ಹಾವೇರಿ: ನಗರದ ಹೃದಯಭಾಗದಲ್ಲಿ ಮನಮೋಹಕ ನೋಟದ ಭವ್ಯ ಕಟ್ಟಡ. ಅಲ್ಲಲ್ಲಿ ಗಾಜಿನ ಬಾಗಿಲುಗಳ ಅಲಂಕಾರ. ವಿಶಾಲವಾದ ಸಭಾಭವನ. ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳ. ಇಷ್ಟೆಲ್ಲ ವ್ಯವಸ್ಥಿತವಾಗಿ ನಿರ್ಮಿಸಿರುವ ‘ಹೈಟೆಕ್ ರಂಗಮಂದಿರ’ ಇದೀಗ ಪಾಳು ಬಿದ್ದಿದೆ. ಹಾವೇರಿಯಲ್ಲೊಂದು ಸುಸಜ್ಜಿತ ರಂಗಮಂದಿರ ಆಯಿತೆಂದು ಸಂತಸಪಡುತ್ತಿದ್ದ ಸಾಹಿತಿಗಳು ಹಾಗೂ ಕಲಾವಿದರ ಕನಸು ಕಮರುತ್ತಿದೆ.
ಕೇಂದ್ರ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿರುವ ಜಯಪ್ರಕಾಶ ನಾರಾಯಣ (ಜೆ.ಪಿ) ಸರ್ಕಲ್ ಬಳಿಯ ಗೂಗಿಕಟ್ಟಿಯಲ್ಲಿ ಹೈಟೆಕ್ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಲಾಗಿದೆ. ಉದ್ಘಾಟನೆ ಬಳಿಕ ರಂಗಮಂದಿರದ ಬಾಗಿಲು ಮುಚ್ಚಿದ್ದು, ಇದುವರೆಗೂ ತೆರೆದಿಲ್ಲ. ಹಣ ಖರ್ಚು ಮಾಡಿ ಕಟ್ಟಿದ್ದ ಕಟ್ಟಡ ಹಾಗೂ ಸುತ್ತಮುತ್ತಲಿನ ಸ್ಥಳವೆಲ್ಲವೂ ಕ್ರಮೇಣ ಹುಲ್ಲುಗಾವಲು ಪ್ರದೇಶವಾಗಿ ಮಾರ್ಪಡುತ್ತಿದೆ.
ಜನಪದ ಕಲೆಗಳು ಹಾಗೂ ರಂಗಭೂಮಿ ಚಟುವಟಿಕೆಗಳ ನೆಲೆಯಾದ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ರಂಗಮಂದಿರಗಳ ಕೊರತೆಯಿದೆ. ವೃತ್ತಿ ರಂಗಭೂಮಿ ಕಲಾವಿದರು, ಬಯಲು ಪ್ರದೇಶಗಳಲ್ಲಿ ಟೆಂಟ್ ಹಾಕಿಕೊಂಡು ನಾಟಕ ಪ್ರದರ್ಶಿಸುತ್ತಿದ್ದಾರೆ. ಹವ್ಯಾಸಿ ರಂಗಭೂಮಿ ಕಲಾವಿದರು, ಖಾಸಗಿ ಸಭಾಭವನಗಳ ಮೊರೆ ಹೋಗುತ್ತಿದ್ದಾರೆ. ಸಾಹಿತ್ಯಿಕ ಹಾಗೂ ಇತರೆ ಸಾರ್ವಜನಿಕ ಕಾರ್ಯಕ್ರಮಗಳು, ಮನೆಗಳಲ್ಲಿ ನಡೆಯುತ್ತಿವೆ.
ಸಾಹಿತಿಗಳು, ಜನಪದ ಹಾಗೂ ರಂಗಭೂಮಿ ಕಲಾವಿದರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದ ಜಿಲ್ಲಾಡಳಿತ, ಹೈಟೆಕ್ ರಂಗಮಂದಿರ ನಿರ್ಮಿಸಿದೆ. ನಗರಸಭೆ ಅಧೀನದಲ್ಲಿರುವ ಈ ರಂಗಮಂದಿರ, ನಿರ್ವಹಣೆ ಕೊರತೆ ಹಾಗೂ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸದಿದ್ದರಿಂದ ಪಾಳು ಬಿದ್ದಿದೆ.
2016–17ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಹಾವೇರಿ ಜಿಲ್ಲೆಗೆ ₹ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಈ ಅನುದಾನದ ಪೈಕಿ ₹ 6 .47 ಕೋಟಿ ವೆಚ್ಚದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಹಾವೇರಿ ನಗರಸಭೆ ಆಶ್ರಯದಲ್ಲಿ ಈ ಹೈಟೆಕ್ ರಂಗಮಂದಿರ ನಿರ್ಮಿಸಲಾಗಿದೆ.
20 ಗುಂಟೆ ಜಾಗದಲ್ಲಿ 2019ರಲ್ಲಿ ಶುರುವಾಗಿದ್ದ ಕಟ್ಟಡದ ನಿರ್ಮಾಣ ಕೆಲಸ, 2021ರ ಮಾರ್ಚ್‌ಗೆ ಪೂರ್ಣಗೊಂಡಿತ್ತು. ಅದೇ ವರ್ಷವೇ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದ್ದು, ಇದಾದ ನಂತರ ಬಂದ್ ಮಾಡಿರುವ ಬಾಗಿಲನ್ನು ಇದುವರೆಗೂ ತೆಗೆದಿಲ್ಲ.
