ADVERTISEMENT

ಈರುಳ್ಳಿ: ಕುಂಠಿತ ಇಳುವರಿ; ಉತ್ತಮ ದರ

ಸತತ ಮಳೆಯಿಂದ ಹಾನಿಯಾದ ಬೆಳೆ; ಹೊರರಾಜ್ಯದಲ್ಲಿ ಬೇಡಿಕೆ ಕುಸಿತ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 6:25 IST
Last Updated 4 ಅಕ್ಟೋಬರ್ 2024, 6:25 IST
ರಾಣೆಬೆನ್ನೂರಿನ ಎಪಿಎಂಸಿ ಉಪಪ್ರಾಂಗಣದಲ್ಲಿ ರೈತರು ಈರುಳ್ಳಿ ಬೆಳೆಯನ್ನು ಮಾರಾಟಕ್ಕೆ ತಂದಿದ್ದರು
ರಾಣೆಬೆನ್ನೂರಿನ ಎಪಿಎಂಸಿ ಉಪಪ್ರಾಂಗಣದಲ್ಲಿ ರೈತರು ಈರುಳ್ಳಿ ಬೆಳೆಯನ್ನು ಮಾರಾಟಕ್ಕೆ ತಂದಿದ್ದರು   

ಬೆನ್ನೂರು: ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಈರುಳ್ಳಿ ಬೆಳೆ ಕಟಾವಿಗೆ ಬಂದಿದೆ. ಬಿತ್ತನೆ ವೇಳೆ ಉತ್ತಮ ಮಳೆಯಾಗಿದ್ದು, ಸಸಿಯಾಗುವ ಹಂತದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಈ ಬಾರಿ ಈರುಳ್ಳಿ ಇಳುವರಿ ಶೇ 50 ರಷ್ಟು ಕುಸಿತ ಕಂಡಿದೆ.

ಹೊರ ಜಿಲ್ಲೆ ಹಾಗೂ ತಾಲ್ಲೂಕಿನ ರೈತರು ಬೆಳೆದ ಈರುಳ್ಳಿ ಬೆಳೆಯನ್ನು ಮಾರಾಟ ಮಾಡಲು ನಗರದ ಎಪಿಎಂಸಿ ಉಪ ಪ್ರಾಂಗಣಕ್ಕೆ ತರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ಹೆಚ್ಚಾಗಿದೆ. ವಾರದ ಆರು ದಿನ ಈರುಳ್ಳಿ ವ್ಯಾಪಾರ ವಹಿವಾಟು ನಡೆಯುತ್ತದೆ. ಮಾರುಕಟ್ಟೆಯಲ್ಲಿ ಬುಧವಾರ 2,000 ಚೀಲ ಈರುಳ್ಳಿ ಆವಕವಾಗಿದ್ದು, ಆವಕದಲ್ಲಿ ಹೆಚ್ಚಳವಾಗಿದೆ.

ಸೆಪ್ಟಂಬರ್‌ ತಿಂಗಳಲ್ಲಿ ಕ್ವಿಂಟಲ್‌ಗೆ ₹1,550 ರಿಂದ ₹3,000 ವರೆಗೆ ಇದ್ದ ಈರುಳ್ಳಿ ದರ ಈಗ ₹3,500 ತಲುಪಿದೆ. ಸಧ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಫಸ್ಟ್‌ ಕ್ವಾಲಿಟಿ ದರ ಕ್ವಿಂಟಲ್‌ಗೆ ₹3,200 ರಿಂದ ₹3,500 ವರೆಗೆ, ಸೆಕೆಂಡ್‌ ಕ್ವಾಲಿಟಿ ಕ್ವಿಂಟಲ್‌ ₹1,500 ರಿಂದ ₹2,500 ವರೆಗೆ ಹಾಗೂ ಮೂರನೇ ಕ್ವಾಲಿಟಿ ಕ್ವಿಂಟಲ್‌ಗೆ ₹500 ರಿಂದ ₹1,500 ವರೆಗೆ ದರವಿದೆ.

ADVERTISEMENT

ಎಕರೆಗೆ 100 ರಿಂದ 120 ಚೀಲ ಈರುಳ್ಳಿ ಇಳುವರಿ ಬರುವ ನಿರೀಕ್ಷೆಯಿತ್ತು ಆದರೆ ಈ ಬಾರಿ 50 ರಿಂದ 70 ಚೀಲ ಬಂದಿದೆ. ಇದು ಆದಾಯಕ್ಕೆ ಹೊಡೆತ ನೀಡಿದೆ ಎಂದು ರೈತರು ತಿಳಿಸಿದರು.

ಬೆಳೆ ತೆಗೆದು ಉತ್ತಮ ಆದಾಯ ಪಡೆಯುವ ನೀರಿಕ್ಷೆಯಲ್ಲಿದ್ದ ರೈತರಿಗೆ ಕಡಿಮೆ ಇಳುವರಿ ನಿರಾಶೆ ಮೂಡಿಸಿದೆ. ಹೊರ ರಾಜ್ಯದಲ್ಲಿ ನಮ್ಮಲ್ಲಿಯ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದ್ದರಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ.

‘ಈರುಳ್ಳಿ ಬೆಳೆ ತೆಗೆದು ಗೂಡು ಹಾಕಿದಾಗ, ಸುರಿದ ಭಾರಿ ಮಳೆಯಿಂದ ಗೂಡುಗಳು ಮಳೆಗೆ ಸಿಕ್ಕು ಬೆಳೆ ಹಾನಿಯಾಗಿದೆ. ತಂಪಿನ ವಾತಾವರಣ ಇರುವುದರಿಂದ ಬೆಳೆ ಕೊಳೆತು, ಇಳುವರಿ ಕಡಿಮೆಯಾಗಿದೆ. ಮಹಾರಾಷ್ಟ್ರದ ನಾಸಿಕ್‌ ದಪ್ಪ ಈರುಳ್ಳಿಗೆ ದರ ಕ್ವಿಂಟಲ್‌ಗೆ ₹4,000 ರಿಂದ ₹4,500 ವರೆಗಿದೆ’ ಎಂದು ವರ್ತಕ ನಾಗರಾಜ ಬದಾಮಿ ತಿಳಿಸಿದರು.

