ಹಾವೇರಿ: ರಾಜ್ಯ ಮಟ್ಟದ ತೃತೀಯ ‘ಕರ್ನಾಟಕ ಕುಸ್ತಿ ಹಬ್ಬ’ದ ಸಮಾರೋಪ ಸಮಾರಂಭ ಮಾರ್ಚ್ 5ರಂದು ಸಂಜೆ 4 ಗಂಟೆಗೆ ಶಿಗ್ಗಾವಿಯ ಶ್ರೀ ರಂಭಾಪುರಿ ಜಗದ್ಗುರು ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಜರುಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕುಸ್ತಿ ಸಮಾರೋಪದ ಅಂಗವಾಗಿ ಅಂತರರಾಷ್ಟ್ರೀಯ ಮಹಿಳಾ ಮತ್ತು ಪುರುಷ ಕುಸ್ತಿ ಪಟುಗಳಿಂದ ಪ್ರದರ್ಶನ ಪಂದ್ಯಗಳನ್ನು ಆಯೋಜಿಸಲಾಗಿದೆ.
ಓಲಿಂಪಿಕ್ ಕುಸ್ತಿ ಪದಕ ವಿಜೇತೆ ಅಂಗೇರಿಯ ಪೈಲ್ವಾನ್ ನೇಮಿತಾ ಜಸ್ಮಿತ್ ಜೊತೆ ವಿಶ್ವ ಕುಸ್ತಿ ಪದಕ ವಿಜೇತೆ ಪೈಲ್ವಾನ್ ಲಲಿತಾ ಶರವಾತ್ ಜೋಡಿ ಕುಸ್ತಿ ಪಂದ್ಯ ಹಾಗೂ ವಿಶ್ವ ಕುಸ್ತಿ ಪದಕ ವಿಜೇತರಾದ ಪೈಲ್ವಾನ್ ಅನಸ್ತಾನಾ ಉಕ್ರೇನ್ ಜೊತೆ ಪೈಲ್ವಾನ್ ಪ್ರಿಯಾ ಹರಿಯಾಣ ಜೋಡಿ ಕುಸ್ತಿ ಹಾಗೂ ಪೈಲ್ವಾನ್ ತೇತಿನಾ ಉಕ್ರೇನ್ ಜೊತೆ ಹರಿಯಾಣದ ಪೈಲ್ವಾನ್ ಕವಿತಾ ಪರಮಾರಾ ಜೋಡಿ ಪ್ರದರ್ಶನ ಕುಸ್ತಿಗಳು ಜರುಗಲಿದೆ.
ಅಂತರರಾಷ್ಟ್ರೀಯ ಕುಸ್ತಿಪಟು ಪೈಲ್ವಾನ್ ಹುಸೇನ್ ರುಸ್ತುಂ ಎ ಇರಾನ್, ಭಾರತ ಕೇಸರಿ ಹರಿಯಾಣದ ಪೈಲ್ವಾನ್ ಉಮೇಶ ಚೌಧರಿ, ಮಧುರಾ ಚೌಧರಿ ಜೋಡಿ, ಅಂತರರಾಷ್ಟ್ರೀಯ ಕೇಸರಿ ಸೊಲ್ಲಾಪುರದ ಪೈಲ್ವಾನ್ ಮಹೇಂದ್ರ ಗಾಯಕವಾಡ, ಭಾರತ ಕೇಸರಿ ಹರಿಯಾಣದ ಪೈಲ್ವಾನ್ ಮಂಜೀತ್ ಐತ್ರಿ ಜೋಡಿ, ಪಂಜಾಬ ಕೇಸರಿ ಪೈಲ್ವಾನ್ ಕವಲಜೀತ್ ಸಿಂಗ್ ಹಾಗೂ ರಾಷ್ಟ್ರೀಯ ಚಾಂಪಿಯನ್ ಮಹಾರಾಷ್ಟ್ರದ ಪೈಲ್ವಾನ್ ಸಿಕಂದರ್ ಶೇಖ್ ಜೋಡಿ ಸೆಣಸಲಿದ್ದಾರೆ.
