ಹಾವೇರಿ: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಂಬಳ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಮತ್ತು ಮಹಾರಾಷ್ಟ್ರದಲ್ಲಿ ಎತ್ತಿನ ಗಾಡಿ ಓಟ ಎಷ್ಟು ಪ್ರಸಿದ್ಧಿಯೋ ಹಾವೇರಿ ಜಿಲ್ಲೆಯಲ್ಲಿ ‘ಕೊಬ್ಬರಿ ಹೋರಿ ಸ್ಪರ್ಧೆ’ಯೂ ಅಷ್ಟೇ ಪ್ರಸಿದ್ಧಿ. ದೀಪಾವಳಿ ಹಬ್ಬ ಶುರುವಾದ ದಿನದಿಂದಲೇ ವಿವಿಧ ಕಡೆಗಳಲ್ಲಿ ಹೋರಿ ಸ್ಪರ್ಧೆ ಆಯೋಜಿಸಲಾಗುತ್ತದೆ. ಸ್ಪರ್ಧೆಯ ಸಂದರ್ಭದಲ್ಲಿ ಸಾವು–ನೋವುಗಳು ಸಂಭವಿಸುತ್ತಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಜಾಗೃತಿ ವಹಿಸುವ ಅಗತ್ಯವಿದೆ.
ಜಿಲ್ಲೆಯಲ್ಲಿ ನಡೆಯುವ ಕೊಬ್ಬರಿ ಹೋರಿ ಸ್ಪರ್ಧೆಯು ರಾಜ್ಯದಲ್ಲೇ ಪ್ರಖ್ಯಾತಿ ಪಡೆದಿದೆ. ಇಲ್ಲಿ ನಡೆಯುವ ಸ್ಪರ್ಧೆ ನೋಡಲು ದಾವಣಗೆರೆ, ಶಿವಮೊಗ್ಗ, ಧಾರವಾಡ ಜಿಲ್ಲೆಗಳಿಂದ ಮಾತ್ರವಲ್ಲ, ನೆರೆಯ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದಲೂ ಅಭಿಮಾನಿಗಳು ಬರುತ್ತಾರೆ.
ಹೋರಿಗಳ ಬೆನ್ನಿಗೆ ನಗದು, ಉಡುಗೊರೆ ವಸ್ತುಗಳನ್ನು ಕಟ್ಟಲಾಗಿರುತ್ತದೆ. ಈ ಹಬ್ಬಕ್ಕೆ ಯುವಕರ ದಂಡು ತಂಡ ಕಟ್ಟಿಕೊಂಡು ಚಲನಚಿತ್ರ ನಟರ, ದೇವರ ಹೆಸರುಗಳನ್ನು ಆ ಹೋರಿಗಳಿಗೆ ಇಟ್ಟು ಹೋರಿ ಹಬ್ಬಕ್ಕೆ ತಯಾರು ಮಾಡಿರುತ್ತಾರೆ. ಈ ಹಬ್ಬವನ್ನು ಕೊಬ್ಬರಿ ಹೋರಿ ಓಟ, ದನ ಬೆದರಿಸುವ ಸ್ಪರ್ಧೆ, ಹಟ್ಟಿ ಹಬ್ಬ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ಹೋರಿ ಬೆದರಿಸುವ ಸ್ಪರ್ಧೆ ಜಾನಪದ ಕ್ರೀಡೆಯಾಗಿದ್ದು, ಇಲ್ಲಿನ ಜನರ ಸಂಸ್ಕೃತಿಯ ಭಾಗವಾಗಿವೆ. ಕೆಲವು ಅಡ್ಡಿ ಆತಂಕಗಳ ನಡುವೆಯೂ ಈ ಸ್ಪರ್ಧೆಗಳು ಪ್ರತಿ ವರ್ಷ ಜಿಲ್ಲೆಯ ವಿವಿಧ ಕಡೆ ನಿರಂತರವಾಗಿ ನಡೆದುಕೊಂಡು ಬಂದಿವೆ.
