ADVERTISEMENT

ಅಡಿಕೆ ಕೃಷಿಯತ್ತ ಅನ್ನದಾತರ ಚಿತ್ತ

ವರ್ಷದಿಂದ ವರ್ಷಕ್ಕೆ ಪ್ರದೇಶ ಹೆಚ್ಚಳ; ಹಾನಗಲ್‌ ತಾಲ್ಲೂಕಿನಲ್ಲಿ ಅತಿಹೆಚ್ಚು

ಸಂತೋಷ ಜಿಗಳಿಕೊಪ್ಪ
Published 30 ಜೂನ್ 2024, 6:03 IST
Last Updated 30 ಜೂನ್ 2024, 6:03 IST
ಹೊಲದಲ್ಲಿ ನಾಟಿ ಮಾಡಲು ರೈತರು ತಂದಿಟ್ಟುಕೊಂಡಿರುವ ಅಡಿಕೆ ಸಸಿಗಳು
ಹೊಲದಲ್ಲಿ ನಾಟಿ ಮಾಡಲು ರೈತರು ತಂದಿಟ್ಟುಕೊಂಡಿರುವ ಅಡಿಕೆ ಸಸಿಗಳು   

ಹಾವೇರಿ: ಅರೆ ಮಲೆನಾಡು ಹಾಗೂ ಮೈದಾನ ಪ್ರದೇಶ ಹೊಂದಿರುವ ಹಾವೇರಿ ಜಿಲ್ಲೆಯ ಹಲವು ರೈತರು ಇತ್ತೀಚಿನ ದಿನಗಳಲ್ಲಿ ಅಡಿಕೆ ಕೃಷಿಯತ್ತ ಹೆಚ್ಚು ಒಲುವು ತೋರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅಡಿಕೆ ಬೆಳೆ ಪ್ರದೇಶ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಹಾನಗಲ್ ತಾಲ್ಲೂಕಿನ ಅತೀ ಹೆಚ್ಚು ರೈತರು ಅಡಿಕೆ ಕೃಷಿಯತ್ತ ಚಿತ್ತ ಹರಿಸಿದ್ದಾರೆ.

ಮಲೆನಾಡಿನ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಹಾವೇರಿ ಜಿಲ್ಲೆಯ ತಾಲ್ಲೂಕುಗಳಲ್ಲಿ ಅಡಿಕೆ ಪ್ರಭಾವ ಹೆಚ್ಚಿದೆ. ದಿನ ಕಳೆದಂತೆ, ಅಕ್ಕ–ಪಕ್ಕದ ತಾಲ್ಲೂಕಿಗೂ ಅಡಿಕೆ ಬೆಳೆ ವ್ಯಾಪಿಸುತ್ತಿದೆ. ಹಾನಗಲ್ ಹಾಗೂ ಹಿರೇಕೆರೂರು ತಾಲ್ಲೂಕಿನಲ್ಲಿ ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚಿದ್ದು, ಅಡಿಕೆ ಕೃಷಿಯಲ್ಲಿ ಪರಿಣಿತಿಯನ್ನೂ ಹೊಂದಿದ್ದಾರೆ.

ಭತ್ತ, ಗೋವಿನ ಜೋಳದ ನಾಡಾಗಿದ್ದ ಪ್ರದೇಶಗಳು ಕ್ರಮೇಣ ಅಡಿಕೆ ತೋಟಗಳಾಗಿ ಮಾರ್ಪಡುತ್ತಿವೆ. ಮಾರುಕಟ್ಟೆಯಲ್ಲಿ ಅಡಿಕೆ ಬೆಳೆಗೆ ಉತ್ತಮ ಬೆಲೆ ಇರುವುದರಿಂದ ಬಹುತೇಕ ರೈತರು, ಇತರೆ ಬೆಳೆಗಳಿಗಿಂತ ಅಡಿಕೆ ಕೃಷಿಯತ್ತ ವಾಲುತ್ತಿದ್ದಾರೆ. ಜೊತಗೆ, ಸರ್ಕಾರದಿಂದಲೂ ಅಡಿಕೆ ಕೃಷಿ ಹಾಗೂ ನೀರಾವರಿ ಅಳವಡಿಕೆಗೆ ಪ್ರೋತ್ಸಾಹ ಇರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ.