ಇರಾನಿ ರಾಷ್ಟ್ರೀಯ ಚಾಂಪಿಯನ್ ಪೈಲ್ವಾನ್ ಆಲಿ ಮೇಹರಿ ಇರಾನ್ ಹಾಗೂ ಮಹಾರಾಷ್ಟ್ರದ ಪೈಲ್ವಾನ್ ಸಾಗರ ಬಿರಾಜಾದಾರ ಜೋಡಿ, ಭಾರತ ಕೇಸರಿ ಸೌವಾರ್ ಕುಸ್ತಿ ಅಖಾಡದ ಪೈಲ್ವಾನ ಸೋನು ದೆಹಲಿ ಹಾಗೂ ರಾಷ್ಟ್ರೀಯ ಬಂಗಾರ ಪದಕ ವಿಜೇತ ಪೈಲ್ವಾನ್ ಮೌಲ್ವಿ ಕೊಕಾಟೆ ಜೋಡಿ ಪ್ರದರ್ಶನ ಕುಸ್ತಿ ನಡೆಯಲಿದೆ.
ರಾಷ್ಟ್ರೀಯ ಪದಕ ವಿಜೇತ ಪೈಲ್ವಾನ್ ವಿಶಾಲ ಬಂಡು ಮೋಟಾ ಅಖಾಡ ಜೊತೆ ಮಹಾರಾಷ್ಟ್ರ ಕೇಸರಿ ಅಹಮದ್ ನಗರದ ಪೈಲ್ವಾನ್ ಹರ್ಷಿದ ಸದ್ಗೀರ ಹಾಗೂ 2022ರ ಮಹಾರಾಷ್ಟ್ರ ಕೇಸರಿ ಪುಣೆಯ ಪೈಲ್ವಾನ್ ಶಿವರಾಜ ರಾಕ್ನಿ ಜೊತೆ ಉತ್ತರ ಪ್ರದೇಶದ ಕೇಸರಿ ಪೈಲ್ವಾನ್ ಕುಲ್ವಾ ಹಾಗೂ ಅಂತರರಾಷ್ಟ್ರೀಯ ಕುಸ್ತಿಪಟು ಪೈಲ್ವಾನ್ ಆಲಿ ಸೇಖ ಆಸ್ತೆ ಮೊಟ್ಲಾಕ್ ಜೊತೆ ಭಾರತ ಕೇಸರಿ ಉತ್ತರ ಪ್ರದೇಶದ ಪೈಲ್ವಾನ್ ಜಾಯಿಂಟಿ ಸೆಣಸಲಿದ್ದಾರೆ.
ಉಪ ಮಹಾರಾಷ್ಟ್ರ ಕೇಸರಿ ಹರಿಯಾಣದ ಪೈಲ್ವಾನ್ ಬೋಲೊ ಠಾಕೂರ್ ಜೊತೆ ಕರ್ನಾಟಕ ಕೇಸರಿ ರಾಣೆಬೆನ್ನೂರಿನ ಪೈಲ್ವಾನ್ ಕಾರ್ತಿಕ ಕಾಟೆ ಹಾಗೂ ಕಾಮನ್‍ವೆಲ್ತ್ ಬೆಳ್ಳಿ ಪದಕ ವಿಜೇತ ಕುಸ್ತಿಪಟು ಧಾರವಾಡದ ಪೈಲ್ವಾನ್ ಮಹ್ಮದ್ ರಫೀಕ್ ಹೊಳಿ ಜೊತೆ ರಾಷ್ಟ್ರೀಯ ಚಾಪಿಂಯನ್ ಹರಿಯಾಣದ ಪೈಲ್ವಾನ್ ಅಮಿತಕುಮಾರ ಜೋಡಿ ಪ್ರದರ್ಶನ ಕುಸ್ತಿ ಆಯೋಜಿಸಲಾಗಿದೆ.
‘170 ಬಾಲಕಿಯರು ಭಾಗಿ’
2018-19ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಭಾರತೀಯ ಶೈಲಿಯ ಕುಸ್ತಿ ಹಬ್ಬ ಬೆಳಗಾವಿಯಲ್ಲಿ, 2019-20ರಲ್ಲಿ ದ್ವಿತೀಯ ಕುಸ್ತಿ ಹಬ್ಬ ಧಾರವಾಡದಲ್ಲಿ ಹಾಗೂ ತೃತಿಯ ಕರ್ನಾಟಕ ಕುಸ್ತಿ ಹಬ್ಬ ಶಿಗ್ಗಾವಿಯಲ್ಲಿ ನಡೆಯುತ್ತಿದೆ. ಶಿಗ್ಗಾವಿಯಲ್ಲಿ ನಡೆಯುತ್ತಿರುವ ಕುಸ್ತಿ ಹಬ್ಬದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 680 ಬಾಲಕರು ಹಾಗೂ 170 ಬಾಲಕಿಯರು ಕುಸ್ತಿ ಹಬ್ಬದಲ್ಲಿ ಭಾಗವಹಿಸಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.