ಹಾವೇರಿ: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಬಸ್ ಬ್ರೇಕ್ ಫೇಲ್ ಆಗಿದ್ದು, ಕಾಂಗ್ರೆಸ್ ನಾಯಕರ ದನಿ ಅಡಗಿ ಹೋಗಿದೆ. ಜೆಡಿಎಸ್‌ನ ಪಂಚರತ್ನ ಯೋಜನೆ ಹಾಸನದಲ್ಲಿ ಪಂಚರ್ ಆಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ಹಾನಗಲ್ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಹೋದಲ್ಲೆಲ್ಲಾ ಜನ ಸೇರುತ್ತಿದ್ದಾರೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ ಅಂತಿದ್ದು. ನಮ್ಮ ಪ್ರಧಾನಿ ಮೋದಿಯವರು ಒಬಿಸಿ ಸಮುದಾಯದವರು, ರಾಷ್ಟ್ರಪತಿ ಬುಡಕಟ್ಟು ಜನಾಂಗದವರು. ಪದ್ಮಭೂಷಣ, ಪದ್ಮಶ್ರೀ ಹಾಗೂ ನಿಗಮದ ಸ್ಥಾನಗಳನ್ನು ಎಲ್ಲ ಸಮುದಾಯಗಳಿಗೂ ನೀಡುತ್ತಿದ್ದೇವೆ. ಸಿದ್ದರಾಮಯ್ಯ ಮಾತ್ರ ಕುರುಬರ ರಕ್ಷಕನಾ? ಸಿದ್ದರಾಮಯ್ಯ ಕುರಿ ಸತ್ತರೆ ₹5 ಸಾವಿರ ಕೊಟ್ಟಿರಲಿಲ್ಲ. ಹಸು ಸತ್ತರೆ ₹30 ಸಾವಿರ ಪರಿಹಾರ ಕೊಡುತ್ತಾ ಇರುವ ಪಾರ್ಟಿ ಬಿಜೆಪಿ ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರೆ, ಮೊದಲ ಲಸಿಕೆ ಸೋನಿಯಾ ಗಾಂಧಿಗೆ, 2ನೇ ಲಸಿಕೆ ರಾಹುಲ್‌ಗಾಂಧಿಗೆ, 3ನೇ ಲಸಿಕೆ ಪ್ರಿಯಾಂಕಾ ಗಾಂಧಿಗೆ, 4ನೇ ಲಸಿಕೆಯನ್ನು ವಾದ್ರಾಗೆ ಕೊಡುತ್ತಿದ್ದರು. ಆದರೆ, ಮೋದಿಯವರು ಪ್ರತಿಯೊಬ್ಬರಿಗೂ ಲಸಿಕೆ ಕೊಟ್ಟರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.