ಹೋರಿ ಬೆದರಿಸುವ ಸ್ಪರ್ಧೆಗಾಗಿಯೇ ಹೋರಿಗಳನ್ನು ಮನೆ ಮಗನಂತೆ ಸಾಕುತ್ತಾರೆ. ಸರ್ವಾಲಂಕೃತಗೊಂಡ ರಾಸುಗಳನ್ನು ಭಾರಿ ಜನಸಂದಣಿಯ ನಡುವೆ ಓಡಿಸಲಾಗುತ್ತದೆ.
ಮೆಚ್ಚಿನ ಹೋರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆಯುತ್ತಾರೆ. ಶಿಳ್ಳೆ, ಕೇಕೆ ಹಾಕುತ್ತ, ಹರ್ಷೋದ್ಗಾರ ಮಾಡುತ್ತ ಹೋರಿಯನ್ನು ಹುರಿದುಂಬಿಸುತ್ತಾರೆ. ಹೋರಿಯ ಕೊರಳಿನಲ್ಲಿದ್ದ ಕೊಬ್ಬರಿಯನ್ನು ಹರಿಯಲು ಯುವಕರ ಗುಂಪು ಮುಗಿಬೀಳುತ್ತದೆ. ಕೆಲವು ಹೋರಿಗಳು ಜನರ ಗುಂಪನ್ನು ಭೇದಿಸುತ್ತಾ ನಾಗಾಲೋಟದಲ್ಲಿ ಮುನ್ನುಗ್ಗುತ್ತವೆ. ಈ ರೋಮಾಂಚಕಾರಿ ದೃಶ್ಯಗಳು ಪ್ರೇಕ್ಷಕರನ್ನು ಮೈನವಿರೇಳಿಸುತ್ತವೆ.
ಸಾವು–ನೋವುಗಳೂ ಉಂಟು: ಹೋರಿಗಳು ವೇಗವಾಗಿ ಜನರ ಮಧ್ಯದಲ್ಲಿ ಓಡುತ್ತವೆ. ಈ ಸಂದರ್ಭದಲ್ಲಿ ಜನರ ಮೇಲೆ ಹಾರುವುದರಿಂದ ಹಾಗೂ ಕೊಂಬಿನಿಂದ ತಿವಿಯುವುದರಿಂದ ಸಾಕಷ್ಟು ಜನ ಗಾಯಗೊಂಡಿರುವ ಉದಾಹರಣೆಗಳು ಇವೆ. ಸಾವುಗಳೂ ಸಂಭವಿಸಿದೆ.
2024ರ ಮಾರ್ಚ್ 6ರಂದು ಹಂಸಭಾವಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಬ್ಯಾಡಗಿ ತಾಲ್ಲೂಕಿನ ಮತ್ತೂರ ಗ್ರಾಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪ್ರಶಾಂತ ರಾಜನಹಳ್ಳಿ (16) ಮೃತಪಟ್ಟಿದ್ದರು. ಅದೇ ಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲಿ ಗಾಯಗೊಂಡು ಅರಳಿಕಟ್ಟಿ ಗ್ರಾಮದ ಮಂಜಪ್ಪ ಚನ್ನಪ್ಪನವರ (38) ಸಹ ಮೃತಪಟ್ಟಿದ್ದರು.
2011ರಲ್ಲಿ ಹಾನಗಲ್ ತಾಲ್ಲೂಕಿನಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇಬ್ಬರು ಮೃತಪಟ್ಟು, ಹಲವರಿಗೆ ಗಾಯಗಳಾಗಿದ್ದವು. ಹೀಗೆ ಪ್ರತಿ ವರ್ಷವೂ ಸ್ಪರ್ಧೆಗಳ ಸಂದರ್ಭದಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ. ಅದೇ ಕಾರಣಕ್ಕೆ ಜಾಗೃತಿ ವಹಿಸುವಂತೆ ಜಿಲ್ಲಾಡಳಿತ ಪ್ರತಿವರ್ಷವೂ ಎಚ್ಚರಿಕೆ ನೀಡುತ್ತಲೇ ಇದೆ.
