ಹಾವೇರಿ: ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಸುವ ಹಾಗೂ ಜನಸಾಮಾನ್ಯರ ಕಲ್ಯಾಣದ ಹಿತಾಸಕ್ತಿಯ ಕಾರ್ಯನೀತಿ ಕೈಗೊಳ್ಳಲು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದ ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಯುವ ವಿರೋಧಿ ಬಜೆಟ್ ಅನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ತಿರಸ್ಕರಿಸುತ್ತದೆ. ಭಾರತದ ಯುವಜನತೆ ಉದ್ಯೋಗಗಳನ್ನು ಕಳೆದುಕೊಂಡಿದೆ ಮತ್ತು ಮುಂದಿನ ಹಣಕಾಸು ವರ್ಷದ ಬಜೆಟ್ ಪ್ರಸ್ತಾವನೆಗಳು ಯಾವುದೇ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿಲ್ಲ. ನಗರದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸ್ಥಾಪಿಸಬೇಕೆಂಬ ಬಡ ಜನರ ಹಕ್ಕೊತ್ತಾಯಕ್ಕೆ ಪ್ರಸ್ತುತ ಬಜೆಟ್ ನಲ್ಲಿ ಸ್ಪಂದಿಸಿಲ್ಲ ಎಂದು ದೂರಿದರು.
ಹೆಚ್ಚಿನ ಪ್ರಮಾಣದ ನಿರುದ್ಯೋಗ ಮತ್ತು ಉದ್ಯೋಗ ನಷ್ಟದಿಂದ ಯುವಕರು ಭ್ರಮನಿರಸನಗೊಂಡಿರುವ ದೇಶದಲ್ಲಿ, ಕೇವಲ ವರ್ಚುವಲ್ ಹಣವನ್ನು ಉತ್ತೇಜಿಸುವ ಘೋಷಣೆಗಳು ಅಪರಾಧವಾಗಿದೆ. ಭಾರತದಲ್ಲಿ ಶೇ 10ರಷ್ಟು ಶ್ರೀಮಂತರು ದೇಶದ ಶೇ 75ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಅವರು ಸಾಂಕ್ರಾಮಿಕ ಸಮಯದಲ್ಲಿಯೂ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದರು.
ಯುವಜನತೆಯ ಉದ್ಯೋಗದ ಕನಸುಗಳನ್ನು ನಾಶ ಮಾಡದೇ, ದೇಶದ ಎಲ್ಲ ಯುವಜನತೆಗೆ ಉದ್ಯೋಗ ಖಾತ್ರಿಗೊಳಿಸುವಂತೆ, ಉದ್ಯೋಗ ಸೃಷ್ಟಿಸಲು ಮುಂದಾಗಬೇಕೆಂದು ಡಿವೈಎಫ್ಐ ಜಿಲ್ಲಾ ಸಮಿತಿಯು ಆಗ್ರಹಿಸಿತು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ವಕೀಲರಾದ ನಾರಾಯಣ ಕಾಳೆ,
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಮುಖಂಡರಾದ ಬಿರೇಶ ನೆಟಗಲ್ಲಣ್ಣನವರ, ಹೊನ್ನಪ್ಪ ತಳವಾರ, ವಿರೂಪಾಕ್ಷಯ್ಯ ಎಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.