ADVERTISEMENT

ತಿಳವಳ್ಳಿ | ಶೌಚಾಲಯ ಇಲ್ಲದೆ ಪರದಾಟ: ಪ್ರಮುಖ ತಾಣಗಳ ಬಳಿಯೇ ಮಲ, ಮೂತ್ರ ವಿಸರ್ಜನೆ

ಮಾಲತೇಶ ಆರ್
Published 28 ಫೆಬ್ರುವರಿ 2024, 4:41 IST
Last Updated 28 ಫೆಬ್ರುವರಿ 2024, 4:41 IST
<div class="paragraphs"><p>ತಿಳವಳ್ಳಿಯ ಹರ್ಡೀಕರ ಸರ್ಕಲ್ ಪಕ್ಕದ ಕಟ್ಟಡಗಳ ಹಿಂದೆ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದರು</p></div>

ತಿಳವಳ್ಳಿಯ ಹರ್ಡೀಕರ ಸರ್ಕಲ್ ಪಕ್ಕದ ಕಟ್ಟಡಗಳ ಹಿಂದೆ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದರು

   

ತಿಳವಳ್ಳಿ: ಗ್ರಾಮದಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರು ಇಲ್ಲದೆ ಜನರು ಬೇಸತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ವಹಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.

ಗ್ರಾಮದ ನಿವಾಸಿಗಳು ಹಾಗೂ ಪ್ರಯಾಣಿಕರಿಗೆ ಸಮರ್ಪಕವಾದ ಮೂತ್ರಾಲಯ ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲ. ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಾತ್ರ ಶೌಚಾಲಯವಿದ್ದು, ಸಮರ್ಪಕ ನಿರ್ವಹಣೆ ಇಲ್ಲದೆ ಹದಗೆಟ್ಟಿದೆ. ಖಾಸಗಿ ಬಸ್ ನಿಲ್ದಾಣದಲ್ಲೂ ಸಾರ್ವಜನಿಕ ಶೌಚಾಲಯ ಇರದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ADVERTISEMENT

ಬ್ಯಾಡಗಿ, ಹಿರೇಕೆರೂರು ಮತ್ತು ಸೊರಬ ತಾಲ್ಲೂಕಿನ ಕೆಲವು ಗ್ರಾಮಗಳ ಜನರು ತಿಳವಳ್ಳಿಗೆ ವ್ಯಾಪಾರಕ್ಕಾಗಿ ಬರುತ್ತಾರೆ. ಮೂತ್ರ ಹಾಗೂ ಮಲ ವಿಸರ್ಜನೆಗೆ ಹರ್ಡೀಕರ್ ಸರ್ಕಲ್‌ನಲ್ಲಿರುವ ಕಟ್ಟಡಗಳ ಹಿಂಭಾಗಕ್ಕೆ ಹೋಗುವುದು ಅನಿವಾರ್ಯವಾಗಿದೆ. ಮಹಿಳೆಯರಿಗಂತೂ ಇದು ತೀವ್ರ ಸಮಸ್ಯೆ ತಂದೊಡ್ಡಿದೆ. ಪ್ರಮುಖ ವೃತ್ತಗಳಲ್ಲಿ ಶೌಚಾಲಯ ಇಲ್ಲದಿರುವುದು ಆಡಳಿತ ವ್ಯವಸ್ಥೆ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

‘ಇಲ್ಲಿ ಒಂದು ಪ್ರಥಮ ದರ್ಜೆ ಕಾಲೇಜು, ಒಂದು ಪದವಿ ಪೂರ್ವ ಕಾಲೇಜು, ಒಂದು ಐಟಿಐ ಕಾಲೇಜು, ನಾಲ್ಕು ಪ್ರೌಢಶಾಲೆಗಳು, ಒಂಬತ್ತು ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಶಾಲೆಗಳಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು  ಹರ್ಡೀಕರ್ ಸರ್ಕಲ್ ಸುತ್ತ ಓಡಾಡುತ್ತಾರೆ. ಹಲವರು ಅನಿವಾರ್ಯವಾಗಿ ಅಲ್ಲಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ದುರ್ವಾಸನೆ ಹರಡುತ್ತಿದೆ. ಗ್ರಾಮ ಪಂಚಾಯ್ತಿಯಿಂದ ಬೇಗನೆ ಶೌಚಾಲಯ ಕಟ್ಟಿಸಬೇಕು’ ಎಂದು ಸ್ಥಳೀಯ ನಿವಾಸಿ ಮಾರುತಿ ಈಳಿಗೇರ ಆಗ್ರಹಿಸಿದರು.

ಕುಡಿಯುವ ನೀರಿನ ಸಮಸ್ಯೆ

‘ಗ್ರಾಮದ ಆರೇರ ಓಣಿಯಲ್ಲಿ 15 ದಿನಗಳಿಂದ ಮಣ್ಣುಮಿಶ್ರಿತ ನೀರು ಬರುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯ್ತಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಬರಗಾಲದ ಕಾರಣ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದ್ದು, ಮಣ್ಣುಮಿಶ್ರಿತ ನೀರನ್ನು ಕುಡಿಯಲಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಬೇಗೆ ಕ್ರಮ ವಹಿಸಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಘವೇಂದ್ರ ನರಸೋಜಿ.

ಸರ್ಕಲ್ ಸುತ್ತ ಗ್ರಾಮ ಪಂಚಾಯ್ತಿಗೆ ಸೇರಿದ ಜಾಗ ಇಲ್ಲದ ಕಾರಣ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಆಗುತ್ತಿಲ್ಲ.
-ಕುಮಾರ ಲಕ್ಮೋಜಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.