ಸವಣೂರು: ಉದ್ಯೋಗ ಅರಸಿಕೊಂಡು ದೂರದ ನಗರ ಪ್ರದೇಶಗಳಿಗೆ ಹೋಗುವಂಥ ಕಾರ್ಮಿಕರಿಗೆ ಸ್ಥಳೀಯ ಮಟ್ಟದಲ್ಲೇ ಕೆಲಸ ನೀಡುವ ಉದ್ದೇಶದಿಂದ 1994ರಲ್ಲಿ ಕೈಗಾರಿಕಾ ವಸಾಹತು ಪ್ರದೇಶ ನಿರ್ಮಾಣಗೊಂಡಿತು. ಆದರೆ, ಕೈಗಾರಿಕಾ ವಸಾಹತು ಹಾಳುಬಿದ್ದ ಕೊಂಪೆಯಾಗಿದ್ದು, ನಿರೀಕ್ಷಿತ ಉದ್ದೇಶ ಈಡೇರಿಲ್ಲ.
ಪಟ್ಟಣದ ಹೊರವಲಯದಲ್ಲಿ ಸುಮಾರು 15 ಎಕರೆ ಪ್ರದೇಶ ಗುರುತಿಸಿ, 25 ವರ್ಷಗಳು ಗತಿಸಿದರೂ ಕೈಗಾರಿಕೆಗಳು ಸ್ಥಾಪನೆಯಾಗದೇ ಇರುವುದರಿಂದ ನಿವೇಶನಗಳಲ್ಲಿ ಮುಳ್ಳಿನ ಗಿಡಗಳು ಬೆಳೆದು ನಿರುಪಯುಕ್ತವಾಗಿವೆ.
‘ಪುರಸಭೆ ವ್ಯಾಪ್ತಿಯಲ್ಲಿ ಹೊಸ ಪ್ಲಾಟುಗಳು, ಕೈಗಾರಿಕಾ ವಸಾಹತಿನೊಂದಿಗೆ ನಿರಂತರ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದ್ದ ಪಟ್ಟಣ ಮೂಲಸೌಕರ್ಯಗಳಿಂದ ವಂಚಿತಗೊಂಡ ಹಿನ್ನಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೈಗಾರಿಕಾ ಅಭಿವೃದ್ಧಿ ಕಾಣದೆ ಸೊರಗುತ್ತಿದೆ’ ಎನ್ನುತ್ತಾರೆ ಅಶೋಕ ಮುಧೋಳ.
ಪಟ್ಟಣ ಹೊರವಲಯದ ಶಿಗ್ಗಾವಿ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವದ್ಧಿ ನಿಗಮದ ವತಿಯಿಂದ ಇಂಡಸ್ಟ್ರಿಯಲ್ ಎಸ್ಟೇಟ್ (ಕೈಗಾರಿಕಾ ಪ್ರದೇಶ) ಅನ್ನು 1998ರಲ್ಲಿ ಸ್ಥಾಪಿಸಿ, 120 ನಿವೇಶನಗಳನ್ನು ನಿರ್ಮಾಣ ಮಾಡಿದ್ದು ಈಗಾಗಲೇ ಹಂಚಿಕೆ ಮಾಡಲಾಗಿದೆ.
ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಅನುದಾನ ನೀಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಡಿಸೆಂಬರ್ ಒಳಗಾಗಿ ಅಭಿವೃದ್ಧಿಪಡಿಸಲಾಗುವುದುವಿನಾಯಕ ಜೋಶಿ, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಇಲಾಖೆ, ಹಾವೇರಿ
ಸೃಷ್ಟಿಯಾಗದ ಉದ್ಯೋಗ: ‘ಈ ಕೈಗಾರಿಕಾ ಪ್ರದೇಶದಲ್ಲಿ ಇಲಾಖೆ ವತಿಯಿಂದ ಉದ್ಯಮ ಪ್ರಾರಂಭಿಸಿ, ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಇಲಾಖೆಗೆ ಮಾಹಿತಿ ನೀಡಿ ಕಡಿಮೆ ಬೆಲೆಯಲ್ಲಿ ಕೈಗೆ ಸಿಕ್ಕಷ್ಟು ನಿವೇಶನಗಳನ್ನು ಕೆಲವು ಉದ್ಯಮಿಗಳು ಪಡೆದುಕೊಂಡಿದ್ದರು. ಆದರೆ, ಕೆಲವೇ ನಿವೇಶನಗಳಲ್ಲಿ ಸಣ್ಣ ಪ್ರಮಾಣದ ಗೃಹ ಕೈಗಾರಿಕೆ, ಗುಡಿ ಕೈಗಾರಿಕೆಗಳು ತಲೆ ಎತ್ತಿದ್ದು ಬಿಟ್ಟರೆ, ದೊಡ್ಡ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಗೆ ನಿವೇಶನಗಳನ್ನು ಪಡೆದ ಮಾಲೀಕರು ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಕೈಗಾರಿಕೆ ಸ್ಥಾಪನೆ ಮಾಡುವ ಆಸಕ್ತ ಉದ್ಯಮಿಗಳಿಗೆ ನೀಡಲು ನಿವೇಶನಗಳೇ ಉಳಿದಿಲ್ಲ. ಹೀಗಾಗಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ಜೀಶಾನ್ ಖಾನ್ ಪಠಾಣ.
ನಿವೇಶನಗಳ ಕೊರತೆ
‘ಈ ಪ್ರದೇಶದಲ್ಲಿ ಲೋಜೆನ್ ಫಾರ್ಮಾ ಕಂಪನಿ ಸೇರಿದಂತೆ 10-12 ಸಣ್ಣ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿವೆ. ಲೋಜೆನ್ ಫಾರ್ಮಾ ಕಂಪನಿ ಪ್ರಾರಂಭವಾಗಿದ್ದರಿಂದ ಈ ಭಾಗದ ಬೆರಳೆಣಿಕೆಯ ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದೆ. ಕೈಗಾರಿಕಾ ವಸಾಹತು ಪ್ರದೇಶ ಇದ್ದರೂ ನಿವೇಶನಗಳ ಕೊರತೆಯಿಂದ 300ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವಂತಹ ಗಾರ್ಮೆಂಟ್ಸ್‌ಗೆ ನಿವೇಶನ ಇಲ್ಲದೇ ಇರುವುದರಿಂದ ಪಟ್ಟಣದ ಖಾಸಗಿ ಮಾಲೀಕತ್ವದ ಬಾಡಿಗೆ ಕಟ್ಟಡದಲ್ಲಿ 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯರಿಗೆ ಕೆಲಸ ನೀಡುವಂತಹ ಹತ್ತಾರು ದೊಡ್ಡ ಕಂಪನಿಗಳು ಹೆಚ್ಚಾಗಿ ಬರಬೇಕು’ ಎನ್ನುತ್ತಾರೆ ಪ್ರವೀಣ ಬಾಲೆಹೊಸೂರ.
ಸವಣೂರು ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಉನ್ನತ ಮಟ್ಟದ ಯೋಜನೆ ರೂಪಿಸುವುದು ಅವಶ್ಯ. ಕೈಗಾರಿಕಾ ವಸಾಹತು ಪ್ರದೇಶದ ಸ್ವಚ್ಛತೆಗೆ ಪುಂಡರ ಹಾವಳಿಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಬೇಕು.ಅರುಣ ತಳ್ಳಿಹಳ್ಳಿ, ಸ್ಥಳೀಯ ನಿವಾಸಿ, ಸವಣೂರು
