ADVERTISEMENT

ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿ ಶೀಘ್ರ: ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 12:54 IST
Last Updated 1 ಸೆಪ್ಟೆಂಬರ್ 2021, 12:54 IST
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸವಣೂರ ಪಟ್ಟಣಕ್ಕೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರು ಹೂಮಳೆ ಸುರಿಸಿ, ಸ್ವಾಗತ ನೀಡಿದರು 
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸವಣೂರ ಪಟ್ಟಣಕ್ಕೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರು ಹೂಮಳೆ ಸುರಿಸಿ, ಸ್ವಾಗತ ನೀಡಿದರು    

ಹಾವೇರಿ: ರಾಜ್ಯದಲ್ಲಿ ಹಲವಾರು ಮರಳು ನೀತಿಗಳಿಂದ ಗೊಂದಲ ಉಂಟಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಮರಳು ನೀತಿಯ ಕರಡನ್ನು ಸಿದ್ಧಪಡಿಸಲು ಸೂಚಿಸಿದ್ದು, ಶೀಘ್ರದಲ್ಲೇ ‘ಹೊಸ ಮರಳು ನೀತಿ’ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಜಿಲ್ಲೆಯ ಮುಖ್ಯಮಂತ್ರಿಯವರ ಸ್ವಕ್ಷೇತ್ರ ಶಿಗ್ಗಾವಿ ಮತ್ತು ಸವಣೂರ ತಾಲ್ಲೂಕಿನಲ್ಲಿ ಒಟ್ಟು ₹96.97 ಕೋಟಿ ವೆಚ್ಚದ 6 ಕಾಮಗಾರಿಗಳ ಉದ್ಘಾಟನೆ ಮತ್ತು 10 ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಹಿಂದೆ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ ಸಿ.ಸಿ.ಪಾಟೀಲ ಅವರು ಮರಳು ನೀತಿ ಸಿದ್ಧಪಡಿಸಿದ್ದರು. ಅದನ್ನೂ ಪರಿಶೀಲನೆ ಮಾಡುತ್ತಿದ್ದೇವೆ. ಸರ್ಕಾರಿ ಯೋಜನೆಗಳಿಗೆ, ಆಶ್ರಯ ಯೋಜನೆ ಫಲಾನುಭವಿಗಳಿಗೆ ಹಾಗೂ ಸಾಮಾನ್ಯ ಜನರಿಗೆಸುಲಭವಾಗಿ ಮರಳು ಸಿಗುವ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ADVERTISEMENT

ಡಿ.ಸಿ.ಗಳ ಆದೇಶ ಸರಿಯಲ್ಲ:

ಕೋವಿಡ್‌ ಲಸಿಕೆ ಪಡೆಯದಿದ್ದರೆ ಪಡಿತರ, ಪಿಂಚಣಿ ಇಲ್ಲ ಎಂದು ಕೆಲವು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ, ‘ಈ ರೀತಿ ಆದೇಶ ಹೊರಡಿಸುವುದು ಸರಿಯಲ್ಲ. ಸಾರ್ವಜನಿಕರ ಮನವೊಲಿಸಿ ಕೆಲಸ ಮಾಡಬೇಕು. ಕೋವಿಡ್‌ ಲಸಿಕೆ ಲಭ್ಯ ಇರುವುದರಿಂದ ಜನರು ಕೂಡ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಉದ್ಯೋಗ ಆಧಾರಿತ ನೀತಿ:

ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಜನರಿಗೆ ಉದ್ಯೋಗ ನೀಡಬೇಕಿದೆ. ಹೀಗಾಗಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುತ್ತೇವೆ. ‘ಉದ್ಯೋಗ ಆಧಾರಿತ ನೀತಿ’ಗೆ ಒತ್ತು ಕೊಟ್ಟು, ‘ಇಂಡಸ್ಟ್ರಿಯಲ್‌ ಟೌನ್‌ಶಿಪ್‌’ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಗ್ರಾಮ ಮಟ್ಟದಲ್ಲೇ ಸರ್ಕಾರಿ ಸೇವೆ:

ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಿಗುತ್ತಿರುವ ಸರ್ಕಾರಿ ಸೇವೆಗಳನ್ನು ಗ್ರಾಮ ಮಟ್ಟದಲ್ಲೇ ದೊರಕಿಸಲು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೊಳಿಸುತ್ತೇವೆ. ಡಿಜಿಟಲೀಕರಣಕ್ಕೆ ಒತ್ತು ನೀಡಿ, ಎಲ್ಲ ಗ್ರಾಮಗಳಿಗೂ ಅಂತರ್ಜಾಲ ಸೇವೆ ಕಲ್ಪಿಸುತ್ತೇವೆ. ಸರ್ಕಾರಿ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಎಲ್ಲ ಜಿಲ್ಲೆಗಳಿಗೂ ಶೀಘ್ರದಲ್ಲೇ ಸೂಕ್ತ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗುತ್ತದೆ. ದೇಗುಲಗಳಲ್ಲಿ ಹೆಣ್ಣುಮಕ್ಕಳಿಗೆ ಡ್ರೆಸ್‌ಕೋಡ್‌ ನಿಗದಿಪಡಿಸುವ ಯಾವ ಚಿಂತನೆಯೂ ನಮ್ಮ ಸರ್ಕಾರದಲ್ಲಿ ಇಲ್ಲ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.