ADVERTISEMENT

ಹಾವೇರಿ: ಕೊರೊನಾಕ್ಕೆ ಜಗ್ಗದ ‘ಕಾಯಕ ಜೀವಿಗಳು‘

ಓದುಗರ ಸಂತೃಪ್ತಿಯಲ್ಲೇ ಆತ್ಮತೃಪ್ತಿ ಕಂಡುಕೊಂಡ ಪತ್ರಿಕಾ ಏಜೆಂಟರು ಮತ್ತು ವಿತರಕರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 1:46 IST
Last Updated 4 ಸೆಪ್ಟೆಂಬರ್ 2020, 1:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""
""
""
""

ಹಾವೇರಿ: ಕೊರೊನಾ ತುರ್ತು ಸಂದರ್ಭದಲ್ಲೂ ಸೋಂಕಿಗೆ ಧೃತಿಗೆಡದೆ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಾ,ಓದುಗರ ಮನೆ–ಮನೆಗೆ ಪತ್ರಿಕೆಗಳನ್ನು ಸುರಕ್ಷಿತವಾಗಿ ವಿತರಿಸಿ ಸೈ ಎನಿಸಿಕೊಂಡವರು ಪತ್ರಿಕಾ ಏಜೆಂಟರು ಮತ್ತು ವಿತರಕರು.

ಏಲಕ್ಕಿ ನಾಡಿನಲ್ಲಿದಿನದಿಂದ ದಿನಕ್ಕೆ ಪಾಸಿಟಿವ್‌ ಪ್ರಕರಣಗಳು ಏರಿಕೆಯಾಗುತ್ತಿದ್ದರೂ, ‘ಕೊರೊನಾ ವಾರಿಯರ್ಸ್‌’ಗಳಂತೆ ದಣಿವರಿಯದೆ ದುಡಿದ ಶ್ರಮಜೀವಿಗಳು ಇವರು.ಚಳಿ–ಮಳೆ–ಗಾಳಿ ಎನ್ನದೆ ನಿತ್ಯ ನಸುಕಿಗೆ ಎದ್ದು, ಪತ್ರಿಕಾ ಬಂಡಲ್‌ಗಳನ್ನು ಒಪ್ಪವಾಗಿ ಜೋಡಿಸಿಕೊಂಡು, ಸೈಕಲ್‌ ಮತ್ತು ಬೈಕ್‌ಗಳ ಮೂಲಕ ಗಲ್ಲಿ, ಓಣಿ, ಗುಡ್ಡಗಳಲ್ಲಿ ಸಂಚರಿಸುತ್ತಾ, ಪ್ರೀತಿಯ ಓದುಗರಿಗೆ ಮೆಚ್ಚಿನ ಪತ್ರಿಕೆ ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ದುಡಿಮೆಯೇ ದೇವರು:

ADVERTISEMENT

‘ದುಡಿಮೆಯೇ ದೇವರು’ ಎಂಬುದು ಇವರ ಮೂಲ ಮಂತ್ರ. ಓದುಗರ ಸಂತೃಪ್ತಿಯಲ್ಲೇ ಆತ್ಮತೃಪ್ತಿ ಕಂಡುಕೊಂಡಿರುವ ಪತ್ರಿಕಾ ವಿತರಕರುಕಾಲ ಕಾಲಕ್ಕೆ ಎದುರಾಗುವ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಮೂಲಕ ‘ಪತ್ರಿಕಾ ಧರ್ಮ’ವನ್ನು ಎತ್ತಿ ಹಿಡಿದಿದ್ದಾರೆ.ಪತ್ರಿಕೆಗಳಿಂದ ಸೋಂಕು ಹರಡುತ್ತದೆ ಎಂದು ಗಾಳಿಸುದ್ದಿ ಹಬ್ಬಿದಾಗ, ಪತ್ರಿಕಾ ಸಂಸ್ಥೆಗಳು ಕೈಗೊಂಡ ಸುರಕ್ಷತಾ ಕ್ರಮಗಳನ್ನು ಓದುಗರಿಗೆ ಅರ್ಥ ಮಾಡಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಅಪಾರ.

‘ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ನಮಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು. ಲಾಕ್‌ಡೌನ್‌ ವೇಳೆಯೂ ದುಡಿದ ನಮಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು’ ಎಂಬುದುಪತ್ರಿಕಾ ಏಜೆಂಟರು ಮತ್ತು ವಿತರಕರ ಒಕ್ಕೊರಲ ಒತ್ತಾಯ.

