ADVERTISEMENT

ಹಾವೇರಿ | ಶಾಲಾ ಕಟ್ಟಡ ಶಿಥಿಲ: ಆತಂಕದಲ್ಲಿ ಮಕ್ಕಳ ಕಲಿಕೆ

* ಒಂದೇ ಶೈಕ್ಷಣಿಕ ವರ್ಷದಲ್ಲಿ 229 ಕೊಠಡಿಗಳು ಶಿಥಿಲ * ದುರಸ್ತಿಗೆ ಕಾದಿವೆ ಒಟ್ಟು 759 ಕೊಠಡಿಗಳು

ಸಂತೋಷ ಜಿಗಳಿಕೊಪ್ಪ
Published 24 ಜೂನ್ 2024, 4:14 IST
Last Updated 24 ಜೂನ್ 2024, 4:14 IST
ರಟ್ಟೀಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಕಟ್ಟಡ ಕಟ್ಟಡ ದುಸ್ಥಿತಿ
ರಟ್ಟೀಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಕಟ್ಟಡ ಕಟ್ಟಡ ದುಸ್ಥಿತಿ   

ಹಾವೇರಿ: ಹಾರಿಹೋದ ಹಂಚುಗಳು, ಕಿತ್ತುಬಂದ ಇಟ್ಟಿಗೆಗಳು, ಕುಸಿದು ಬಿದ್ದ ಗೋಡೆಗಳು, ಮಳೆ ಬಂದರೆ ನೀರು ಸೋರುವ ಚಾವಣಿಗಳು, ಆತಂಕದಲ್ಲಿ ಪಾಠ ಕೇಳುವ ಮಕ್ಕಳು, ಅನುದಾನ ಕೊರತೆ ನೆಪವೊಡ್ಡಿ ದುರಸ್ತಿ ಮುಂದೂಡುವ ಅಧಿಕಾರಿಗಳು...

ಇವು ಜಿಲ್ಲೆಯ ಕೆಲ ಸರ್ಕಾರಿ ಶಾಲೆಗಳ ಸದ್ಯದ ದುಸ್ಥಿತಿ.

ಬೇಸಿಗೆ ರಜೆ ಕಳೆದು ಶಾಲೆಗಳು ಆರಂಭವಾಗಿದ್ದು, ಕಟ್ಟಡಗಳ ದುರಸ್ತಿ ಕೆಲಸ ಮಾತ್ರ ಶುರುವಾಗಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪೂರ್ಣ ಹಾಗೂ ಭಾಗಶಃ ಶಿಥಿಲಗೊಂಡ ಕಟ್ಟಡಗಳ ಪಟ್ಟಿ ಸಿದ್ಧಪಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ‍‍ಪ್ರಸ್ತಾವ ಸಲ್ಲಿಸಿದ್ದಾರೆ. ಆದರೆ, ಕಟ್ಟಡ ದುರಸ್ತಿ ಆಗುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ.

ADVERTISEMENT

ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ 304 ಕೊಠಡಿಗಳು ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿವೆ. ಈ ಕೊಠಡಿಗಳಲ್ಲಿ ಪಾಠ ನಡೆಯುತ್ತಿಲ್ಲ. ಉಳಿದಂತೆ, 455 ಕೊಠಡಿಗಳು ಭಾಗಶಃ ಶಿಥಿಲಗೊಂಡಿವೆ. ಈ ಪೈಕಿ ಹಲವು ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಈ ಮಕ್ಕಳು, ಕೊಠಡಿಯ ಚಾವಣಿ ಹಾಗೂ ಗೋಡೆ ಯಾವಾಗ ಬೀಳುತ್ತೊ? ಎಂಬ ಆತಂಕದಲ್ಲಿಯೇ ಪಾಠ ಆಲಿಸುತ್ತಿದ್ದಾರೆ.