ADVERTISEMENT

ಜಿಲ್ಲೆಯಲ್ಲಿ 2019–20ನೇ ಸಾಲಿನಲ್ಲಿ 7,115.4 ಹೆಕ್ಟೇರ್ ಅಡಿಕೆ ಪ್ರದೇಶವಿತ್ತು. 2020–21ನೇ ಸಾಲಿನಲ್ಲಿ 8,759.6 ಹೆಕ್ಟೇರ್‌ ಹಾಗೂ 2021–22ನೇ ಸಾಲಿನಲ್ಲಿ 12,544.22 ಪ್ರದೇಶದಲ್ಲಿ ಅಡಿಕೆ ಸಸಿ ಹಚ್ಚಲಾಗಿತ್ತು. 2022–23ನೇ ಸಾಲಿನಲ್ಲಿ 16,644.72 ಅಡಿಕೆ ಸಸಿ ನಾಟಿ ಮಾಡಲಾಗಿದೆ.

ಸ್ಥಳೀಯ ಪರಿಣಿತರು ಸಿದ್ಧಪಡಿಸುವ ಅಡಿಕೆ ಸಸಿಗಳನ್ನು ಖರೀದಿಸಿ ರೈತರು ತಮ್ಮ ಹೊಲಗಳಲ್ಲಿ ನಾಟಿ ಮಾಡುತ್ತಿದ್ದಾರೆ. ಭರಮಸಾಗರ, ಭೀಮಸಮುದ್ರ ಹಗೂ ಚನ್ನಗಿರಿ ಪ್ರದೇಶಗಳಿಂದಲೂ ಅಡಿಕೆ ಸಸಿಗಳನ್ನು ತಂದು ನಾಟಿ ಮಾಡಲಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಮಣ್ಣು ಹಾಕಿ ಸಸಿ ಹಚ್ಚಲಾಗುತ್ತಿದೆ.

ಅಡಿಕೆ ಗಿಡಗಳ ನಡುವೆಯೇ ಬಾಳೆ, ಪಪ್ಪಾಯಿ, ನುಗ್ಗೆ ಹಾಗೂ ಇತರೆ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಮಿಶ್ರ ಬೇಸಾಯದಿಂದಲೂ ಆದಾಯ ಗಳಿಸುತ್ತಿದ್ದಾರೆ.

ಉತ್ತರ ಕರ್ನಾಟಕದ ಹಲವರು ಅಡಿಕೆ–ಎಲೆ ಪ್ರಿಯರು. ಜೊತೆಗೆ, ಅಡಿಕೆ ಚೀಟು ಹಾಗೂ ಗುಟ್ಕಾ ತಿನ್ನುವವರೂ ಇದ್ದಾರೆ. ಇದಕ್ಕೆಲ್ಲ ಅಡಿಕೆ ಅಗತ್ಯ. ಜೊತೆಗೆ, ಇತ್ತೀಚಿನ ದಿನಗಳಲ್ಲಿ ಬಣ್ಣ ತಯಾರಿಕೆ ಹಾಗೂ ಇತರೆ ಕೆಲಸಕ್ಕೂ ಅಡಿಕೆ ಬಳಕೆಯಾಗುತ್ತಿದೆ. ಹೀಗಾಗಿ, ಅಡಿಕೆಗೆ ಸದಾ ಕಾಲ ಬೇಡಿಕೆ ಇರುತ್ತದೆ ಎಂದು ರೈತರು ಹೇಳುತ್ತಿದ್ದಾರೆ.

ನದಿ ಪಾತ್ರ, ನೀರಾವರಿ ಆಶ್ರಯ: ‘ಅಡಿಕೆ ಕೃಷಿಗೆ ನೀರು ಅತ್ಯಗತ್ಯ. ನೀರು ಬಸಿದು ಹೋಗುವ ಫಲವತ್ತಾದ ಮಣ್ಣು ಹಾಗೂ ಹವಾಗುಣ ಇರುವ ಪ‍್ರದೇಶಗಳಲ್ಲಿ ಅಡಿಕೆ ಬೆಳೆಯುವುದು ಸೂಕ್ತ. ಬೇರೆ ಬೆಳೆಗೆ ಹೆಚ್ಚಿನ ಕಾರ್ಮಿಕರು ಹಾಗೂ ಕೆಲಸದ ಅಗತ್ಯವಿರುತ್ತದೆ. ಆದರೆ, ಅಡಿಕೆ ಆರಂಭದಲ್ಲಿ ಮಾತ್ರ ಕಷ್ಟ. ಫಸಲು ಬರಲಾರಂಭಿಸಿದರೆ, ನಿರ್ವಹಣೆ ಸುಲಭ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಜಿಲ್ಲೆಯ ವರದಾ, ಧರ್ಮ, ತುಂಗಭದ್ರಾ ಹಾಗೂ ಕುಮದ್ವತಿ ನದಿ ಪಾತ್ರದಲ್ಲಿ ಹೆಚ್ಚಾಗಿ ಅಡಿಕೆ ಕೃಷಿ ಮಾಡಲಾಗುತ್ತಿದೆ. ಜೊತೆಗೆ, ಕೊಳವೆ ಬಾವಿಯ ನೀರಾವರಿ ಮೂಲಕವೂ ಅಡಿಕೆ ಕೃಷಿ ಕೈಗೊಳ್ಳಲಾಗುತ್ತಿದೆ. ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ರೈತರು ಅಡಿಕೆ ಬೆಳೆಯಲಾರಂಭಿಸಿದ್ದಾರೆ’ ಎಂದು ತಿಳಿಸಿದರು.