ಮೂರು ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಕಾರು–ಬೈಕ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ ಆಡಳಿತ ಕಚೇರಿ, ಸ್ವಾಗತಕಾರರ ಕಚೇರಿ, ಊಟದ ಜಾಗ, ಅಡುಗೆ ಮನೆ ಹಾಗೂ ಶೌಚಾಲಯ ನಿರ್ಮಿಸಲಾಗಿದೆ. ನೆಲ ಮಹಡಿಯಲ್ಲಿಯೇ ಚಿಕ್ಕದಾದ ‘ಸಮಾವೇಶ ಕೊಠಡಿ’ ಇದೆ. ಸಣ್ಣ ಪ್ರಮಾಣದ ಕಾರ್ಯಕ್ರಮಗಳ ಆಯೋಜನೆಗೆ ಈ ಕೊಠಡಿ ಅನುಕೂಲಕರವಾಗಿದೆ. ರಂಗಮಂದಿರ ಬಾಗಿಲು ಹಾಕಿರುವುದರಿಂದ, ಯಾವ ಸೌಲಭ್ಯವನ್ನೂ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ರಂಗಮಂದಿರ ಸುತ್ತಲೂ ಕಾಂಪೌಂಡ್ ಹಾಗೂ ಉದ್ಯಾನ ನಿರ್ಮಿಸುವ ಕೆಲಸ ಬಾಕಿ ಉಳಿದಿದೆ. ರಂಗಮಂದಿರ ಆವರಣದಲ್ಲಿ ಸುಲಭ ಶೌಚಾಲಯವಿದ್ದು, ಅದು ಸಹ ಪಾಳು ಬಿದ್ದಿದೆ.
ಗೋದಾಮು ಮಾಡಿಕೊಂಡ ನಗರಸಭೆ: ರಂಗಮಂದಿರ ಕೊಠಡಿಗಳನ್ನು ನಗರಸಭೆಯವರು ಗೋದಾಮು ಆಗಿ ಬಳಸಿಕೊಳ್ಳುತ್ತಿದ್ದಾರೆ. ಕಸದ ಬುಟ್ಟಿಗಳು, ಕಸ ಸಂಗ್ರಹಿಸುವ ತಳ್ಳುಗಾಡಿಗಳು ಹಾಗೂ ಇತರೆ ವಸ್ತುಗಳನ್ನು ಕೊಠಡಿಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಕೋಟ್ಯಂತ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ರಂಗಮಂದಿರ, ಗೋದಾಮು ರೀತಿಯಲ್ಲಿ ಬಳಕೆಯಾಗುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ರಂಗಮಂದಿರವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ವಿವಿಧ ಕಾರ್ಯಕ್ರಮಗಳಿಗೆ ನೀಡಬೇಕು. ಈ ಮೂಲಕ ಸಾಹಿತ್ಯಿಕ, ರಂಗಭೂಮಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.
20 ಗುಂಟೆ ಜಾಗದಲ್ಲಿ ನಿರ್ಮಾಣ ಗೋದಾಮು ಮಾಡಿಕೊಂಡ ನಗರಸಭೆ ಕೆರೆಯಂತಾದ ಪಾರ್ಕಿಂಗ್ ಜಾಗ
ರಂಗಮಂದಿರ ನಿರ್ವಹಣೆಗೆ ಟೆಂಡರ್ ಕರೆಯಲಾಗಿದ್ದು ಒಬ್ಬರು ಮಾತ್ರ ಭಾಗವಹಿಸಿದ್ದಾರೆ. ಟೆಂಡರ್ ಬಗ್ಗೆ ಮುಂಬರುವ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದುಶಶಿಕಲಾ ರಾಮು ಮಾಳಗಿ ನಗರಸಭೆ ಅಧ್ಯಕ್ಷೆ
ರಂಗಮಂದಿರವನ್ನು ಜನರ ಬಳಕೆಗೆ ಮುಕ್ತಗೊಳಿಸಬೇಕು. ಉಸ್ತುವಾರಿ ಸಮಿತಿಯೊಂದನ್ನು ರಚಿಸಿ ನಿರ್ವಹಣೆ ಜವಾಬ್ದಾರಿ ವಹಿಸಬೇಕು. ಸಂಘ–ಸಂಸ್ಥೆಗಳು ಹಾಗೂ ಇತರರಿಗೆ ಕಾರ್ಯಕ್ರಮ ಆಯೋಜಿಸಲು ರಂಗಮಂದಿರ ನೀಡಬೇಕುಲಿಂಗಯ್ಯ ಬಿ. ಹಿರೇಮಠ ಜಿಲ್ಲಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು
ರಂಗಮಂದಿರ ಆರಂಭಿಸಿದರೆ ಜಯಂತಿಗಳು ಸೇರಿದಂತೆ ಸರ್ಕಾರದ ಕಾರ್ಯಕ್ರಮ ನಡೆಸಲು ಅನುಕೂಲವಾಗುತ್ತದೆ. ರಂಗಮಂದಿರ ತೆರೆಯುವಂತೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಕೋರಲಾಗಿದೆಆರ್.ಬಿ. ಚಿನ್ನಿಕಟ್ಟಿ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತ ಇಲಾಖೆ
ಸಾಹಿತ್ಯಿಕ ಹಾಗೂ ರಂಗಭೂಮಿ ಚಟುವಟಿಕೆ ನಡೆಸುವ ಉದ್ದೇಶದಿಂದ ನಿರ್ಮಿಸಿರುವ ಹೈಟೆಕ್ ರಂಗಮಂದಿರ ಪಾಳು ಬಿದ್ದಿರುವುದು ದುರಂತದ ಸಂಗತಿ. ತ್ವರಿತವಾಗಿ ರಂಗಮಂದಿರದ ಬಾಗಿಲು ತೆರೆದು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕುಸಿದ್ದರಾಜು ಕಲಕೋಟಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.