ಕೈಗಾರಿಕಾ ಇಲಾಖೆ ಅಧಿಕಾರಿಗಳು ಕೈಗಾರಿಕೆಗಳ ಸ್ಥಾಪನೆಗೆ, ಸ್ಥಳೀಯ ಆಡಳಿತ ಸ್ವಚ್ಛತೆಗೆ, ಪೊಲೀಸ್ ಇಲಾಖೆ ಪುಡಾರಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಗುಳೇ ಹೊರಟ ಕಾರ್ಮಿಕರು
‘ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನಲ್ಲಿ ಕೃಷಿ ಅವಲಂಬಿತ ಕುಟುಂಬಗಳಿವೆ. ಆದರೆ ಮುಂಗಾರು ಮಳೆಗಾಲ ಪ್ರಾರಂಭವಾದ ದಿನದಿಂದ ಕೃಷಿ ಕಾರ್ಯಗಳು ಗರಿಗೆದರಿದ್ದವು. ಆದರೆ ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತಲೂ ಕಡಿಮೆಯಾಗಿರುವುದರಿಂದ ಬರಗಾಲದ ಛಾಯೆ ತಲೆದೋರಿದ್ದು ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ ಉಪ್ಪಾರ ಹಾಗೂ ರೈತ ಸಂಘದ ಅಧ್ಯಕ್ಷ ರಮೇಶ ಮರಡೂರ ಹೇಳಿದರು. ‘ಉನ್ನತ ಶಿಕ್ಷಣ ಪಡೆದುಕೊಂಡು ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಕೆಲಸ ಇಲ್ಲದಂತಾಗಿದೆ. ಸ್ಥಳೀಯ ಕೈಗಾರಿಕಾ ಪ್ರದೇಶದಲ್ಲಿಯೂ ಕೈಗಾರಿಕೆಗಳು ಸ್ಥಾಪನೆಯಾಗದೆ ಉದ್ಯೋಗವಿಲ್ಲದಂತಾಗಿದೆ. ರೈತರು ಗುಳೇ ಹೋಗುವುದು ಅನಿವಾರ್ಯವಾಗಿದೆ’ ಎಂದು ಸಮಸ್ಯೆ ಹೇಳಿಕೊಂಡರು.
‘ಬೆಳಗದ ಬೀದಿದೀಪ ಹಾಳಾದ ರಸ್ತೆ’
‘ಕೈಗಾರಿಕೆ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಇಲ್ಲ. ಕಾಟಾಚಾರಕ್ಕೆ ನಿರ್ಮಿಸಿರುವ ಚರಂಡಿ ರಸ್ತೆಗಳು ಗುಣಮಟ್ಟದಿಂದ ಕೂಡಿಲ್ಲ. ನಿರ್ವಹಣೆ ಇಲ್ಲದೆ ಹಾಳುಬಿದ್ದಿವೆ. ಕೈಗಾರಿಕೆ ಪ್ರದೇಶದಲ್ಲಿ ಬೀದಿದೀಪಗಳಂತೂ ಬೆಳಗುವುದೇ ಇಲ್ಲ. ಹೀಗಾಗಿ ಸಂಜೆ 7 ಗಂಟೆ ನಂತರ ಇಲ್ಲಿ ಕೇಳುವವರೇ ದಿಕ್ಕಿಲ್ಲ ಎನ್ನುವ ಪರಿಸ್ಥಿತಿ ಇದೆ’ ಮೈನುದ್ದೀನ್ ರಾಯಚೂರ. ‘ಪಟ್ಟಣದಿಂದ ಒಂದು ಕಿ.ಮೀ ದೂರದಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶಕ್ಕೆ ತೆರಳಲು ವಾಹನಗಳ ನಿಲುಗಡೆ ಇಲ್ಲದೆ ಇರುವುದರಿಂದ ಕೆಲವು ಕಾರ್ಮಿಕರು ಬಸ್ ನಿಲ್ದಾಣದಿಂದ ಸುಮಾರು 2 ಕಿ.ಮೀ ನಡೆದುಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ಕಾರ್ಮಿಕರು. ಸಾರಿಗೆ ಬೀದಿ ದೀಪ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಿಂದ ಕೆಲವರು ಉದ್ದಿಮೆಗಳನ್ನು ಕೈಗೊಳ್ಳಲು ಮುಂದಾಗಿಲ್ಲ. ಈ ಪ್ರದೇಶದಲ್ಲಿ ಸ್ವಚ್ಛತೆ ಮಾಯವಾಗಿದೆ. ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು ಹಂದಿಗಳ ವಾಸ ಸ್ಥಾನವಾಗಿದೆ. ಸಂಜೆಯಾಗುತ್ತಿದ್ದಂತೆ ಮದ್ಯವ್ಯಸನಿಗಳ ಅಡ್ಡಾ ಒಂದೆಡೆಯಾದರೆ ಇನ್ನೊಂದೆಡೆ ಅನೈತಿಕ ಚಟುವಟಿಕೆ ಪುಂಡ ಪೋಕರಿಗಳ ತಾಣವಾಗಿ ನಿರ್ಮಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.