‘ಕೆರೆಗಳ ಅಕ್ಕ–ಪಕ್ಕದ ಹೊಲಗಳಲ್ಲಿಯೇ ಅಡಿಕೆ ಬೆಳೆಯಲಾಗುತ್ತಿದೆ. ಜೊತೆಗೆ, ಕೆರೆಯಿಂದಲೇ ಪೈಪ್‌ ಮೂಲಕ ಹೊಲಗಳಿಗೆ ನೀರಿನ ಸರಬರಾಜು ಮಾಡಲಾಗುತ್ತಿದೆ’ ಎಂದು ಹೇಳಿದರು.

ರೋಗಗಳ ಹತೋಟಿಗೆ ಕ್ರಮ: ‘ನೀರಿನ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಅಡಿಕೆ ಬೆಳೆಯಲ್ಲಿ 9 ಪ್ರಮುಖ ರೋಗಗಳು ಕಾಣಿಸಿಕೊಳ್ಳುತ್ತಿವೆ. ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಗಳು, ರೈತರ ತೋಟಗಳಿಗೆ ಭೇಟಿ ನೀಡಿ ರೋಗಗಳನ್ನು ಪತ್ತೆ ಮಾಡಿ ಪರಿಹಾರ ಸೂಚಿಸುತ್ತಿದ್ದಾರೆ. ರೋಗ ಹಾಗೂ ಕೀಟಗಳ ಹತೋಟಿಗೂ ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂದು ಅಧಿಕಾರಿ ವಿವರಿಸಿದರು.

‘ಅಡಿಕೆ ಬೆಳೆ ನಿರ್ವಹಣೆಯೂ ಒಂದು ಕಲೆ ಇದ್ದಂತೆ. ಕೆಲವರು ಉತ್ತಮ ರೀತಿಯಲ್ಲಿ ಅಡಿಕೆ ಸಸಿಗಳನ್ನು ಬೆಳೆಸುತ್ತಾರೆ. ಬಹುತೇಕರು ಆರಂಭದಲ್ಲಿ ಸೋಲುತ್ತಾರೆ. ಉತ್ತಮ ನಾಟಿ ಪದ್ಧತಿ, ಔಷಧ ಉಪಚಾರ, ಕಾಲಕ್ಕೆ ತಕ್ಕಂತೆ ಸಸಿಗಳ ಕಾಳಜಿ ಮಾಡಿದರೆ ಉತ್ತಮ ಬೆಳೆ ಸಾಧ್ಯ’ ಎಂದು ತಿಳಿಸಿದರು.

ಹಾವೇರಿ ಕೆರಿಮತ್ತೀಹಳ್ಳಿ ಬಳಿಯ ಹೊಲವೊಂದರಲ್ಲಿ ಅಡಿಕೆ ಸಸಿ ನಾಟಿ ಮಾಡಲಾಗುತ್ತಿದ್ದು ನೀರಾವರಿ ಪೈಪ್ ಅಳವಡಿಸಲು ಜೆಸಿಬಿ ಯಂತ್ರದಿಂದ ಕಾಲುವೆ ತೋಡಲಾಯಿತು – ಪ್ರಜಾವಾಣಿ ಚಿತ್ರ