ಪೂರ್ಣ ಪ್ರಮಾಣ ಹಾಗೂ ಭಾಗಶಃ ಶಿಥಿಲಗೊಳ್ಳುತ್ತಿರುವ ಕಟ್ಟಡಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹಳೇ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ವರ್ಷ 137 ಪ್ರಾಥಮಿಕ ಶಾಲೆಗಳ 229 ಕೊಠಡಿಗಳು ಶಿಥಿಲಗೊಂಡಿರುವುದು ದಾಖಲೆಗಳಿಂದ ಗೊತ್ತಾಗುತ್ತಿದೆ.

2023–24ನೇ ಶೈಕ್ಷಣಿಕ ಸಾಲಿನಲ್ಲಿ 102 ಶಾಲೆಗಳ 308 ಕೊಠಡಿಗಳ ದುರಸ್ತಿಗಾಗಿ ₹ 4.78 ಕೋಟಿ ಬಿಡುಗಡೆಯಾಗಿದೆ. ಈ ಕೊಠಡಿಗಳ ದುರಸ್ತಿ ಕೆಲಸವನ್ನು ಪಂಚಾಯತ್ ರಾಜ್ ಇಲಾಖೆ ಕೈಗೆತ್ತಿಕೊಂಡಿದೆ. ಆದರೆ, ದುರಸ್ತಿ ಕೆಲಸ ಮಾತ್ರ ಪೂರ್ಣಗೊಂಡಿಲ್ಲವೆಂಬ ಆರೋಪವೂ ಇದೆ.

ಹಾವೇರಿ ತಾಲ್ಲೂಕಿನ ಗಾಂಧಿಪುರದ ಕಿರಿಯ ಕನ್ನಡ ಪ್ರಾಥಮಿಕ ಶಾಲೆಯ ಕೊಠಡಿ ಶಿಥಿಲಗೊಂಡು ಹಲವು ವರ್ಷವಾಗಿದೆ. ಇದಕ್ಕೆ ಹೊಂದಿಕೊಂಡಿರುವ ಕೊಠಡಿಯಲ್ಲಿಯೇ ಮಕ್ಕಳು ಪಾಠ ಕೇಳುತ್ತಿದ್ದು, ಯಾವಾಗ ಏನಾಗುತ್ತದೆ? ಎಂಬ ಭೀತಿ ಇದ್ದೇ ಇದೆ. ಹೊಸ ಕೊಠಡಿ ನಿರ್ಮಿಸುವುದಾಗಿ ಅಧಿಕಾರಿಗಳು ಹೇಳಿರುವ ಭರವಸೆ ಇದುವರೆಗೂ ಈಡೇರಿಲ್ಲ.

ಚಾವಣಿ ಹಾಗೂ ಗೋಡೆ ಕುಸಿದು ಬೀಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಪೋಷಕರು ಹಾಗೂ ಶಿಕ್ಷಕರು, ಶಿಥಿಲಗೊಂಡಿದ್ದ ಕಟ್ಟಡದ ಹಂಚು ಹಾಗೂ ಇತರೆ ಅವಶೇಷಗಳನ್ನು ತೆರವು ಮಾಡಿದ್ದಾರೆ. ಮಕ್ಕಳ ಮೇಲೆ ಅವಶೇಷಗಳು ಬೀಳದಂತೆ ಬೇರೆಡೆ ಸಾಗಿಸಿದ್ದಾರೆ. ಈಗ ಕಟ್ಟಡದ ಚಾವಣಿಯಲ್ಲಿ ಕಟ್ಟಿಗೆಯ ಪಟ್ಟಿಗಳು ಮಾತ್ರ ಉಳಿದುಕೊಂಡಿವೆ. ಕಟ್ಟಡಕ್ಕೂ ಬೀಗ ಹಾಕಲಾಗಿದೆ.

ಇದು ಗಾಂಧಿಪುರ ಶಾಲೆಯೊಂದರ ದುಸ್ಥಿತಿಯಲ್ಲ. ಜಿಲ್ಲೆಯ ಹಲವು ಶಾಲೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಕೆಲ ಶಾಲೆಗಳಲ್ಲಿ ಶಿಥಿಲಗೊಂಡ ಕಟ್ಟಡಗಳು, ಪಾಳು ಬಿದ್ದಿವೆ. ಅಕ್ರಮ ಚಟುವಟಿಕೆಗಳ ತಾಣಗಳಾಗಿ ಮಾರ್ಪಟ್ಟಿವೆ.