‘ಎಕರೆಗೆ ₹30 ರಿಂದ ₹40 ಸಾವಿರ ಖರ್ಚಾಗುತ್ತದೆ. ನಿರೀಕ್ಷೆಗಿಂತ ಕಡಿಮೆ ಇಳುವರಿ ಬಂದಿದೆ. ನಿರಂತರ ಸುರಿದ ಮಳೆಯಿಂದಾಗಿ ಎಲ್ಲವೂ ಏರುಪೇರಾಗಿದೆ. ಸದ್ಯಕ್ಕೆ ದರ ಹೆಚ್ಚಾಗಿದ್ದರಿಂದ ಹಾನಿ ಕಡಿಮೆಯಾಗಿದೆ’ ಎಂದು ತಾಲ್ಲೂಕಿನ ಕುದರಿಹಾಳ ಗ್ರಾಮದ ಪ್ರಕಾಶ ಅಂಗಡಿ ಹೇಳಿದರು.

ಹಿರೆಕೆರೂರು, ರಟ್ಟೀಹಳ್ಳಿ, ಬ್ಯಾಡಗಿ, ಹರಿಹರ, ಹಾವೇರಿ, ವಿಜಯನಗರ ಜಿಲ್ಲೆಯ ಕೆಲ ತಾಲ್ಲೂಕುಗಳ ರೈತರು ಇಲ್ಲಿನ ಎಪಿಎಂಸಿಗೆ ಈರುಳ್ಳಿ ಮಾರಾಟ ಮಾಡಲು ಬರುತ್ತಾರೆ. ಇಳುವರಿ ಕೈಕೊಟ್ಟಿದ್ದು ರೈತರಿಗೆ ನಿರಾಸೆ ತಂದಿದೆ.

ಸಣ್ಮುಖಪ್ಪ ಕಂಬಳಿ ಈರುಳ್ಳಿ ಬೆಳೆದ ರೈತ

ರೋಗದಿಂದ ನೆಲಕ್ಕಚ್ಚಿದ ಈರುಳ್ಳಿ

‘ನಾನು 4 ಎಕರೆ ಈರುಳ್ಳಿ ಬಿತ್ತನೆ ಮಾಡಿದ್ದೆ ಬೀಜ ಗೊಬ್ಬರ ಕಳೆ ತೆಗೆಸಲು ಸೇರಿದಂತೆ ₹1.5 ಲಕ್ಷ ಖರ್ಚು ಮಾಡಿದ್ದೇನೆ. ತಂಪು ವಾತಾವರಣ ಮತ್ತು ನಿರಂತರ ಮಳೆಯಿಂದಾಗಿ ಮಜ್ಜಿಗೆ ರೋಗ ಕೊಳೆರೋಗ ಶೀಲಿಂಧ್ರ ರೋಗ ಭಾದಿಸಿದ್ದರಿಂದ ಮತ್ತಷ್ಟು ಸಮಸ್ಯೆ ಎದುರಾಗಿ ಈರುಳ್ಳಿ ಬೆಳೆ ನೆಲಕ್ಕಚ್ಚಿದೆ. ಎಕರೆಗೆ 50 ರಿಂದ 65 ಚೀಲ ಇಳುವರಿ ಬಂದಿದೆ. ಇಂದಿನ ಮಾರುಕಟ್ಟೆಯಲ್ಲಿ ದರ ತುಸು ಉತ್ತಮವಾಗಿದ್ದರಿಂದ ₹4.5 ಲಕ್ಷ ಆದಾಯ ಬಂದಿದೆ’ ಎಂದು ರೈತ ಷಣ್ಮುಖಪ್ಪ ಕಂಬಳಿ ತಿಳಿಸಿದರು.

450 ಹೆಕ್ಟೇರ್‌ ಈರುಳ್ಳಿ ಬಿತ್ತನೆ ‘

ತಾಲ್ಲೂಕಿನಲ್ಲಿ ಐದಾರು ವರ್ಷಗಳ ಹಿಂದೆ 5000ಕ್ಕೂ ಹೆಚ್ಚು ಹೆಕ್ಟೇರ್‌ ಈರುಳ್ಳಿ ಬಿತ್ತನೆಯಾಗುತ್ತಿತ್ತು. ಈಚೆಗೆ 600 ರಿಂದ 750 ಹೆಕ್ಟೇರ್‌ ಬಿತ್ತನೆಯಾಗುತ್ತಿತ್ತು. ಈ ವರ್ಷ 450 ಹೆಕ್ಟೇರ್‌ ಈರುಳ್ಳಿ ಬಿತ್ತನೆಯಾಗಿದೆ’ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನೂರಅಹ್ಮದ್‌ ಹಲಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಿರ್ಹವಣೆ ಖರ್ಚು ಹೆಚ್ಚು ರೋಗ ಕೀಟ ಭಾದೆ ಗೂಡು ಹಾಕಿದಾಗ ಮಳೆ ಹೆಚ್ಚಾಗಿ ಕೊಳೆಯುತ್ತದೆ. ಹಾಗಾಗಿ ರೈತರು ಈರುಳ್ಳಿ ಬೆಳೆಯುವುದು ಕಡಿಮೆ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.