವೆ ತನ್ಮಯರಾದ ಹ್ಯಾಟ್ರಿಕ್‌ ವೀರ ಉದಾಸಿಯ ಹಾವಭಾವ ಹೀಗಿತ್ತು  -ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ   

ಹಾವೇರಿ:ದೇಶದಾದ್ಯಂತ ಬೀಸಿದ ‘ಮೋದಿ ಅಲೆ’ಯಲ್ಲಿ ಹಾವೇರಿಯಿಂದ ಶಿವಕುಮಾರ ಉದಾಸಿ ಸಂಸತ್ ಸೇರಿದ್ದಾರೆ. ಕಾಂಗ್ರೆಸ್‌ನ ಡಿ.ಆರ್. ಪಾಟೀಲರನ್ನು 1,40,882 ಮತಗಳ ಅಂತರದಿಂದ ಮಣಿಸಿ, ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

‘ರಾಷ್ಟ್ರೀಯ ಭದ್ರತೆ’ ಮೂಲಕ ಬಿಜೆಪಿ ಸೀಟು ಭದ್ರ ಮಾಡಿಕೊಂಡಿದ್ದರೆ, ಸತತ 14 ಚುನಾವಣೆಗಳ ಬಳಿಕ ಮುಸ್ಲಿಮೇತರ ಅಭ್ಯರ್ಥಿ ಕಣಕ್ಕಿಳಿಸಿದ ಕಾಂಗ್ರೆಸ್‌ಗೆ ‘ಮೃದು ಹಿಂದುತ್ವ’ ಕೈ ಹಿಡಿಯಲಿಲ್ಲ.

ಈ ಬಾರಿ ಬಿಜೆಪಿಯಿಂದ ಶಿವಕುಮಾರ ಉದಾಸಿ ಸ್ಪರ್ಧೆಯು ಖಚಿತವಾಗಿತ್ತು. 2009ರಲ್ಲಿ ಯಡಿಯೂರಪ್ಪ ಹಾಗೂ 2014ರಲ್ಲಿ ಮೋದಿ ಅಲೆಯಲ್ಲಿ ಗೆದ್ದಿದ್ದ ಅವರು, ಮತ್ತೆ ಮೋದಿ ಅಲೆಗೆ ಮೊರೆ ಹೋಗಿದ್ದರು. ಇನ್ನೊಂದೆಡೆ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ (2014) ಈ ಬಾರಿ 1,49,102 ಮತದಾರರು ಹೆಚ್ಚಾಗಿದ್ದರೆ, 2004ರ ನಂತರದ ಹೊಸ ಮತದಾರರು (36 ವರ್ಷದೊಳಗಿನವರು) 5,02,564 ಹೆಚ್ಚಾಗಿದ್ದರು. ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆಗೆ ಈ ಯುವ ಮತದಾರರ ಮೇಲೆಯೇ ಬಿಜೆಪಿ ಕಣ್ಣು ನೆಟ್ಟಿತ್ತು. ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ‘ಮೋದಿ’ ಛಾಪು ಉಂಟು ಮಾಡುವಲ್ಲಿ ಬಿಜೆಪಿ ಸಂಘಟನಾತ್ಮಕ ಕಾರ್ಯಗಳೂ ಬಲ ನೀಡಿದ್ದವು. ಸಂಸದರು ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮುಂದಿಟ್ಟಿದ್ದರು.

ADVERTISEMENT

‘ಅದೃಷ್ಟದ ಚಾಣಾಕ್ಷ’ ಎಂದೇ ಬಿಜೆಪಿಯವರಿಂದಲೇ ಗುರುತಿಸಿಕೊಳ್ಳುವ ಉದಾಸಿ ಲೆಕ್ಕಾಚಾರಗಳು ಪಕ್ಕಾ ಫಲ ನೀಡಿದವು. ಹೀಗಾಗಿ, ಪ್ರಚಾರದ ಕೊನೆ ರಾತ್ರಿಗಳಲ್ಲಿ ಬಿಜೆಪಿ ಭಾರಿ ಹೊಳೆ ಹರಿಸಿರಲಿಲ್ಲ.

‘ಕೈ’ ಸುಟ್ಟ ಬ್ಯಾಡಗಿ ಮಿರ್ಚಿ

ಕಾಂಗ್ರೆಸ್‌ ಟಿಕೆಟ್‌ಗಾಗಿ ಬಸವರಾಜ ಶಿವಣ್ಣನವರ, ಸಲೀಂ ಅಹ್ಮದ್ ಹಾಗೂ ಡಿ.ಆರ್. ಪಾಟೀಲ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಬ್ಯಾಡಗಿಯ ಹಾಲಿ ಶಾಸಕರಾಗಿದ್ದ ಬಸವರಾಜ ಶಿವಣ್ಣನವರಿಗೆವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿದ ಕಾರಣ, ಮೂರು ಕ್ಷೇತ್ರಗಳಲ್ಲಿ ಕೈ ಸೋಲುಂಡಿತ್ತು. ಈ ಬಾರಿಯೂ ಟಿಕೆಟ್‌ ತಪ್ಪಿರುವುದು ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ. ಜಿಲ್ಲೆಯ ಕ್ಷೇತ್ರಗಳಲ್ಲೇ ಬಿಜೆಪಿ ಗರಿಷ್ಠ ಮುನ್ನಡೆ ಸಾಧಿಸಿದೆ.ಕಳೆದ ಬಾರಿ ಎರಡನೇ ಅತಿ ಕಡಿಮೆ ಮುನ್ನಡೆ ನೀಡಿದ್ದ ಬ್ಯಾಡಗಿಯಲ್ಲಿ, ಈ ಬಾರಿ ಎರಡನೇ ಅತಿ ಹೆಚ್ಚಿನ ಮುನ್ನಡೆಯಾಗಿದೆ.