ಓದುಗರಿಂದ ವಿಶೇಷ ಗೌರವ:

‘ದಿನನಿತ್ಯದ ಪ್ರಚಲಿತ ವಿದ್ಯಮಾನಗಳನ್ನು ಓದುಗರ ಮನೆಗೆ ತಲುಪಿಸುವುದೇ ಹೆಮ್ಮೆಯ ಸಂಗತಿ. ಕೊರೊನಾ ಇದ್ದಾಗಲೂ ಪತ್ರಿಕೆ ಹಂಚಿದ್ದರಿಂದ ಗ್ರಾಹಕರು ವಿಶೇಷ ಗೌರವ ಕೊಡುತ್ತಿದ್ದಾರೆ. ಇದು ನಮಲ್ಲಿ ಕಾಯಕ ನಿಷ್ಠೆಯನ್ನು ಹೆಚ್ಚಿಸುತ್ತಿದೆ’ ಎನ್ನುತ್ತಾರೆ ಚಿಕ್ಕೇರೂರ ಗ್ರಾಮದ ಸುರೇಶ ಕಂಪ್ಲಿ.

ಸುರೇಶ ಕಂಪ್ಲಿ

‘13 ವರ್ಷದಿಂದ ಪ್ರಜಾವಾಣಿ ವಿತರಕನಾಗಿದ್ದೇನೆ. ನಸುಕಿನಲ್ಲಿಯೇ ನಮ್ಮ ಕೆಲಸ ಪ್ರಾರಂಭವಾಗುವುದರಿಂದ ವೃತ್ತಿಯ ಜೊತೆಗೆ ದೇಹಕ್ಕೆ ವ್ಯಾಯಾಮವೂ ಆಗುತ್ತದೆ. ಪತ್ರಿಕೆ ಓದುವುದರಿಂದ ಕೊರೊನಾ ಹರಡುತ್ತದೆ ಎಂಬ ತಪ್ಪು ಕಲ್ಪನೆ ಗ್ರಾಹಕರಲ್ಲಿತ್ತು. ಆದರೂ ಅವರನ್ನು ಪತ್ರಿಕೆ ಓದುವಂತೆ ಮನವೊಲಿಸುವಲ್ಲಿ ಯಶಸ್ವಿಯಾದೆವು ’ ಎನ್ನುತ್ತಾರೆ ಹಂಸಭಾವಿಯಸಂದೀಪ ಬಾಸೂರ.

ಸಂದೀಪ ಬಾಸೂರ

23 ರಸ್ತೆ ಬಂದ್‌:

ಸಿದ್ರಾಮಗೌಡ ಮೆಳ್ಳಾಗಟ್ಟಿ

‘ಕೊರೊನಾ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳು ಬಂದಿವೆ. ಪಟ್ಟಣದಲ್ಲಿ 23 ಮುಖ್ಯ ರಸ್ತೆಗಳು ಸೀಲ್‌‌ ಡೌನ್ ಆದ ಸಂದರ್ಭದಲ್ಲಿ ಕೆಲವು ಹುಡುಗರು ಬಾರದೇ ಇರುವಾಗ ನಾನೇ ಹೋಗಿ ಪತ್ರಿಕೆ ಹಂಚಿದ್ದೇನೆ. ಅಲ್ಲದೆ ಸೀಲ್‌ಡೌನ್‌ ವೇಳೆ ಪೊಲೀಸರ ಕಿರಿಕಿರಿ ಅನುಭವಿಸಿದ್ದೇವೆ. ಪತ್ರಿಕೆಗಳನ್ನು ಪ್ರಾಮಾಣಿಕವಾಗಿ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ತಲುಪಿಸುವ ಕಾರ್ಯ ಮಾಡಿರುವ ತೃಪ್ತಿ ನನಗಿದೆ’ ಎನ್ನುತ್ತಾರೆ ಶಿಗ್ಗಾವಿಯಸಿದ್ರಾಮಗೌಡ ಮೆಳ್ಳಾಗಟ್ಟಿ.

ಸಂಕಪ್ಪ ಮಾರನಾಳ

‘ಲಾಕಡೌನ್ ಸಂದಭ೯ದಲ್ಲಿ ಬಹಳ ತೊಂದರೆ ಕಷ್ಟ, ನಷ್ಟ ಅನುಭವಿಸಿದ್ದೇವೆ. ಕೆಲವರು ಸೋಂಕಿಗೆ ಹೆದರಿದಾಗ, ಅವರಿಗೆ ಆತ್ಮಸ್ಥೈರ್ಯ ತುಂಬಿದ್ದೇವೆ.ನನಗೆ ಕೋರೋನಾ ಪಾಸಿಟಿವ್ ಆದಾಗ ಕೂಡ ಪತ್ರಿಕೆ ನಿಲ್ಲಿಸಿಲ್ಲ. ನಿಜವಾಗಿಯೂ ಪತ್ರಿಕೆ ಹಾಕುವ ಹುಡುಗರಿಗೆ ಒಂದು ಸಲಾಂ’ ಎನ್ನುತ್ತಾರೆ ರಾಣೆಬೆನ್ನೂರಿನ ಸಂಕಪ್ಪ ಮಾರನಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.