ಹಾವೇರಿ: ಜಿಲ್ಲೆಯಲ್ಲಿರುವ ಸರ್ಕಾರದ ಪದವಿ ಪೂರ್ವ (ಪಿಯು) ಕಾಲೇಜುಗಳು, ಕಾಯಂ ಉಪನ್ಯಾಸಕರ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿವೆ.
'ಶಿಕ್ಷಕವೇ ಶಕ್ತಿ' ಎಂದು ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕಾರಿಗಳು, ಪಿಯು ಕಾಲೇಜುಗಳ ಅಭಿವೃದ್ಧಿಗೆ ಚಿತ್ತ ಹರಿಸುತ್ತಿಲ್ಲ. ಇದರಿಂದಾಗಿ ಸರ್ಕಾರದ ಕಾಲೇಜುಗಳು ಎಂದರೆ, ಮಕ್ಕಳನ್ನು ಸೇರಿಸಲು ಪೋಷಕರು ಹಿಂದೆ-ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಒಟ್ಟು 33 ಸರ್ಕಾರಿ ಪಿಯು ಕಾಲೇಜುಗಳಿವೆ. ಇದರಲ್ಲಿ 15 ಕಾಲೇಜುಗಳಲ್ಲಿ ವಿಜ್ಞಾನ ಕಲಿಕೆಗೆ ಅವಕಾಶವಿದೆ. ಉಳಿದ ಕಾಲೇಜುಗಳಲ್ಲಿ ವಾಣಿಜ್ಯ ಹಾಗೂ ಕಲಾ ಮಾಧ್ಯಮ ವಿಭಾಗಗಳಿವೆ.
ಜಿಲ್ಲೆಯಲ್ಲಿ ಬಾಲಕಿಯರಿಗಾಗಿ ಸರ್ಕಾರದ ಎರಡು ಪ್ರತ್ಯೇಕ ಪಿಯು ಕಾಲೇಜುಗಳಿವೆ. ಹಾವೇರಿಯ ಇಜಾರಿಲಕುಮಾಪುರದಲ್ಲಿ (ದೇವಗಿರಿ ರಸ್ತೆ) ಒಂದು ಬಾಲಕಿಯರ ಕಾಲೇಜು ಹಾಗೂ ಸವಣೂರಿನಲ್ಲಿ ಮತ್ತೊಂದು ಬಾಲಕಿಯರ ಕಾಲೇಜು ಇದೆ.
ಸರ್ಕಾರದ ಪಿಯು ಕಾಲೇಜುಗಳಿಗೆ ಭೇಟಿ ನೀಡಿದರೆ, ಅಲ್ಲಿಯ ಅವ್ಯವಸ್ಥೆ ಹಾಗೂ ಶೈಕ್ಷಣಿಕ ಗುಣಮಟ್ಟ ಎಷ್ಟರ ಮಟ್ಟಿಗೆ ಕುಸಿಯುತ್ತಿದೆ ಎಂಬುದು ಕಾಣುತ್ತದೆ.
142 ಅತಿಥಿ ಉಪನ್ಯಾಸಕರು: ಜಿಲ್ಲೆಯ ಸರ್ಕಾರದ ಒಟ್ಟು 33 ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಹೆಚ್ಚಿದೆ. ಕಾಯಂ ಉಪನ್ಯಾಸಕರು ಇಲ್ಲದಿದ್ದರಿಂದ, ಪಠ್ಯಕ್ರಮ ಪೂರ್ಣಗೊಳಿಸಲು ಹಾಗೂ ಇತರೆ ಶೈಕ್ಷಣಿಕ ಕೆಲಸಗಳಿಗೆ ಅಡ್ಡಿ ಉಂಟಾಗುತ್ತಿದೆ.