‘ವಿಧಾನಸಭಾ ಚುನಾವಣೆಯಲ್ಲಿ ಮುಂದಾಳತ್ವ ವಹಿಸಿ ಸೋಲುಂಡವರೇ, ಲೋಕಸಭಾ ಚುನಾವಣೆಯಲ್ಲೂ ಜಿಲ್ಲೆಯ ಜವಾಬ್ದಾರಿ ವಹಿಸಿದ್ದರು. ಇದರಿಂದಾಗಿ, ಡಿ.ಆರ್. ಪಾಟೀಲರಂತಹ ಉತ್ತಮ ಅಭ್ಯರ್ಥಿಗೂ ಸೋಲಾಯಿತು.

ಅವರು ಜಿಲ್ಲೆಯ ಜವಾಬ್ದಾರಿಯನ್ನು ಬೇರೆಯವರಿಗೆ ನೀಡಬೇಕಿತ್ತು’ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಇತ್ತ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ತಪ್ಪಿದ ಕಾರಣ, ಕೆಲವು ಪ್ರಮುಖರು ಸಕ್ರಿಯವಾಗಿ ಕಾಣಿಸಿಕೊಳ್ಳಲಿಲ್ಲ’ ಎಂದರು.

ಶಂಕರ ಮೌನ–ಶಿವಕುಮಾರ ಮುನ್ನಡೆ

ರಾಣೆಬೆನ್ನೂರಿನಲ್ಲಿ ಕೆಪಿಜೆಪಿ ಶಾಸಕ ಆರ್. ಶಂಕರ ‘ಮೌನ’ವು ಬಿಜೆಪಿಗೆ ನೆರವಾಗಿದೆ. ಹಿರೇಕೆರೂರಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಜನಾದೇಶ ಪುನರಾವರ್ತನೆಯಾಗಿದೆ. ಬಿ.ಸಿ. ಪಾಟೀಲರ ವರ್ಚಸ್ಸು ವರ್ಕೌಟ್ ಆಗಿಲ್ಲ. ಬಿಜೆಪಿಯು ರಾಣೆಬೆನ್ನೂರು ಹಾಗೂ ಬ್ಯಾಡಗಿಯಲ್ಲಿ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಅಷ್ಟ ಕ್ಷೇತ್ರ:ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉದಾಸಿ ಈ ಬಾರಿಯೂ ಮುನ್ನಡೆ ಸಾಧಿಸಿದ್ದಾರೆ. ಈ ಪೈಕಿ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮುನ್ನಡೆಯಲ್ಲಿ ಇಳಿಕೆಯಾಗಿದೆ. ಉಳಿದಂತೆ ಬೇರೆಡೆ ಮತಗಳ ಅಂತರವು ಹೆಚ್ಚಿದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗದಗದ ಮೂರು ಹಾಗೂ ಹಾವೇರಿಯ ಐದು ವಿಧಾನಸಭಾ ಕ್ಷೇತ್ರಗಳಿದ್ದು, 2014ರಲ್ಲಿ ಬಿಜೆಪಿ 87,571 ಅಂತರದಲ್ಲಿ ಜಯಿಸಿತ್ತು.

ಈ ಪೈಕಿ ಬಿಜೆಪಿಗೆ ಗದಗ ಜಿಲ್ಲೆಯ ಮೂರು ಕ್ಷೇತ್ರಗಳಲ್ಲೇ 40,742 ಮುನ್ನಡೆ ಸಿಕ್ಕಿತ್ತು. ಈ ಬಾರಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರಿನಲ್ಲೇ 74,894 ಮತಗಳ ಮುನ್ನಡೆ ಸಾಧಿಸಿದೆ.

ಕಣದಲ್ಲಿ ಒಟ್ಟಾರೆ 10 ಅಭ್ಯರ್ಥಿಗಳಿದ್ದರು. ಆದರೆ, ಕಾಂಗ್ರೆಸ್–ಬಿಜೆಪಿ ಹೊರತು ಪಡಿಸಿ, ಯಾರೂ ಛಾಪು ಬೀರಿಲ್ಲ. ಮೊದಲ ಸುತ್ತಿನಿಂದಲೇ ಉದಾಸಿ ಮುನ್ನಡೆ ಸಾಧಿಸಿದ್ದರು, ಕೊನೆಯ 20ನೇ ಸುತ್ತಿನವರೆಗೂ ಕಾಯ್ದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.