ಹಾವೇರಿ: ‘ಮನುಷ್ಯ ಜೀವನದಲ್ಲಿ ಪುರುಷಾರ್ಥಗಳನ್ನು ಸಂಪಾದಿಸಿಕೊಂಡು ಬಾಳಬೇಕು. ಸತ್ಯ, ಶುದ್ಧ ಕಾಯಕದಿಂದ ಶ್ರೇಯಸ್ಸು ಸಾಧ್ಯ. ಪ್ರಗತಿಗೆ ಮೂಲ ಪರಿಶ್ರಮ ಅತ್ಯಂತ ಅಗತ್ಯವಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಮಂಗಳವಾರ ತಮ್ಮ ಪೀಠಾರೋಹಣದ 32ನೇ ವರ್ಷದ ವರ್ಧಂತಿ ಹಾಗೂ ಶ್ರೀ ವೀರಭದ್ರಸ್ವಾಮಿ ಮಾಲತೇಶಸ್ವಾಮಿ ಮಂಗಲ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ದೇವರು, ಧರ್ಮ ಮತ್ತು ಶ್ರೀಗುರುವಿನಲ್ಲಿ ನಂಬಿಗೆ-ಶೃದ್ಧೆಯನ್ನಿಟ್ಟರೆ ಸತ್ಫಲ ಪ್ರಾಪ್ತವಾಗುತ್ತದೆ. ನಾಗನೂರ ಗ್ರಾಮದಲ್ಲಿ ಈ ಹಿಂದೆ ಜಗದ್ಗುರುಗಳವರ 6ನೇ ವರ್ಧಂತಿ ಮಹೋತ್ಸವ ಆಚರಿಸಲಾಗಿತ್ತು. ಇಂದು ಮತ್ತೆ 32ನೇ ವರ್ಷದ ಪೀಠಾರೋಹಣ ವರ್ಧಂತಿ ಎರಡನೇಯ ಅವಧಿಗೆ ಪ್ರಾಪ್ತವಾಗಿರುವುದು ಗ್ರಾಮಸ್ಥರೆಲ್ಲರ ಶ್ರದ್ಧಾ-ನಿಷ್ಠೆ-ಭಕ್ತಿಯೇ ಕಾರಣವೆಂದು ಹರುಷ ವ್ಯಕ್ತಪಡಿಸಿದರು.
ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ಬ್ಯಾಡಗಿಯ ಶೇಖರಗೌಡ ಪಾಟೀಲ ಪಾಲ್ಗೊಂಡಿದ್ದರು. ಬಂಕಾಪುರ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು 2014ನೇ ಸಾಲಿನ ಶ್ರೀ ಪೀಠದ ವಾರ್ತಾ ಸಂಕಲನ ಬಿಡುಗಡೆ ಮಾಡಿದರು. ಕರ್ಜಗಿ ಶಿವಯೋಗಿ ಶಿವಾಚಾರ್ಯರು 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಕೂಡಲ ಗುರುಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ರಾಣೆಬೆನ್ನೂರು ಶಿವಯೋಗಿ ಶಿವಾಚಾರ್ಯರು, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯರು, ಹೇರೂರು ನಂಜುಂಡ ಪಂಡಿತಾರಾದ್ಯ ಶಿವಾಚಾರ್ಯರು, ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯರು, ಕುರವತ್ತಿ ಸಿದ್ಧನಂದೀಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
ಮೂರ್ತಿ ದಾನಿಗಳಾದ ಪುಟ್ಟಪ್ಪ ಓಂಕಾರಣ್ಣನವರ, ಚೆನ್ನಮ್ಮ ಬ್ಯಾಳಿ, ಬಸವರಾಜ ಬ್ಯಾಳಿ, ಶಿವಪ್ಪ ಪರಶೆಟ್ಟಿ, ಫಕ್ಕೀರೇಶ ಬಡಿಗೇರ ಸೇರಿದಂತೆ ಸಮಸ್ತ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು. ಗ್ರಾಮ ಪಂಚಾಯತ ಅಧ್ಯಕ್ಷ ಸಂಗಮೇಶ ಬ.ಪರಶೆಟ್ಟಿ ಸ್ವಾಗತಿಸಿದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಸಂಭ್ರಮದಿಂದ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.