33 ಕಾಲೇಜುಗಳಲ್ಲಿ ಸದ್ಯ 142 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಇವರಿಂದಲೇ ಇದೀಗ ಕಾಲೇಜುಗಳು ನಡೆಯುತ್ತಿವೆ. ಕಾಯಂ ಉಪನ್ಯಾಸಕರು ಇಲ್ಲದಿದ್ದರಿಂದ, ಅತಿಥಿ ಉಪನ್ಯಾಸಕರೇ ಸರ್ಕಾರಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿದ್ದಾರೆ.
'ಕಾಯಂ ಉಪನ್ಯಾಸಕರ ನೇಮಕ ಸರ್ಕಾರಕ್ಕೆ ಬಿಟ್ಟ ವಿಚಾರ' ಎಂದು ಹೇಳಿ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೈ ತೊಳೆದುಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರಿ ಪಿಯ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.
ಕಾಯಂ ಉಪನ್ಯಾಸಕ ಹುದ್ದೆಗಳು ಖಾಲಿ ಇರುವ ಬಗ್ಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಉಮೇಶಪ್ಪ, 'ಜಿಲ್ಲೆಯ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನಿಯೋಜಿಸಿಕೊಂಡು, ತರಗತಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಉಪನ್ಯಾಸದ ಬಗ್ಗೆ ಯಾವುದೇ ಸಮಸ್ಯೆಗಳಿಲ್ಲ' ಎಂದರು.
'ಒಬ್ಬ ಉಪನ್ಯಾಸಕ ವಾರಕ್ಕೆ 20 ತರಗತಿ ತೆಗೆದುಕೊಳ್ಳಬೇಕು. ಆದರೆ, ಪೂರ್ಣ ಪ್ರಮಾಣದಲ್ಲಿ ತರಗತಿಗಳು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಎಲ್ಲೆಲ್ಲಿ ಕಾಯಂ ಉಪನ್ಯಾಸಕರು ಇಲ್ಲವೋ ಅಲ್ಲೆಲ್ಲ ಅತಿಥಿ ಉಪನ್ಯಾಸಕರ ಮೂಲಕ ಪಾಠ ಮಾಡಿಸಲಾಗುತ್ತಿದೆ. ನಿಯೋಜನೆ ಆಧಾರದಲ್ಲೂ ಉಪನ್ಯಾಸಕರ ಸೇವೆ ಬಳಸಿಕೊಳ್ಳಲಾಗುತ್ತಿದೆ' ಎಂದು ಹೇಳಿದರು.
ಸ್ವಂತ ಕಟ್ಟಡಕ್ಕೆ ಕ್ರಮ: 'ಚಿಕ್ಕೆರೂರಿನಲ್ಲಿರುವ ಪಿಯು ಕಾಲೇಜು ಹೊರತುಪಡಿಸಿದರೆ, ಉಳಿದೆಲ್ಲ ಕಾಲೇಜುಗಳಿಗೆ ಸ್ವಂತ ಜಾಗ ಹಾಗೂ ಕಟ್ಟಡ ಇದೆ' ಎಂದು ಉಮೇಶಪ್ಪ ತಿಳಿಸಿದರು.
'ಶಿಥಿಲಗೊಂಡ ಕಟ್ಟಡ, ಕೊಠಡಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ವಿವೇಕ ಯೋಜನೆಯಡಿ ಕೆಲಸ ಪ್ರಗತಿಯಲ್ಲಿದೆ' ಎಂದರು.