ಹಾನಗಲ್ ತಾಲ್ಲೂಕಿನ ಗುರುರಾಯಪಟ್ಟಣ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿ ಶಿಥಿಲಗೊಂಡಿರುವುದು
ಹಾವೇರಿ ತಾಲ್ಲೂಕಿನ ಗಾಂಧಿಪುರದ ಕಿರಿಯ ಕನ್ನಡ ಪ್ರಾಥಮಿಕ ಶಾಲೆ ಕೊಠಡಿ ಶಿಥಿಲಗೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಚಾವಣಿ ಹಂಚುಗಳನ್ನು ತೆರವು ಮಾಡಿರುವುದು
ಬ್ಯಾಡಗಿ ಶಿವಪುರ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಕೊಠಡಿ ದುಸ್ಥಿತಿ
ವಿವಿಧ ಯೋಜನೆಯಡಿ ಕಳೆದ ವರ್ಷ ಹಾನಗಲ್‌ನಲ್ಲಿ 35 ಕೊಠಡಿ ನಿರ್ಮಿಸಲಾಗಿದೆ. ಈ ವರ್ಷ ಹೊಸ ಕೊಠಡಿ ನಿರ್ಮಾಣಕ್ಕೆ ಅನುದಾನ ಸಿಕ್ಕಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಅಲ್ಲಲ್ಲಿ ಕೊಠಡಿಗಳು ನಿರ್ಮಾಣಗೊಂಡಿವೆ
ವಿ.ವಿ. ಸಾಲಿಮಠ ಹಾನಗಲ್ ಕ್ಷೇತ್ರ ಶಿಕ್ಷಣಾಧಿಕಾರಿ

ಸೋರುವ ಕೊಠಡಿಗಳು: ಕಟ್ಟಡ ದುರಸ್ತಿ ನಿಧಾನ

ರಾಣೆಬೆನ್ನೂರು: ತಾಲ್ಲೂಕಿನಲ್ಲಿ 210 ಸರ್ಕಾರಿ ಶಾಲೆಗಳಿದ್ದು 98 ಕೊಠಡಿಗಳು ದುರಸ್ತಿಗಾಗಿ ಕಾದಿವೆ. ಜೊತೆಗೆ ಮಕ್ಕಳ ಸಂಖ್ಯೆಗೆ ತಕ್ಕಂತೆ 99 ಹೊಸ ಕೊಠಡಿಗಳು ಹಾಗೂ 30 ಶೌಚಾಲಯಗಳ ಅವಶ್ಯಕತೆ ಇದೆ. ಕವಲೆತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಡವಿ ಆಂಜನೇಯ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್–3 ಕೆಲ ಕೊಠಡಿಗಳು ಸೋರುತ್ತಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಮೂಲಕ ಪಾಠ ಮಾಡಲಾಗುತ್ತಿದೆ. ಇತರೆ 80 ಶಾಲೆಗಳಲ್ಲಿ ಸಣ್ಣಪುಟ್ಟ ದುರಸ್ತಿ ಇದ್ದು ಕೆಲಸ ಮಾತ್ರ ಆರಂಭವಾಗಿಲ್ಲ. ಮಕ್ಕಳ ದಾಖಲಾತಿ ಆಂದೋಲನ ಆರಂಭಿಸಲಾಗಿದ್ದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಶಿಕ್ಷಕರು ಹಾಗೂ ಅಧಿಕಾರಿಗಳು ಹಲವು ಕ್ರಮ ಕೈಗೊಂಡಿದ್ದಾರೆ. ಆದರೆ ಕಟ್ಟಡ ದುರಸ್ತಿ ಮಾತ್ರ ನಿಧಾನಗತಿಯಲ್ಲಿದೆ. ನಗರ ಪ್ರದೇಶದ 80 ಶಾಲೆಗಳಿಗೆ ಆಟದ ಮೈದಾನವಿಲ್ಲ. ಅಕ್ಷರ ದಾಸೋಹ ಯೋಜನೆಯ 32 ಕೊಠಡಿಗಳು ಭಾಗಶಃ ಶಿಥಿಲಗೊಂಡಿವೆ. ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಅಕ್ಷರ ದಾಸೋಹ ಯೋಜನೆಯ ಕಟ್ಟಡ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ನೀರು ಸೋರುತ್ತಿದೆ. ಈ ಬಗ್ಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಎಸ್‌ಡಿಎಂಸಿ ಸದಸ್ಯರು ತಿಳಿಸಿದರು. ಬಾಕ್ಸ್‌... ಶಾಲಾ ಕಟ್ಟಡ ದುರಸ್ತಿಗೆ ಮನವಿ ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 10 ಕೊಠಡಿಗಳಿದ್ದು ಅದರಲ್ಲಿ ನಾಲ್ಕು ಹಂಚು ಹೊಂದಿದ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಈಚೆಗೆ ಸುರಿದ ಬಾರಿ ಮಳೆ ಗಾಳಿಗೆ ಚಾವಣಿ ಕಿತ್ತು ಹೋಗಿದೆ. ಕುಂಬಿಯಲ್ಲಿ ನೀರು ಸೋರುತ್ತಿದೆ. ಮಕ್ಕಳ ಶೈಕ್ಷಣಿಕ ಅವಧಿಗೆ ಅನಾನುಕೂಲವಾಗಿದೆ. ಹೊಸಕಟ್ಟಡ ಮತ್ತು ಶಿಥಿಲಗೊಂಡ ಕೊಠಡಿ ದುರಸ್ತಿಗೆ ಇಲಾಖೆ ಗಮನಕ್ಕೆ ತರಲಾಗಿದೆ. -ಶಿವಕುಮಾರ ಗೋಣೆಮ್ಮನವರ ಎಸ್‌ಡಿಎಂಸಿ ಅಧ್ಯಕ್ಷ ಕವಲೆತ್ತು ರಾಣೆಬೆನ್ನೂರು