ಎಕರೆಯಲ್ಲಿ ಅಡಿಕೆ ಬೆಳೆದಿದ್ದೆ. ಫಸಲು ಆರಂಭವಾದ ಎರಡೇ ವರ್ಷದಲ್ಲಿ ಹಾಕಿದ ಬಂಡವಾಳಕ್ಕಿಂತ ಐದು ಪಟ್ಟು ಲಾಭ ಬಂದಿದೆ. ಹೀಗಾಗಿ ಹೊಸದಾಗಿ 2 ಎಕರೆಯಲ್ಲಿ ಮತ್ತೆ ಅಡಿಕೆ ಸಸಿ ಹಚ್ಚಿದ್ದೇನೆ

-ರಾಮಪ್ಪ ಹಿರೇಕೆರೂರು ರೈತ

‘ಯೋಜನೆಗಳ ಉಪಯೋಗ’ ‘ಜಿಲ್ಲೆಯ ರಾಣೆಬೆನ್ನೂರು ಹಾಗೂ ಹಾವೇರಿ ತಾಲ್ಲೂಕುಗಳನ್ನು ಹೊರತುಪಡಿಸಿ ಇತರೆ ತಾಲ್ಲೂಕಿನಲ್ಲಿ ಅಡಿಕೆ ಬೆಳೆಯಲು ರಾಷ್ಟ್ರೀಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಹಲವು ಸಲವತ್ತುಗಳನ್ನು ಒದಗಿಸಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಹೇಳಿದರು. ‘ಅಡಿಕೆ ಸಸಿಗಳಿಗೆ ನೀರುಣಿಸಲು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಯೋಜನೆಗಳ ಲಾಭ ಪಡೆಯುತ್ತಿರುವ ರೈತರು ಅಡಿಕೆ ಕೃಷಿಯತ್ತ ಹೆಚ್ಚು ಒಲುವು ತೋರಿಸುತ್ತಿದ್ದಾರೆ’ ಎಂದು ತಿಳಿಸಿದರು.

ಬೆಲೆ ಕುಸಿತದ ಆತಂಕ’ ‘ಭತ್ತ ಹಾಗೂ ಇತರೆ ಆಹಾರ ಧಾನ್ಯಗಳನ್ನು ಬೆಳೆಯುವ ಪ್ರದೇಶದಲ್ಲಿ ಅಡಿಕೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಹಾರ ಬೆಳೆಗಳ ಉತ್ಪಾದನೆ ಕುಂಠಿತವಾಗಬಹುದು. ಉತ್ಪಾದನೆ ಹೆಚ್ಚಾದರೆ ಅಡಿಕೆ ಬೆಲೆಯಲ್ಲೂ ಕುಸಿತ ಕಾಣಬಹುದು. ಈ ಬಗ್ಗೆ ರೈತರು ಹೆಚ್ಚು ತಿಳಿವಳಿಕೆ ಹೊಂದಬೇಕು’ ಎಂದು ಕೃಷಿ ತಜ್ಞರೊಬ್ಬರು ಹೇಳಿದರು.

ವರ್ಷವಾರು ಅಡಿಕೆ ಪ್ರದೇಶ ಹೆಚ್ಚಳದ ಅಂಕಿ–ಅಂಶ ವರ್ಷ;ಪ್ರದೇಶ (ಹೆಕ್ಟೇರ್‌ಗಳಲ್ಲಿ) 2019–20; 7115.4 2002–21; 8759.6 2021–22; 12544.22 2022–23; 16644.72

ತಾಲ್ಲೂಕುವಾರು ಅಡಿಕೆ ಪ್ರದೇಶ ಹೆಚ್ಚಳದ ವಿವರ (ಹೆಕ್ಟೇರ್‌ಗಳಲ್ಲಿ) ತಾಲ್ಲೂಕು; 2019–20; 2020–21; 2021–22; 2022–23 ಬ್ಯಾಡಗಿ; 377.17; 403.35; 381.22; 616.70 ಹಾನಗಲ್; 3571.73; 4532.61; 6425.92; 7892.75 ಹಾವೇರಿ; 152.57; 179.57; 323.97; 473.06 ಹಿರೇಕೆರೂರು; 749.59; 925.8; 1492.99; 2462.27 ರಾಣೆಬೆನ್ನೂರು; 973.6; 1204.78; 1701.49; 2565.63 ರಟ್ಟಿಹಳ್ಳಿ; 979.44; 1196.14; 1786.99; 2048.68 ಶಿಗ್ಗಾವಿ; 301.66; 309.94; 401.36; 550.63

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.