ಹಾವೇರಿ: ಇಲ್ಲಿನ ಕೆರಿಮತ್ತಿಹಳ್ಳಿ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದ್ದು,ಕಳೆದ ಶೈಕ್ಷಣಿಕ ಸಾಲಿನಲ್ಲಿ ಮಂಜೂರಾಗಿದ್ದ ನಾಲ್ಕು ಹೊಸ ವಿಭಾಗಗಳು ಈ ಬಾರಿಯೂ ಆರಂಭಗೊಳ್ಳುವ ಲಕ್ಷಣಗಳಿಲ್ಲ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್‌ನಲ್ಲಿ ಹಾವೇರಿ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ರಾಜ್ಯಶಾಸ್ತ್ರ, ಇತಿಹಾಸ, ಖಗೋಳ ವಿಜ್ಞಾನ (ಜಿಯೋಗ್ರಫಿ) ಹಾಗೂ ಗಣಿತ ವಿಷಯಗಳನ್ನು ನೀಡಲು ಕಳೆದ ವರ್ಷವೇ ಒಪ್ಪಿಗೆ ನೀಡಲಾಗಿತ್ತು.
ಹೊಸ ವಿಭಾಗಗಳ ಆರಂಭಕ್ಕೆ ಸ್ನಾತಕೋತ್ತರ ಕೇಂದ್ರದಲ್ಲಿ ಮೂಲ ಸೌಕರ್ಯಗಳ ಕೊರೆತ ಇದೆ ಎಂದು ಅಂದಿನ ಪ್ರಭಾರ ಆಡಳಿತಾಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಇದರಿಂದ ಹೊಸದಾಗಿ ಮಂಜೂರಾಗಿದ್ದ ಹೊಸ ವಿಭಾಗಗಳು ವಾಪಾಸ್ ಹೋದವು ಎನ್ನಲಾಗಿದೆ.
ಕಳೆದ ವರ್ಷ ತಾಂತ್ರಿಕ ಕಾರಣ ನೀಡಿದ್ದ ವಿಶ್ವವಿದ್ಯಾಲಯವು, ಇಲ್ಲಿನ ಪತ್ರಿಕೋದ್ಯಮ ವಿಭಾಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ, ಅದನ್ನು ಪ್ರಸಕ್ತ ವರ್ಷದಿಂದ ಪುನಃ ಪ್ರಾರಂಭಿಸಿ, ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಬೇಡಿಕೆ ಇರುವ ಹೊಸ ವಿಭಾಗಗಳನ್ನು ಪ್ರಾರಂಭಿಸಲು ಹಾಗೂ ಸ್ನಾತಕೋತ್ತರ ಕೇಂದ್ರಕ್ಕೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿ ತೋರದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.
ಸ್ನಾತಕೋತ್ತರ ಕೇಂದ್ರ ಆಡಳಿತಾಧಿಕಾರಿ ಹುದ್ದೆಯ ಪೂರ್ಣ ಅಧಿಕಾರವನ್ನು 2014ರಿಂದ ಈತನಕ ಯಾರಿಗೂ ನೀಡಿಲ್ಲ. ಪ್ರಭಾರ ಅಧಿಕಾರಿಗಳು ವಾರಕ್ಕೆರಡು ದಿನ ಧಾರವಾಡದಿಂದ ಬಂದು ಹೋಗುವಂತಾಗಿದೆ.
ಉದ್ಯಾನ ನಿರ್ವಹಣೆ: 48 ಎಕರೆ ಕ್ಯಾಂಪಸ್ ಸ್ನಾತಕೋತ್ತರ ಕೇಂದ್ರದ ಕ್ಯಾಂಪಸ್ ಇದ್ದು, ಈ ಪೈಕಿ 13 ಎಕರೆ ಉದ್ಯಾನ ಇದೆ. ಆದರೆ, ಸಿಬ್ಬಂದಿ ಕೊರೆತೆಯಿಂದ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಆದರೂ, ಪ್ರಭಾರ ಆಡಳಿತಾಧಿಕಾರಿಗಳು ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ನಾಲ್ಕು ಹೊಸ ವಿಭಾಗಗಳನ್ನು ಪ್ರಾರಂಭಿಸಲು, ಕಟ್ಟಡ ಹಾಗೂ ಮೂಲ ಸೌಲಭ್ಯಗಳ ಕೊರತೆ ಇದೆ. ಮುಂದಿನ ವರ್ಷ ಪ್ರಾರಂಭಿಸಲಾಗುವುದು ಎಂದು ಪ್ರಭಾರ ಆಡಳಿತಾಧಿಕಾರಿ ಡಾ.ಟಿ.ಎಂ.ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸ್ನಾತಕೋತ್ತರ ಕೇಂದ್ರಕ್ಕೆ ಮಂಜೂರಾದ ಮಹಿಳಾ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡ ಕಾಮಗಾರಿಯು ಈಚೆಗೆ ಆರಂಭಗೊಂಡಿದೆ. ಸದ್ಯಕ್ಕೆ ವಸತಿ ನಿಲಯವು ನಗರದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.
ಕ್ರೀಡಾಂಗಣ ಅವಶ್ಯಕತೆ ಇದೆ: 2006–07ರಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾಗಿದ್ದು, ಇನ್ನೂ ಕ್ರೀಡಾಂಗಣ ಇಲ್ಲ. ನಮ್ಮಲ್ಲಿರುವ ಕ್ರೀಡಾ ಸ್ಫೂರ್ತಿಗೆ ಪ್ರೋತ್ಸಾಹ ಇಲ್ಲದಂತಾಗಿದೆ ಎಂದು ಅಧ್ಯಯನ ಕೇಂದ್ರದ ವಿದ್ಯಾರ್ಥಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.