ಹುಬ್ಬಳ್ಳಿ: 'ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಇಡೀ ಸರ್ಕಾರವೇ ಅಲ್ಲಿ ಬೀಡು ಬಿಟ್ಟಿದೆ. ಒಂದೊಂದು ಪಂಚಾಯ್ತಿ ಜವಾಬ್ದಾರಿಯನ್ನು ಒಬ್ಬೊಬ್ಬ ಸಚಿವ, ಶಾಸಕರಿಗೆ ವಹಿಸಲಾಗಿದೆ' ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪಂಚಾಯಿತಿಗಲ್ಲ ಮನೆಗೆ ಒಬ್ಬ ಸಚಿವ ಬಂದು ಕೂತರೂ ಭರತ್ ಬೊಮ್ಮಯಿ ಗೆಲುವು ತಡೆಯಲು ಸಾಧ್ಯವಿಲ್ಲ. ಅವರು ಎಷ್ಟೇ ಹಣದ ಹೊಳೆ ಹರಿಸಿದರೂ, ಮತದಾರರು ಬಿಜೆಪಿಗೇ ಮತ ಹಾಕುತ್ತಾರೆ. ನಾವು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ' ಎಂದರು.
'ಯಡಿಯೂರಪ್ಪ ಮತ್ತು ಶ್ರೀರಾಮುಲು ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣ ಕುರಿತು ಮಾತನಾಡಿದ ಅವರು, 'ಬಹಳಷ್ಟು ದಿನದಿಂದ ಈ ಬೆದರಿಕೆ ಹಾಕುತ್ತ ಇದ್ದರು. ಸಂತೆಯಲ್ಲಿ ಹಾವು ತೋರಿಸುತ್ತೇನೆ ತೋರಿಸುತ್ತೇನೆ ಎಂದು ಕೊನೆಗೂ ತೋರಿಸದೆ ಹಾಗೆಯೇ ಇದ್ದುಬಿಡುವ ಮನಸ್ಥಿತಿ ಕಾಂಗ್ರೆಸ್‌ನದ್ದು. ಹಗರಣ ಇದ್ದರೆ ಮಾತ್ರ ತೋರಿಸಲು ಸಾಧ್ಯ. ಅವರ ಕೈಯ್ಯನ್ನು ಯಾರು ಕಟ್ಟಿ ಹಾಕಿದ್ದಾರೆ? ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ, ಯಾಕೆ ಸುಮ್ಮನೆ ಕುಳಿತಿದ್ದರು' ಎಂದು ಪ್ರಶ್ನಿಸಿದರು.
'ಕಾಂಗ್ರೆಸ್ ಮುಖಂಡರದ್ದೇ ಸಾಕಷ್ಟು ಹಗರಣಗಳು ಇವೆ.
ಅವರ ಕಾಟಕ್ಕೆ ಅನೇಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆಲ್ಲ ಬೆದರಿಕೆ ಹಾಕಿದರೆ ಬಿಜೆಪಿ ನಾಯಕರು ಸುಮ್ಮನಾಗುತ್ತಾರೆ ಎಂದು ಭಾವಿಸಿದ್ದಾರೆ. ಕೋವಿಡ್ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಎಲ್ಲರ ರಕ್ಷಣೆ ಮಾಡಿದ್ದಾರೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.