ಖಾಸಗಿ ಕಾಲೇಜಿನತ್ತ ಮುಖ: ತಮ್ಮ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಆಸೆಯಿಂದ ಪೋಷಕರು, ಶಿಕ್ಷಣಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಜಿಲ್ಲೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಲವು ಸಮಸ್ಯೆಗಳು ಇರುವುದರಿಂದ, ಬಡವರು ಹಾಗೂ ಆರ್ಥಿಕ ಹಿಂದುಳಿದ ಜನರು ಸಹ ಖಾಸಗಿ ಕಾಲೇಜಿನತ್ತ ಮುಖ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ 114 ಪಿಯು ಕಾಲೇಜುಗಳು ನೋಂದಾಯಿತವಾಗಿವೆ. ಸರ್ಕಾರಿ ಕಾಲೇಜುಗಳ ಅವ್ಯವಸ್ಥೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಕಾಲೇಜುಗಳು, ಬೃಹತ್ ಕಟ್ಟಡ, ಮೂಲ ಸೌಕರ್ಯ ಹಾಗೂ ಕಾಯಂ ಶಿಕ್ಷಕರು ತಮ್ಮಲ್ಲಿ ಇರುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ.
ಹೆಚ್ಚುವರಿ ಶುಲ್ಕ ಹಾಗೂ ನಾನಾ ಸೇವೆಗಳ ಹೆಸರಿನಲ್ಲಿ ಹಲವು ಖಾಸಗಿ ಕಾಲೇಜುಗಳು, ವಿದ್ಯಾರ್ಥಿಗಳಿಂದ ಸುಲಿಗೆ ಮಾಡುತ್ತಿರುವ ಆರೋಪವಿದೆ.
'ಸರ್ಕಾರಿ ಕಾಲೇಜುಗಳನ್ನು ಸುಸಜ್ಜಿತವಾಗಿ ರೂಪಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಇಚ್ಛಾಶಕ್ತಿ ತೋರಬೇಕು. ಪ್ರತಿಯೊಬ್ಬ ಬಡ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ' ಎಂದು ಪೋಷಕರು ಹೇಳಿದರು.
ಸರ್ಕಾರಿ ಪಿಯು ಕಾಲೇಜು: 'ಅತಿಥಿ'ಗಳೇ ಗತಿ ಶುಲ್ಕ ಜಾಸ್ತಿ ಕಾರಣಕ್ಕೆ ಶಿಕ್ಷಣ ಮೊಟಕು ಶುದ್ಧ ನೀರು, ಶೌಚಾಲಯ, ಪ್ರಯೋಗಾಲಯ ಕೊರತೆ
ಬ್ಯಾಡಗಿ ಕಾಲೇಜಿನಲ್ಲಿ ಶೌಚಾಲಯದ ಕೊರತೆ ತೀವ್ರವಾಗಿದೆ. ಶಾಸಕರು ಮೂಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ.ದತ್ತು ಸಾಳುಂಕೆ ಉಪಾಧ್ಯಕ್ಷ ಕಾಲೇಜು ಅಭಿವೃದ್ಧಿ ಸಮಿತಿ
ಈ ಕಾಲೇಜಿಗೆ ಆಟದ ಮೈದಾನ ಇಲ್ಲ. ಕ್ರೀಡಾ ಚಟುವಟಿಕೆಗಳಿಂದ ಇಲ್ಲಿನ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಕೊಠಡಿಗಳ ನಿರ್ಮಾಣವೂ ಅವೈಜ್ಞಾನಿಕವಾಗಿದೆಶಂಕರ ಪೂಜಾರ ಪ್ರಾಚಾರ್ಯ
ಸುರಕ್ಷಿತೆ ದೃಷ್ಟಿಯಿಂದ ಕಾಲೇಜಿನ ಸುತ್ತಲೂ ಕಂಪೌಂಡ್ ಅವಶ‍್ಯವಾಗಿರುತ್ತದೆ. ವಿದ್ಯಾರ್ಥಿಗಳ ಸಂಖ್ಯೆೆ ಅನುಗುಣವಾಗಿ ಶೌಚಾಲಯ ಕೊರತೆಯಿದೆನಾಗನಗೌಡ ಕೊಣ್ತಿ ಉಪಾಧ್ಯಕ್ಷ ರಟ್ಟೀಹಳ್ಳಿ ಕಾಲೇಜು ಅಭಿವೃದ್ಧಿ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.