ADVERTISEMENT

ಶಾಸಕ ನೆಹರು ಓಲೇಕಾರಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ತೀವ್ರ ಆಕ್ರೋಶ

ನೆಹರು ಓಲೇಕಾರ ಬೆಂಬಲಿಗರಿಂದ ಉರುಳು ಸೇವೆ, ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 10:42 IST
Last Updated 4 ಆಗಸ್ಟ್ 2021, 10:42 IST
ಶಾಸಕ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ, ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಉರುಳು ಸೇವೆ ಮಾಡಿ ಆಕ್ರೋಶ ಹೊರಹಾಕಿದರು  –ಪ್ರಜಾವಾಣಿ ಚಿತ್ರ 
ಶಾಸಕ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ, ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಉರುಳು ಸೇವೆ ಮಾಡಿ ಆಕ್ರೋಶ ಹೊರಹಾಕಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ಶಾಸಕ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಕಾರಣ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಮತ್ತು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬುಧವಾರ ಒಗ್ಗೂಡಿದ ಕಾರ್ಯಕರ್ತರು ಹಿಂದುಳಿದ ವರ್ಗದ ನಾಯಕರಾದ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಉರುಳು ಸೇವೆ ಮಾಡಿದರು. ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ರಸ್ತೆ ತಡೆದು ಆಕ್ರೋಶ ಹೊರಹಾಕಿದರು.

ಬ್ಯಾಡಗಿ ಮತ್ತು ಹಾವೇರಿ ವಿಧಾನಸಭಾ ಕ್ಷೇತ್ರಗಳಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನೆಹರು ಓಲೇಕಾರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ಇರುವುದು ಖಂಡನೀಯ. 40 ವರ್ಷ ರಾಜಕೀಯ ಅನುಭವ ಇರುವ ಓಲೇಕಾರ ಅವರನ್ನು ಕಡೆಗಣಿಸಿದ್ದು, ಸಚಿವ ಸಂಪುಟದಲ್ಲಿ ಅಸಮತೋಲನ ಎದ್ದು ಕಾಣುತ್ತದೆ ಎಂದು ಬಿಜೆಪಿ ಮುಖಂಡರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಿಎಂ ತವರು ಜಿಲ್ಲೆಯಲ್ಲೇ ಹಿಂದುಳಿದ ನಾಯಕನಿಗೆ ನ್ಯಾಯ ಸಿಗಲಿಲ್ಲ. ಹಾವೇರಿ ತಾಲ್ಲೂಕಿನ ಅಭಿವೃದ್ಧಿಗೆ ಓಲೇಕಾರರ ಕೊಡುಗೆ ಅನನ್ಯ. ಇವರಿಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಓಲೇಕಾರ ಪರ ಘೋಷಣೆ ಕೂಗಿದರು. ಶ್ರೀಕಾಂತ ಪೂಜಾರ ಮತ್ತು ಮಂಜುನಾಥ ಇಟಗಿ ಅವರು ಉರುಳು ಸೇವೆ ಮಾಡಿದರು.

ಬಿಜೆಪಿ ಮುಖಂಡರಾದ ಬಾಬುಸಾಬ್ ಮೊಮಿನಗಾರ್, ಲಲಿತಾ ಗುಂಡೇನಹಳ್ಳಿ, ಗಿರೀಶ ತುಪ್ಪದ, ಜಗದೀಶ ಮಲಗೋಡ, ಶಿವರಾಜ ಮತ್ತಿಹಳ್ಳಿ, ಮಂಜುನಾಥ ಇಟಗಿ, ಜಹಿರ್ ಅಬ್ಬಾಸ್ ಬೈಗಂಪಲ್ಲಿ, ಬಾಲಕೃಷ್ಣ ಕಲಾಲ, ಅಲ್ತಾಫ್ ಬೋರ್ಗಲ್, ಈರಣ್ಣ ಪಟ್ಟಣಶೆಟ್ಟಿ, ರೋಹಿಣಿ ಪಾಟೀಲ, ಲತಾ ಬಡ್ನಿಮಠ, ಪುಷ್ಪಲತಾ ಚಕ್ರಸಾಲಿ, ಪ್ರಶಾಂತ ಭಾಂಗ್ರೆ, ಜಗದೀಶ್ ಸವಣೂರ, ಹೊನ್ನಪ್ಪ ಮಾಳಗಿ, ರತ್ನಾ ಭೀಮಕ್ಕನವರ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.