ಮೂಲಸೌಲಭ್ಯ ವಂಚಿತ ಶಾಲೆಗಳು..

ಬ್ಯಾಡಗಿ: ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಶೀಘ್ರ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪಟ್ಟಣದ ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್‌ ಶಾಲೆ ಮತ್ತು 12 ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ತಕ್ಕಂತೆ ಶೌಚಾಲಯಗಳ ಕೊರತೆಯನ್ನು ಎದುರಿಸುತ್ತಿವೆ. ಶಿವಪುರ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲಾ ಕಟ್ಟಡದ ಚಾವಣಿ ಶಿಥಿಲಗೊಂಡಿದ್ದು ಹೊರ ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದರೆ ನೀರು ಸೋರುವ ಸ್ಥಿತಿ ಇದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು. ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. 56 ಕೊಠಡಿಗಳು ಬಳಸಲು ಯೋಗ್ಯವಾಗಿಲ್ಲ ಎನ್ನುವುದನ್ನು ಗುರುತಿಸಲಾಗಿದೆ. ಹೊಸ ಕೊಠಡಿಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕಳೆದ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಹಣ ಬಿಡುಗಡೆಯಾಗಿಲ್ಲ. ಗ್ರಾಮೀಣ ಭಾಗದ ಶಾಲೆಗಳಿಗೆ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಜಿ.ಕೋಟಿ ಹೇಳಿದರು.