ಹೋರಿ ಹಬ್ಬದ ವೀಕ್ಷಣೆಗೆ ಹೋಗಿದ್ದ ಹಲವು ಯುವಕರು ಮೃತಪಟ್ಟಿದ್ದರಿಂದ, ಅವರ ಮನೆಯ ಬಾಳುವ ‘ದೀಪ’ವೇ ಆರಿ ಹೋಗಿದೆ. ದೀಪಾವಳಿ ಆರಂಭವಾಗಿರುವುದರಿಂದ, ಹೋರಿ ಹಬ್ಬದ ಸ್ಪರ್ಧೆ ಬಗ್ಗೆ ಹೆಚ್ಚು ನಿಗಾವಹಿಸುವುದು ಉತ್ತಮ.
* ಸ್ಪರ್ಧೆ ಸಂದರ್ಭದಲ್ಲಿ ಹೋರಿಗಳ ಮೇಲಿನ ಕೊಬ್ಬರಿ ಕಿತ್ತುಕೊಳ್ಳುವ ಯುವಕರು ಹೆಚ್ಚು ಎಚ್ಚರ ವಹಿಸಬೇಕು
* ಸ್ಪರ್ಧೆ ನೋಡಲು ಬರುವವರು ಹೋರಿಗಳು ಹಾದು ಹೋಗುವ ಜಾಗದಲ್ಲಿ ನಿಲ್ಲಬಾರದು
* ಹೋರಿಗಳು ಓಡಿಬರುವ ಸಂದರ್ಭದಲ್ಲಿ ತಡೆಯಬಾರದು
* ಸ್ಪರ್ಧೆ ನಡೆಯುವ ಜಾಗದಲ್ಲಿ ಸುರಕ್ಷಿತ ಜಾಗವನ್ನು ಆಯ್ದುಕೊಂಡು ನಿಲ್ಲುವುದು ಒಳ್ಳೆಯದು
* ಸ್ಪರ್ಧೆ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸೇವೆ ಪಡೆಯುವುದು ಒಳ್ಳೆಯದು
* ಮಕ್ಕಳು ಹಾಗೂ ವೃದ್ಧರು ಸ್ಪರ್ಧೆ ಜಾಗಕ್ಕೆ ಹೋಗದಂತೆ ನೋಡಿಕೊಳ್ಳುವುದು ಉತ್ತಮ
ಕೇಕೆ ಶಿಳ್ಳೆ ಹೋರಿ ಬೆದರಿಸುವ ಸ್ಪರ್ಧೆ ಎಂದರೆ ಹಾವೇರಿ ಜಿಲ್ಲೆಯ ಜನರಿಗೆ ಪಂಚಪ್ರಾಣ. ಮನೆ ಮಗನಂತೆ ಸಾಕಿರುವ ಹೋರಿಗಳಿಗೆ ತರಹೇವಾರಿ ಹೆಸರಿಟ್ಟು ಕೂಗುತ್ತಾರೆ. ಹೋರಿ ಓಡುವ ಸಂದರ್ಭದಲ್ಲಿ ಅಭಿಮಾನಿಗಳ ಕೇಕೆ–ಶಿಳ್ಳೆಯ ಸದ್ದು ಜೋರಾಗಿರುತ್ತದೆ. ಯಜಮಾನ ರಾಕ್ ಸ್ಟಾರ್ ಕೊಲೆಗಾರ ಸರ್ದಾರ್ ಸಾಹುಕಾರ ಸೈನಿಕ ಡಾನ್ ನಾಯಕರ ಹುಲಿ ಸದಾಂ ಹಿಂದೂ ಹುಲಿ ಐರಾವತ ರಾಜಾಹುಲಿ ಹೌದ ಹುಲಿಯಾ ಹೆಸರುಗಳನ್ನು ಹೋರಿಗಳ ಮೇಲೆ ಬರೆದು ಸಿಂಗರಿಸಿ ಕೊಬ್ಬರಿ ಕಟ್ಟಿ ಓಡಿಸುವ ಅಖಾಡಕ್ಕೆ ಬಿಡುತ್ತಾರೆ. ಹೋರಿ ಜನರ ನಡುವೆ ನುಗ್ಗಿ ಬರುತ್ತಿದ್ದರೆ ಎದುರಿಗೆ ನೂರಾರು ಜನ ಕೊಬ್ಬರಿ ಹರಿಯುವ ಹುಮ್ಮಸ್ಸಿನಲ್ಲಿ ಮುಂದಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.