ದುರಸ್ತಿಗೆ ಕಾದಿರುವ ಕೊಠಡಿಗಳು, ಶೌಚಾಲಯ ಕೊರತೆ

ರಟ್ಟೀಹಳ್ಳಿ: ತಾಲ್ಲೂಕಿನ ಹಲವು ಶಾಲೆಗಳ ಕಟ್ಟಡಗಳು ದುಸ್ಥಿತಿಯಲ್ಲಿವೆ. ಕೆಲ ಶಾಲೆಗಳಲ್ಲಿ ಸೂಕ್ತ ಶೌಚಾಲಯಗಳಿಲ್ಲ. ಸಿಬ್ಬಂದಿ ಕೊರತೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ತಾಲ್ಲೂಕಿನಲ್ಲಿ 46 ಕಿರಿಯ ಪ್ರಾಥಮಿಕ ಶಾಲೆಗಳು 65 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 9 ಸರ್ಕಾರಿ ಪ್ರೌಢಶಾಲೆಗಳಿವೆ. ಒಟ್ಟು 9942 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲಾಖೆಯ ಮಾಹಿತಿಯಂತೆ ತಾಲ್ಲೂಕಿನಲ್ಲಿ 47 ಶಾಲೆಗಳ ಕಟ್ಟಡಗಳು ದುರಸ್ತಿ ಆಗಬೇಕಿದೆ. 22 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡು ಪುನರ್ ನಿರ್ಮಾಣವಾಗಬೇಕಿದೆ. ಶಿಥಿಲಗೊಂಡಿರುವ ಕಟ್ಟಡಗಳನ್ನೇ ಮೇಲ್ನೋಟಕ್ಕಷ್ಟೇ ದುರಸ್ತಿ ಮಾಡಲಾಗುತ್ತಿದೆ. ಇದರ ಬದಲು ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಫೋಷಕರು ಆಗ್ರಹಿಸಿದ್ದಾರೆ. ‘ತಾಲ್ಲೂಕಿನ ಸರ್ಕಾರಿ ಶಾಲೆ ಕೊಠಡಿಗಳ ದುರಸ್ತಿ ಬಗ್ಗೆ ಜಿಲ್ಲಾ ಪಂಚಾಯಿತಿ ಮಾಹಿತಿ ಕೇಳಿದೆ. ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಹೇಳಿದರು.

ಮಳೆ ಬಂದರೆ ಸೋರುವ ಕೊಠಡಿಗಳು

ಹಾನಗಲ್: ತಾಲ್ಲೂಕಿನಲ್ಲಿ 220 ಸರ್ಕಾರಿ ಪ್ರಾಥಮಿಕ ಮತ್ತು 29 ಸರ್ಕಾರಿ ಪ್ರೌಢಶಾಲೆಗಳಿವೆ. ಈ ಶಾಲೆಗಳ 1266 ಕೊಠಡಿಗಳ ಪೈಕಿ ಪ್ರಾಥಮಿಕ ಶಾಲೆಗಳ 371 ಕೊಠಡಿಗಳು ದುರಸ್ತಿಗೆ ಕಾದಿವೆ. 167 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು ನೆಲಸಮಗೊಳಿಸಬೇಕಾದ ಸ್ಥಿತಿಯಲ್ಲಿವೆ. 22 ಪ್ರೌಢಶಾಲೆ ಮತ್ತು 50 ಪ್ರಾಥಮಿಕ ಶಾಲೆಗಳ ಕೊಠಡಿಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಾದ ಅಗತ್ಯವಿದೆ.ಮಳೆಗಾಲ ಆರಂಭವಾಗಿರುವುದರಿಂದ ಕೊಠಡಿಗಳು ಸೋರುವುದೇ ಹೆಚ್ಚು. ಭಾಗಶಃ ಶಿಥಿಲಗೊಂಡಿರುವ ಕೊಠಡಿಗಳ ಚಾವಣಿಯನ್ನಾದರೂ ಮೊದಲು ಭದ್ರಗೊಳಿಸಬೇಕಿದೆ. ಕೆಂಪು ಹಂಚು ತೆರವು ಮಾಡಿ ತಗಡಿನ ಚಾವಣಿ ಹಾಕುವ ವ್ಯವಸ್ಥೆ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಎಲ್ಲ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆ ಕೊಠಡಿಗಳು ಸುಸ್ಥಿತಿಯಲ್ಲಿರುವುದು ಸಮಾಧಾನಕರ ವಿಷಯ.

(ಪೂರಕ ಮಾಹಿತಿ: ಮುಕ್ತೇಶ್ವರ ಕೂರಗುಂದಮಠ, ಪ್ರಮೀಳಾ ಹುನಗುಂದ, ಮಾರುತಿ ಪೇಟಕರ, ಪ್ರದೀಪ ಕುಲಕರ್ಣಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.